ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹದೇವಪುರದಲ್ಲಿ ಕಾಲಮಿತಿಯಲ್ಲಿ ಅಭಿವೃದ್ಧಿ ಯೋಜನೆ ಪೂರ್ಣ: ಸಚಿವ ಅಶ್ವತ್ಥನಾರಾಯಣ

ಮಹದೇವಪುರ: ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಆಶ್ವಾಸನೆ
Published : 7 ಸೆಪ್ಟೆಂಬರ್ 2022, 19:28 IST
ಫಾಲೋ ಮಾಡಿ
Comments

ಬೆಂಗಳೂರು: ‘ಮಹದೇವಪುರದಲ್ಲಿ ಅಭಿವೃದ್ಧಿ ಯೋಜನೆಗಳಲ್ಲಿ ಐಟಿ ಕಂಪನಿಗಳ ಸಹಭಾಗಿತ್ವ ಪಡೆಯಲಾಗುವುದು. ಇದರೊಂದಿಗೆ ಎಲ್ಲ ಯೋಜನೆಗಳನ್ನೂ ಕಾಲಮಿತಿಯಲ್ಲಿ ಮುಗಿಸಲಾಗುವುದು’ ಎಂದು ಐಟಿ–ಬಿಟಿ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

ಮಹದೇವಪುರ ವಲಯದ ಐಟಿ ಕಂಪನಿಗಳ ಪ್ರಮುಖರ ಅಹವಾಲುಗಳನ್ನು ಆಲಿಸಿದ ಬಳಿಕ ಮಾತನಾಡಿದ ಅವರು, ’ಐಟಿ-ಬಿಟಿ ಕಂಪನಿಗಳ ಅಹವಾಲುಗಳನ್ನು ಪರಿಹರಿಸಲೆಂದೇ ವಿಷನ್ ಗ್ರೂಪ್‌ಗಳನ್ನು ರಚಿಸಲಾಗಿದೆ. ಇದಕ್ಕೆ ಐಟಿ ಕಂಪನಿಗಳನ್ನು ನಡೆಸಿರುವವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿದೆ. 'ಬೆಂಗಳೂರು ಬ್ರಾಂಡ್ ಅನ್ನು ಎಲ್ಲರೂ ಸೇರಿ ಉಳಿಸೋಣ. ಇದಕ್ಕೆ ಅಪಕೀರ್ತಿ ತರುವುದು ಬೇಡ’ ಎಂದರು.

ಯೋಜನೆಗಳ ಅನುಷ್ಠಾನದಲ್ಲಿ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲಾಗುವುದು. ಜತೆಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ 'ಎಲ್ಸಿಟಾ' ಮಾದರಿಯ ವ್ಯವಸ್ಥೆಯನ್ನು ಇಲ್ಲೂ ಆರಂಭಿಸುವುದನ್ನು ಗಂಭೀರವಾಗಿ ಪರಿಶೀಲಿಸಲಾಗುವುದು. ಮಳೆ ನೀರು ಸರಾಗವಾಗಿ ಹರಿದು ಹೋಗಲು ಇರುವ ಕೆ-100 ವ್ಯವಸ್ಥೆಯನ್ನು ಮಹದೇವಪುರದಲ್ಲೂ ಅಳವಡಿಸಿಕೊಳ್ಳಲಾಗುವುದು. ಈ ಭಾಗಕ್ಕೆ ಕಾವೇರಿ ಕುಡಿಯುವ ನೀರು ಪೂರೈಕೆಯ 5ನೇ ಹಂತದ ಮೂಲಕ ನೀರು ಸರಬರಾಜು ಮಾಡಲಾಗುವುದು. ಉದ್ಯಮಿಗಳೂ ಆತಂಕಕ್ಕೆ ಒಳಗಾಗುವುದು ಬೇಡ’ ಎಂದರು.

ಐಟಿ ಕಂಪನಿಗಳ ವಲಯದಿಂದ ಗೋಲ್ಡ್‌ಮ್ಯಾನ್‌ ಸ್ಯಾಕ್ಸ್‌ನ ರವಿಕೃಷ್ಣನ್, ಇನ್ಫೊಸಿಸ್‌ನ ಸುನೀಲ್‌ಕುಮಾರ್‌ ಮತ್ತು ಬಿ.ಸಿ. ಶೇಷಾದ್ರಿ‌, ವೆಲ್ಸ್‌ಫಾರ್ಗೋ ಕಂಪನಿಯ ಅರಿಂದಮ್‌ ಬ್ಯಾನರ್ಜಿ, ವಿಪ್ರೋದ ಪರಮಿಂದರ್ ಕಾಕ್ರಿಯಾ, ಎಂಫಸಿಸ್‌ನ ದೀಪಾ ನಾಗರಾಜ್‌, ಇಂಟೆಲ್‌ನ ಮಾನಸ್‌ ದಾಸ್‌, ವಿಎಂ ವೇರ್‌ನ ರಾಮಕುಮಾರ್ ನಾರಾಯಣನ್ ಮತ್ತು ಜಯನ್‌ ದೇಸಾಯಿ, ಟಿಸಿಎಸ್‌ನ ಬೆಂಗಳೂರು ಮುಖ್ಯಸ್ಥ ಸುನೀಲ್ ದೇಶಪಾಂಡೆ, ಆಕ್ಸೆಂಚರ್‌ನ ಅಜಯ್ ವಿಜ್‌, ಸೊನಾಟಾ ಸಾಫ್ಟ್‌ವೇರ್‌ನ ಬಾಲಾಜಿ ಕುಮಾರ್, ಫಿಲಿಪ್ಸ್‌ನ ಅರವಿಂದ್ ವೈಷ್ಣವ್, ಸೊಲೇಸ್‌ನ ಮಹಾದೇವನ್, ನಾಸ್ಕಾಂನ ಕೆ.ಎಸ್. ವಿಶ್ವನಾಥನ್ ಮತ್ತು ಭಾಸ್ಕರ್ ವರ್ಮಾ ಸಭೆಯಲ್ಲಿ ಇದ್ದರು.

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಗರವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಅವುಗಳನ್ನು ಬಗೆಹರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

‘ಐಟಿ ಕಂಪನಿಗಳು ಧೃತಿಗೆಡಬಾರದು’

‘ಬೆಂಗಳೂರು ಬ್ರಾಂಡ್ ಎಲ್ಲಿಗೂ ಹೋಗುವುದಿಲ್ಲ. ಇಂಥ ಮಹಾಮಳೆ ಬಂದರೆ ಎಂತಹ ನಗರವಾದರೂ ಸ್ತಬ್ಧವಾಗುತ್ತದೆ. ಶೇ 80ಕ್ಕಿಂತ ಹೆಚ್ಚಿನ ಭಾಗಕ್ಕೆ ಇಲ್ಲಿ ಏನೂ ಆಗಿಲ್ಲ. ಮಹದೇವಪುರದ ಭಾಗದಲ್ಲಿ ಆಗಿರುವ ಹಾನಿ ಅನಿರೀಕ್ಷಿತ. ಇದರಿಂದ ಐಟಿ ಕಂಪನಿಗಳು ಧೃತಿಗೆಡಬಾರದು’

- ಕ್ರಿಸ್‌ ಗೋಪಾಲಕೃಷ್ಣನ್,ಮುಖ್ಯಸ್ಥ, ಐಟಿ ವಿಷನ್ ಗ್ರೂಪ್

***

‘ಕಳವಳ ವ್ಯಕ್ತಪಡಿಸಿದ್ದಾರೆ’

ನಗರದ ಸಮಸ್ಯೆಗಳ ಬಗ್ಗೆ ಉದ್ಯಮಿ ಮೋಹನ್‌ದಾಸ್‌ ಪೈ ಅವರು ಟ್ವೀಟ್‌ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಶ್ವತ್ಥನಾರಾಯಣ, ‘ನಗರದ ಬಗ್ಗೆ ಅವರು ಒಳ್ಳೆಯ ಟ್ವೀಟ್‌ಗಳನ್ನೂ ಮಾಡಿದ್ದಾರೆ. ಅದನ್ನು ಮರೆತು ಈಗಿನ ಟ್ವೀಟ್‌ಗಳ ಬಗ್ಗೆಯೇ ಚರ್ಚಿಸುವುದು ಸರಿಯಲ್ಲ. ನಗರದ ಬಗ್ಗೆ ಕಳಕಳಿ ಇಟ್ಟುಕೊಂಡೇ ಅವುಗಳನ್ನು ಮಾಡಿದ್ದಾರೆ. ಅವರ ಕಳವಳವನ್ನು ಅರ್ಥ ಮಾಡಿಕೊಳ್ಳಬೇಕಷ್ಟೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT