ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಹಕರ ಮೇಲೆ ಆರ್ಬರ್‌ ಬ್ರೀವಿಂಗ್‌ ಪಬ್‌ ಬೌನ್ಸರ್‌ಗಳಿಂದ ಹಲ್ಲೆ: ನಾಲ್ವರ ಬಂಧನ

ಆರ್ಬರ್‌ ಬ್ರೀವಿಂಗ್‌ ಪಬ್‌ನಲ್ಲಿ ಗಲಾಟೆ
Published 25 ಜುಲೈ 2024, 16:28 IST
Last Updated 25 ಜುಲೈ 2024, 16:28 IST
ಅಕ್ಷರ ಗಾತ್ರ

ಬೆಂಗಳೂರು: ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಬರ್‌ ಬ್ರೀವಿಂಗ್‌ ಪಬ್‌ನಲ್ಲಿ ಬುಧವಾರ ತಡರಾತ್ರಿ ನಡೆದ ಗಲಾಟೆಯಲ್ಲಿ ಗ್ರಾಹಕರ ಮೇಲೆ ಪಬ್‌ನ ಬೌನ್ಸರ್‌ಗಳು ತೀವ್ರ ಹಲ್ಲೆ ನಡೆಸಿದ್ದು, ನಾಲ್ವರನ್ನು ಬಂಧಿಸಲಾಗಿದೆ. 

ಗಲಾಟೆಯಲ್ಲಿ ದೆಹಲಿಯ ಖಾಸಿಸ್ ರಸ್ತೋಗಿ(32) ಮತ್ತು ಅವರ ಸ್ನೇಹಿತ ಇಮಾಂಶು (30) ಗಾಯಗೊಂಡಿದ್ದಾರೆ. 

ಘಟನೆ ಸಂಬಂಧ ಪಬ್‌ನ ಬೌನ್ಸರ್‌ಗಳಾದ ಕೆ.ಶ್ರೀನಿವಾಸ್ (44), ಅಲೆಕ್ಸಾಂಡರ್‌(33), ಚಾಲಕ ರಘು ಹಾಗೂ ಭದ್ರತಾ ಸಿಬ್ಬಂದಿ ಸಂತೋಷ್ ಸಿಂಗ್ ಎಂಬುವವರನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಾಯಗೊಂಡ ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದರು.

‘ಖಾಸಿಸ್ ರಸ್ತೋಗಿ ಕೆಲವು ವರ್ಷಗಳಿಂದ ನಗರದಲ್ಲೇ ವಾಸಿಸುತ್ತಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆತನ ಸ್ನೇಹಿತ ಇಮಾಂಶು, ಕಳೆದ ವಾರ ನಗರಕ್ಕೆ ಬಂದಿದ್ದರು. ಇಬ್ಬರೂ ಬುಧವಾರ ರಾತ್ರಿ ಅಶೋಕನಗರದ ಆರ್ಬರ್ ಪಬ್‌ಗೆ ಹೋಗಿ ಮದ್ಯ ಸೇವಿಸಿದ್ದರು. ತಡರಾತ್ರಿ 12.30ರ ಸುಮಾರಿಗೆ ಮನೆಗೆ ಹೊರಡಲು ಪಾರ್ಕಿಂಗ್ ಸ್ಥಳಕ್ಕೆ ಬಂದು ಮಾತನಾಡುತ್ತಿದ್ದರು. ಅಲ್ಲಿ ಬೌನ್ಸರ್ ಹಾಗೂ ಗ್ರಾಹಕರ ಮಧ್ಯೆ ಗಲಾಟೆ ಆಗಿದೆ. ಗ್ರಾಹಕರಿಬ್ಬರು ಬೌನ್ಸರ್‌ಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಬೌನ್ಸರ್‌ಗಳು ಕಬ್ಬಿಣದ ರಾಡ್, ಹೆಲ್ಮೆಟ್‌ನಿಂದ ಇಬ್ಬರು ಗ್ರಾಹಕರಿಗೂ ಥಳಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಘಟನೆ ವಿಡಿಯೊವನ್ನು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ವೈದ್ಯೆಯೊಬ್ಬರು, ‘ಮಾಹಿತಿ ತಿಳಿದು ಸ್ಥಳಕ್ಕೆ ಬಂದಿದ್ದ ಪೊಲೀಸ್ ಅಧಿಕಾರಿಯೊಬ್ಬರು ಗಾಯಾಳುಗಳ ಮೇಲೆಯೇ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ದೂರು ನೀಡಲು ತೆರಳಿದಾಗ ಎಫ್‌ಐಆರ್ ದಾಖಲಿಸಿಕೊಳ್ಳಲು ಹಾಗೂ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರಾಕರಿಸಿದ್ದರು ಎಂದೂ ಆರೋಪಿಸಿದ್ದಾರೆ. ವಿಡಿಯೊವನ್ನು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಅವರಿಗೂ ಟ್ಯಾಗ್‌ ಮಾಡಿದ್ದರು. ಬಳಿಕ ಹಿರಿಯ ಅಧಿಕಾರಿಗಳ ಸೂಚನೆಯಂತೆ ಆಸ್ಪತ್ರೆಗೆ ತೆರಳಿದ ಸಿಬ್ಬಂದಿ ಗಾಯಾಳುಗಳ ಹೇಳಿಕೆ ಪಡೆದು ದೂರು ಸ್ವೀಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT