ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕದ ಸ್ವರೂಪ ಬದಲಾಗುತ್ತಿದೆ: ಕೆ.ಎನ್‌. ಗಣೇಶಯ್ಯ

ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಲೇಖಕ ಕೆ.ಎನ್‌. ಗಣೇಶಯ್ಯ ಅಭಿಮತ
Published 23 ಏಪ್ರಿಲ್ 2024, 14:05 IST
Last Updated 23 ಏಪ್ರಿಲ್ 2024, 14:05 IST
ಅಕ್ಷರ ಗಾತ್ರ

ಬೆಂಗಳೂರು: ‘ಪುಸ್ತಕವು ಕಾಗದದ ರೂಪದಲ್ಲಿ ಮಾತ್ರ ಇರುತ್ತದೆ ಎನ್ನುವುದು ತಪ್ಪು ಕಲ್ಪನೆ. ಪುಸ್ತಕದ ಸ್ವರೂಪ ಬದಲಾಗುತ್ತಿದ್ದು, ಸಾಹಿತ್ಯ ಕೃತಿಗಳು ಹೆಚ್ಚು ಜನರನ್ನು ತಲುಪಲು ಮುದ್ರಣದ ಜತೆಗೆ ಧ್ವನಿ ಮುದ್ರಿತ ಪುಸ್ತಕದಂತಹ(ಆಡಿಯೊ ಬುಕ್‌) ಪ್ರಯೋಗಗಳು ಹೆಚ್ಚಬೇಕು’ ಎಂದು ಕೀಟ ತಜ್ಞ ಹಾಗೂ ಲೇಖಕ ಕೆ.ಎನ್‌. ಗಣೇಶಯ್ಯ ತಿಳಿಸಿದರು.

ಬಿಎಂಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ಕರ್ನಾಟಕ ಪ್ರಕಾಶಕರ ಸಂಘ ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮೈಸೂರಿನ ಕನ್ನಡ ಪುಸ್ತಕ ಪ್ರಾಧಿಕಾರ ಮಳಿಗೆಯ ನಿಂಗರಾಜ್ ಚಿತ್ತಣ್ಣನವರ್ ಅವರಿಗೆ ‘ಎಂ.ಗೋಪಾಲಕೃಷ್ಣ ಅಡಿಗ ಪುಸ್ತಕ ಪರಿಚಾರಕ ಪ್ರಶಸ್ತಿ’ ಹಾಗೂ ವಿಜಯಪುರದ ಪುಸ್ತಕ ಪ್ರೀತಿ ಮಳಿಗೆಯ ರೂಪ ಮತ್ತೀಕೆರೆ ಅವರಿಗೆ ‘ನಂಜನಗೂಡು ತಿರುಮಲಾಂಬ ಪ್ರಕಾಶನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. 

ಈ ವೇಳೆ ಮಾತನಾಡಿದ ಗಣೇಶಯ್ಯ, ‘ಕನ್ನಡದಲ್ಲಿ ಬರಹಗಾರರು ಪ್ರಕಾಶನ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಹೊಸ ಸೃಜನಶೀಲ ಬರಹಗಾರರನ್ನು ಹುಡುಕುವಲ್ಲಿ ಪ್ರಕಾಶಕರು ವಿಫಲರಾಗುತ್ತಿರುವುದು, ಕೃತಿ ಪರಿಶೀಲನೆ ವ್ಯವಸ್ಥೆ ಇಲ್ಲದಿರುವುದು ಸೇರಿ ವಿವಿಧ ಕಾರಣಗಳಿಂದ ಬರಹಗಾರರಿಗೆ ಪ್ರಕಾಶನದತ್ತ ಹೊರಳುವುದು ಅನಿವಾರ್ಯವಾಗಿದೆ. ವಿಜ್ಞಾನ ಪ್ರಕಾಶನದ ರೀತಿ ಕನ್ನಡದಲ್ಲಿಯೂ ಪುಸ್ತಕ ಪ್ರಕಟಣೆಗೆ ಮೊದಲು ವಿಷಯ ತಜ್ಞರಿಂದ ಪರಿಶೀಲಿಸುವ ವ್ಯವಸ್ಥೆ ರೂಪಿಸಬೇಕು. ಮುದ್ರಣದ ಜತೆಗೆ ಧ್ವನಿ ಮುದ್ರಿಕೆ ರೂಪದಲ್ಲಿಯೂ ಪುಸ್ತಕಗಳನ್ನು ನೀಡಬೇಕು’ ಎಂದು ಹೇಳಿದರು. 

‘ಕಥೆ ಸೇರಿ ಸಾಹಿತ್ಯದ ವಿವಿಧ ಪ್ರಕಾರಗಳನ್ನು ಓದಲು ಸಾಧ್ಯವಾಗದವರು ಪ್ರಯಾಣ ಸೇರಿ ವಿವಿಧ ಸಂದರ್ಭದಲ್ಲಿ ಕೇಳಿಸಿಕೊಳ್ಳುತ್ತಾರೆ. ತಂತ್ರಜ್ಞಾನದ ನೆರವಿನಿಂದ ಪುಸ್ತಕವನ್ನು ಓದುವ ಹಾಗೂ ಕೇಳುವ ಎರಡೂ ಮಾಧ್ಯಮದಲ್ಲಿ ಒದಗಿಸಬಹುದಾಗಿದೆ. ಪುಸ್ತಕ ಬೇರೆ ಬೇರೆ ಸ್ವರೂಪದಲ್ಲಿ ಬಂದಿದೆ. ಅಶೋಕನ ಕಾಲದಲ್ಲಿ ಒಂದೇ ರೀತಿಯ ಶಾಸನಗಳನ್ನು ಹಲವೆಡೆ ಇರಿಸಲಾಗಿತ್ತು. ಇದನ್ನು ಕೂಡ ಪುಸ್ತಕವೆಂದೇ ಪರಿಗಣಿಸಬಹುದು. ಬಳಿಕ ತಾಳೆಗರಿ, ಬಟ್ಟೆ, ಕಾಗದ, ಆಡಿಯೊ ರೂಪದಲ್ಲಿ ಪುಸ್ತಕ ಹೊರಬಂದಿದೆ’ ಎಂದು ವಿವರಿಸಿದರು. 

ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್ ಕಂಬತ್ತಳ್ಳಿ, ‘ಇತ್ತೀಚೆಗೆ ಪುಸ್ತಕಗಳ ಓದು ಕಡಿಮೆ ಆಗುತ್ತಿದೆ. ಹಿಂದೆ ಶಿಕ್ಷಕರು ಹೆಚ್ಚಿನ ಪುಸ್ತಕಗಳನ್ನು ಓದಿ, ಮಕ್ಕಳಿಗೂ ಓದುವಂತೆ ಪ್ರೇರೆಪಿಸುತ್ತಿದ್ದರು. ಈಗ ಶಿಕ್ಷಕರಲ್ಲಿಯೂ ಓದುವ ಹವ್ಯಾಸ ಕಡಿಮೆಯಾಗಿದೆ. ಕನ್ನಡ ಓದದೆಯೂ ವಿದ್ಯಾಭ್ಯಾಸ ಮುಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊಬೈಲ್‌ನಂತಹ ಡಿಜಿಟಲ್ ಸಾಧನಗಳ ಬಳಕೆಯಿಂದಲೂ ಜನರು ಓದುವ ಹವ್ಯಾಸದಿಂದ ದೂರವಾಗುತ್ತಿದ್ದಾರೆ. ಓದುಗರ ಸಂಖ್ಯೆ ಕಡಿಮೆ ಆಗದಂತೆ ನೋಡಿಕೊಳ್ಳಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಬೇಕು’ ಎಂದು ಹೇಳಿದರು. 

ವಿಮರ್ಶಕಿ ಎಂ.ಎಸ್‌. ಆಶಾದೇವಿ, ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷ ಬೈರಮಂಗಲ ರಾಮೇಗೌಡ ಹಾಗೂ ಕರ್ನಾಟಕ ಪ್ರಕಾಶಕರ ಸಂಘದ ಉಪಾಧ್ಯಕ್ಷೆ ಡಾ. ವಸುಂಧರಾ ಭೂಪತಿ ಅವರು ಪುಸ್ತಕದ ಮಹತ್ವದ ಬಗ್ಗೆ ಮಾತನಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT