ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ: ಬಡತನದಲ್ಲಿ ಅರಳಿದ ‘ಚಿನ್ನ’ದ ಪ್ರತಿಭೆಗಳು

ಸಣ್ಣ ಹೋಟೆಲ್‌ ನಡೆಸುವ ದಂಪತಿ ಪುತ್ರನಿಗೆ 4, ಗಾರೆ ಕೆಲಸಗಾರರ ಪುತ್ರಿಗೆ 3 ಪದಕ
Published 29 ಜೂನ್ 2024, 19:47 IST
Last Updated 29 ಜೂನ್ 2024, 19:47 IST
ಅಕ್ಷರ ಗಾತ್ರ

ಬೆಂಗಳೂರು: ಸೆಂಟ್ರಲ್‌ ಕಾಲೇಜಿನ ರಸಾಯನ ವಿಜ್ಞಾನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ಎಂ. ಶ್ರೇಯಸ್ ಬೆಂಗಳೂರು ವಿಶ್ವವಿದ್ಯಾಲಯದ ಮೂರನೇ ಘಟಿಕೋತ್ಸವದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು.

ದಾಬಸ್‌ಪೇಟೆಯಲ್ಲಿ ಚಿಕ್ಕ ಹೋಟೆಲ್‌ ನಡೆಸುವ ಮಲ್ಲಿಕಾರ್ಜುನಯ್ಯ–ವನಿತಾ ದಂಪತಿ ಪುತ್ರ ಶ್ರೇಯಸ್‌ ರಸಾಯನ ವಿಜ್ಞಾನದಲ್ಲಿ ಸಂಶೋಧನೆ ಕೈಗೊಳ್ಳುವ ಗುರಿ ಇಟ್ಟುಕೊಂಡಿದ್ದಾರೆ. ಪಿಎಚ್‌.ಡಿಗೆ ಪ್ರವೇಶ ಪರೀಕ್ಷೆ ಬರೆದಿದ್ದಾರೆ. 

ಬಿ.ಬಿ.ಎ.ಯಲ್ಲಿ ಮೂರು ಚಿನ್ನದ ಪದಕ ಪಡೆದ ಬನಶಂಕರಿ ಬಡಾವಣೆಯ ಕೃಷ್ಣ ಪದವಿ ಕಾಲೇಜಿನ ವಿದ್ಯಾರ್ಥಿನಿ ಆರ್. ರುತ್ ಕೂಲಿ ಕಾರ್ಮಿಕ ಕುಟುಂಬದ ಕುಡಿ. ಅಪ್ಪ ರಾಜಾ ಗಾರೆ ಕೆಲಸ, ತಾಯಿ ಸರೋಜಾ ಮನೆಗೆಲಸ ಮಾಡಿಕೊಂಡು ಮಗಳ ಶಿಕ್ಷಣಕ್ಕೆ ನೆರವಾಗಿದ್ದಾರೆ.

‘ಅಪ್ಪ, ಅಮ್ಮನ ಕಷ್ಟ ನೋಡಿಕೊಂಡು ಕಷ್ಟಪಟ್ಟು ಓದಿದೆ. ಪ್ರತಿ ದಿನ ಸಂಜೆ ಮನೆಯಲ್ಲಿ ಶಾಲಾ ಮಕ್ಕಳಿಗೆ ಪಾಠ ಮಾಡಿ ನಾನೂ ಹಣ ಸಂಪಾದಿಸು ತ್ತಿದ್ದೇನೆ. ಎಂ.ಬಿ.ಎ. ಮಾಡಿದ ನಂತರ ಪ್ರಾಧ್ಯಾಪಕಿಯಾಗುವ ಗುರಿ ಇಟ್ಟುಕೊಂಡಿ
ದ್ದೇನೆ’ ಎಂದು ರುತ್‌ ಹೇಳಿದರು.

ಆದರ್ಶ ಕಾಲೇಜಿನಲ್ಲಿ ಎಂ.ಬಿ.ಎ. ಪೂರೈಸಿರುವ ಬಿ. ಸಹನಶ್ರೀ ಕೂಡ ಕೂಲಿ ಕಾರ್ಮಿಕ ಕುಟುಂಬದ ಪುತ್ರಿ. ಪ್ರಸ್ತುತ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪಿಎಚ್‌.ಡಿ ಮಾಡಿ, ಪ್ರಾಧ್ಯಾಪಕಿಯಾಗುವ ಗುರಿ ಇಟ್ಟುಕೊಂಡಿದ್ದಾರೆ.

ಫ್ರೆಂಚ್‌ ಕಲಿಯಲು ಮಧ್ಯಪ್ರದೇಶದಿಂದ ಬಂದರು: ಬಿ.ಎ, ಎಂ.ಇಡಿ. ಮಾಡಿ ಶಿಕ್ಷಕಿಯಾಗಿ 27 ವರ್ಷಗಳು ಸೇವೆ ಸಲ್ಲಿಸಿದ್ದ ವೀನಲ್‌ ತಿವಾರಿ ಅವರು ಫ್ರೆಂಚ್‌ ಭಾಷಾ ವಿಷಯದಲ್ಲಿ ಎಂ.ಎ ಮಾಡಲು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಂದಿದ್ದರು. ಫ್ರೆಂಚ್‌ನಲ್ಲಿ ಈಗಾಗಲೆ ಏಳು ಕೃತಿಗಳನ್ನು ರಚಿಸಿರುವ ಅವರಿಗೆ ಎರಡು ಚಿನ್ನದ ಪದಕಗಳು ಒಲಿದಿವೆ.

‘ಫ್ರೆಂಚ್‌ ವಿಭಾಗದಲ್ಲಿ ಉತ್ತಮ ಪ್ರಾಧ್ಯಾಪಕರು ಇರುವ ಕುರಿತು ಸ್ನೇಹಿತರು ಮಾಹಿತಿ ನೀಡಿದ್ದರು. ಹಾಗಾಗಿ, ಇಲ್ಲಿಗೆ ಬಂದೆ. ಎರಡು ವರ್ಷಗಳಲ್ಲಿ ಸಾಕಷ್ಟು ಕಲಿತೆ. ಎಂದಿನಂತೆ ಮತ್ತೆ ಮಧ್ಯ ಪ್ರದೇಶದಲ್ಲೇ ಶಿಕ್ಷಕಿ ವೃತ್ತಿ ಮುಂದುವರಿಸುವೆ’ ಎಂದು ವೀನಲ್‌ ಪ್ರತಿಕ್ರಿಯಿಸಿದರು.

ಬಿ.ಕಾಂನಲ್ಲಿ ಆರ್.ಜೆ.ಎಸ್‌. ಪ್ರಥಮ ದರ್ಜೆ ಕಾಲೆಜಿನ ಎಸ್‌.ಎಸ್. ಧನ್ಯತಾ, ಅಪ್ಲೈಡ್‌ ಆರ್ಟ್ಸ್‌ನಲ್ಲಿ ಬೆಂಗಳೂರು ದೃಶ್ಯ ಕಲಾ ಶಾಲೆಯ ಬಿ. ಹರ್ಷಿತಾ, ಜೀವ ರಸಾಯನವಿಜ್ಞಾನದಲ್ಲಿ ಎಂ.ಎಸ್. ರಾಮಯ್ಯ ಕಾಲೇಜಿನ ಎಚ್‌.ಪಿ. ಗಗನಶ್ರೀ ಮತ್ತು ಸೂಕ್ಷ್ಮ ಜೀವ ವಿಜ್ಞಾನದಲ್ಲಿ ಬಿ.ಪ್ರಕೃತಿ ತಲಾ ಎರಡು ಪದಕ ಪಡೆದರು. ಒಟ್ಟು 63 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಲಾಯಿತು.

ಬಿ.ಬಿ.ಎ. ಪದವಿಯಲ್ಲಿ ಮೂರು ಚಿನ್ನದ ಪದಕ ಪಡೆದ ಶ್ರೀ ಕೃಷ್ಣ ಪದವಿ ಕಾಲೇಜಿನ ಆರ್. ರುತ್‌
ಬಿ.ಬಿ.ಎ. ಪದವಿಯಲ್ಲಿ ಮೂರು ಚಿನ್ನದ ಪದಕ ಪಡೆದ ಶ್ರೀ ಕೃಷ್ಣ ಪದವಿ ಕಾಲೇಜಿನ ಆರ್. ರುತ್‌

ನಿರುದ್ಯೋಗದ ಭಯ ಹುಟ್ಟಿಸಿದ ‘ಎಐ’

ಕೃತಕ ಬುದ್ಧಿಮತ್ತೆ(ಎಐ) ಮತ್ತು ಅದರ ಉದಯೋನ್ಮುಖ ತಂತ್ರಜ್ಞಾನಗಳುಮನುಷ್ಯನ ಬದುಕಿಗೆ ನಂಬಲಾಗದ ಸಾಮರ್ಥ್ಯವನ್ನು ನೀಡುತ್ತಿದ್ದರೂ ಉದ್ಯೋಗ ಭದ್ರತೆಯನ್ನು ಅನಿಶ್ಚಿತಗೊಳಿಸುತ್ತಿವೆ ಎಂದು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್‌ ಅಧ್ಯಕ್ಷ ಟಿ.ಜಿ. ಸೀತಾರಾಮ್‌ ಹೇಳಿದರು. ಬೆಂಗಳೂರು ನಗರ ವಿಶ್ವವಿದ್ಯಾಲಯ ಶನಿವಾರ ಹಮ್ಮಿಕೊಂಡಿದ್ದ ಮೂರನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು ಕೃತಕ ಬುದ್ಧಿಮತ್ತೆ ಸಮಾಜದ ಮೇಲೆ ಬೀರುತ್ತಿರುವ ಪ್ರಭಾವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಭಯಪಡುವ ಬದಲು ಸುಸ್ಥಿರತೆ ಮತ್ತು ಬದಲಾವಣೆಯ ಹೊಸ ವಿಧಾನಗಳಿಗೆ ತೆರೆದುಕೊಳ್ಳಬೇಕು. ಅದಕ್ಕಾಗಿ ಕಲಿಕೆಯ ಉತ್ಸಾಹ ಉಳಿಸಿಕೊಂಡು ನಿರಂತರ ಆವಿಷ್ಕಾರಗಳಿಗೆ ತೆರೆದುಕೊಳ್ಳಬೇಕು ಎಂದರು. ವೈದ್ಯಕೀಯ ಕ್ಷೇತ್ರ ಆಧುನಿಕ ತಂತ್ರಜ್ಞಾನದ ಆಧಾರದ ಮೇಲೆ ವಿಕಸಿತಗೊಳ್ಳುತ್ತಿದೆ. ಹಾಗಾಗಿ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಮಧ್ಯೆ ಅಂತರ ಶಿಸ್ತೀಯ ಶಿಕ್ಷಣ ಸಂಶೋಧನೆ ಮತ್ತು ನಾವೀನ್ಯತೆ ಸಾಧಿಸಲು ತಾಂತ್ರಿಕ ಶಿಕ್ಷಣ ಪರಿಷತ್‌ನಿಂದ ಅಂತರ್ ಸಾಂಸ್ಥಿಕ ಜೈವಿಕ ವೈದ್ಯಕೀಯ ಆವಿಷ್ಕಾರ (ಐಬಿಐಪಿ) ಆರಂಭಿಸಲು ಸಿ–ಕ್ಯಾಂಪ್‌ (ಸೆಲ್ಯುಲರ್ ಮತ್ತು ಮಾಲಿಕ್ಯುಲರ್ ಸಂಸ್ಥೆ) ಜೊತೆ ಸಹಭಾಗಿತ್ವ ಪಡೆಯಲಾಗಿದೆ. ಆರೋಗ್ಯ ಕ್ಷೇತ್ರದಲ್ಲಿನ ಸಂಕೀರ್ಣ ಸವಾಲುಗಳನ್ನು ಎದುರಿಸಲು ಎಂಜಿನಿಯರ್‌ಗಳು ಹಾಗೂ ವೈದ್ಯರು ಈ ವೇದಿಕೆ ಮೂಲಕ ಶ್ರಮಿಸಲಿದ್ದಾರೆ. ಇದರಿಂದ ಭವಿಷ್ಯದಲ್ಲಿ ಎರಡೂ ಕ್ಷೇತ್ರಗಳ ನಡುವಿನ ಅಂತರ ಕಡಿಮೆಯಾಗಲಿದೆ ಎಂದು ಹೇಳಿದರು. ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಗೋಕುಲ ಶಿಕ್ಷಣ ದತ್ತಿ ಸಂಸ್ಥೆಯ ಅಧ್ಯಕ್ಷ ಎಂ.ಆರ್. ಜಯರಾಮ್‌ ಅವರಿಗೆ ಬೆಂಗಳೂರು ನಗರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಕುಲಪತಿ ಲಿಂಗರಾಜ ಗಾಂಧಿ ಕುಲಸಚಿವ ಟಿ. ಜವರೇಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT