ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರಂತ ಬಡಾವಣೆ: ಅಭಿವೃದ್ಧಿ ತೆರಿಗೆ ನಿಗದಿ

ಬಿಡಿಎ: 17 ಹಳ್ಳಿಗಳಿಗೆ ಮಾರ್ಗಸೂಚಿ ದರದ ಆಧಾರದಲ್ಲಿ ತೆರಿಗೆ ನಿಗದಿ
Published : 18 ಸೆಪ್ಟೆಂಬರ್ 2024, 16:31 IST
Last Updated : 18 ಸೆಪ್ಟೆಂಬರ್ 2024, 16:31 IST
ಫಾಲೋ ಮಾಡಿ
Comments

ಬೆಂಗಳೂರು: ಡಾ. ಶಿವರಾಮಕಾರಂತ ಬಡಾವಣೆ ವ್ಯಾಪ್ತಿಯ 17 ಹಳ್ಳಿಗಳ ವಸತಿ ಉದ್ದೇಶದ ನಿವೇಶನ ಹಾಗೂ ಕಟ್ಟಡಗಳಿಗೆ ಅಭಿವೃದ್ಧಿ ತೆರಿಗೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿಗದಿಗೊಳಿಸಿದೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆ ನಿಗದಿಪಡಿಸಿರುವ ಮಾರ್ಗಸೂಚಿ ದರದಂತೆ ಅಭಿವೃದ್ಧಿ ತೆರಿಗೆಯನ್ನು ನಿಗದಿಪಡಿಸಲಾಗಿದೆ. ಬಿಡಿಎ ಕಾಯ್ದೆ 1976ರ ಸೆಕ್ಷನ್‌ 20 ಮತ್ತು 21ರಂತೆ ಒಂದು ಬಾರಿ ಪಾವತಿಸಲಾಗುವ ಪುರೋಭಿವೃದ್ಧಿ ತೆರಿಗೆಯನ್ನು (ಅಭಿವೃದ್ಧಿ ತೆರಿಗೆ) ಪ್ರತಿ ಚದರ ಮೀಟರ್‌ ಅಥವಾ ಪ್ರತಿ ಚದರಡಿಗೆ ವಿಧಿಸಲಾಗುತ್ತದೆ.

ಪ್ರಾಧಿಕಾರದ ಸಭೆಯಲ್ಲಿ ಈ ವಿಷಯ ಮಂಡಣೆಯಾಗಿ, ಅದನ್ನು ಅನುಮೋದಿಸಲಾಗಿದೆ. ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಬೀಳಲಿದ್ದು, ಅಭಿವೃದ್ಧಿ ತೆರಿಗೆಯನ್ನು ಪಾವತಿಸಿಕೊಳ್ಳುವ ಪ್ರಕ್ರಿಯೆಯನ್ನು ಬಿಡಿಎ ಆರಂಭಿಸಲಿದೆ.

ಅಭಿವೃದ್ಧಿ ತೆರಿಗೆ ದರವನ್ನು ಆಯಾ ಗ್ರಾಮಗಳ ವಸತಿ ಪ್ರದೇಶಗಳಿಗೆ ನಿಗದಿಪಡಿಸಲಾಗಿದ್ದು, ವಾಣಿಜ್ಯ ಉದ್ದೇಶದ ಪ್ರದೇಶಗಳಿಗೆ ವಸತಿ ನಿವೇಶನಗಳಿಗೆ ನಿಗದಿಯಾಗಿರುವ ತೆರಿಗೆಗಿಂತ ಶೇ 80ರಷ್ಟು ಹೆಚ್ಚು ವಿಧಿಸಲಾಗುತ್ತದೆ. ಕೈಗಾರಿಕೆ ಪ್ರದೇಶಗಳಿಗೆ ಶೇ 60ರಷ್ಟು ತೆರಿಗೆ ಅಧಿಕವಾಗುತ್ತದೆ. ಮೂಲೆ ನಿವೇಶನ ಅಥವಾ ಸ್ವತ್ತಿನ ಎರಡೂ ಕಡೆ ರಸ್ತೆ ಇದ್ದರೆ ವಸತಿ ನಿವೇಶನದ ಅಭಿವೃದ್ಧಿ ತೆರಿಗೆಗಿಂತ ಶೇ 10ರಷ್ಟು ಹೆಚ್ಚು ಪಾವತಿಸಬೇಕಾಗುತ್ತದೆ.

ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ಸಮಿತಿ ಸಕ್ರಮಗೊಳಿಸಿರುವ  5,171 ಕಟ್ಟಡಗಳಿಗೂ ಈ ಅಭಿವೃದ್ಧಿ ತೆರಿಗೆ ಅನ್ವಯವಾಗಲಿದೆ.

ಬೇಡಿಕೆ ನೋಟಿಸ್‌ ಜಾರಿ: ‘ಶಿವರಾಮ ಕಾರಂತ ಬಡಾವಣೆ ವ್ಯಾಪ್ತಿಯ 17 ಹಳ್ಳಿಗಳಲ್ಲಿನ ಆಸ್ತಿ ಮಾಲೀಕರಿಗೆ ಅಭಿವೃದ್ಧಿ ತೆರಿಗೆ ಪಾವತಿಸುವಂತೆ ‘ಡಿಮ್ಯಾಂಡ್‌ ನೋಟಿಸ್‌’ ಜಾರಿ ಮಾಡಲಾಗುತ್ತದೆ. ಅದಕ್ಕಾಗಿ ಒಬ್ಬ ಅಧಿಕಾರಿಯನ್ನು ನೇಮಿಸಲಾಗಿದೆ. ನೋಟಿಸ್‌ನಂತೆ ತೆರಿಗೆ ಪಾವತಿ ಮಾಡಿದರೆ, ಅವರಿಗೆ ಖಾತಾ ನೀಡಲಾಗುತ್ತದೆ. ಕಾನೂನು ತಜ್ಞರ ಸಲಹೆಗಳನ್ನು ಪಡೆದುಕೊಂಡೇ ಈ ತೆರಿಗೆಯನ್ನು ನಿಗದಿ ಮಾಡಲಾಗಿದೆ’ ಎಂದು ಬಿಡಿಎ ಆರ್ಥಿಕ ಸದಸ್ಯ ಎ. ಲೋಕೇಶ್‌ ತಿಳಿಸಿದರು.

ಅಭಿವೃದ್ಧಿಯನ್ನೇ ಮಾಡಿಲ್ಲ ತೆರಿಗೆ ಏಕೆ?

‘ಕಾರಂತ ಬಡಾವಣೆಯ ಸುತ್ತಮುತ್ತ ಹಳ್ಳಿಗಳಿಗೆ ಬಿಡಿಎ ಯಾವ ಮೂಲಸೌಕರ್ಯವನ್ನೂ ಒದಗಿಸಿಲ್ಲ. ಗ್ರಾಮ ಪಂಚಾಯಿತಿ ಹಾಗೂ ಕೆಲವು ಭಾಗದಲ್ಲಿ ಬಿಬಿಎಂಪಿ ಸೌಲಭ್ಯ ಕಲ್ಪಿಸಿವೆ. ಆದ್ದರಿಂದ ಬಿಡಿಎಗೆ ಏಕೆ ಅಭಿವೃದ್ಧಿ ತೆರಿಗೆ ಕಟ್ಟಬೇಕು. ಮಾರ್ಗಸೂಚಿ ದರದಂತೆ ತೆರಿಗೆ ನಿಗದಿ ಮಾಡುವವರು ಅದರಂತೆಯೇ ಪರಿಹಾರವನ್ನೂ ನೀಡಬೇಕು ಅಲ್ಲವೇ’ ಎಂದು ಡಿಎಸ್‌ಸ್‌ನ (ಸಂಯೋಜಿತ) ಬೆಂಗಳೂರು ಜಿಲ್ಲೆಯ ಸಂಯೋಜಕ ಎಂ. ರಮೇಶ್‌ ರಾಮಗೊಂಡನಹಳ್ಳಿ ಪ್ರಶ್ನಿಸಿದರು.

ಬಿಡಿಎ ಸೂತ್ರದಂತೆ ನಿಗದಿ: ಜಯರಾಂ

‘ಅಭಿವೃದ್ಧಿ ತೆರಿಗೆಯನ್ನು ಬಿಡಿಎ ಸೂತ್ರದಂತೆಯೇ ನಿಗದಿ ಮಾಡಲಾಗಿದೆ. ಹೆಚ್ಚು ಕಡಿಮೆ ಎಂಬುದೇನೂ ಇಲ್ಲ. ಬಿಡಿಎ ಸ್ವಾಧೀನಕ್ಕೆ ಮುನ್ನ ಆ ಹಳ್ಳಿಯಲ್ಲಿದ್ದ ಮಾರ್ಗಸೂಚಿ ದರ ಹಾಗೂ 2024ರಲ್ಲಿನ ಮಾರ್ಗಸೂಚಿ ದರದ ವ್ಯತ್ಯಾಸದಲ್ಲಿ ಮೂರನೇ ಒಂದರಷ್ಟನ್ನು ಅಭಿವೃದ್ದಿ ತೆರಿಗೆಯನ್ನಾಗಿ ನಿಗದಿ ಮಾಡಲಾಗಿದೆ. ಕಾರಂತ ಬಡಾವಣೆಗಾಗಿ ಬಿಡಿಎ ಅಭಿವೃದ್ಧಿಪಡಿಸಿರುವ ಮೂಲಸೌಕರ್ಯಗಳನ್ನು 17 ಹಳ್ಳಿಗಳ ವ್ಯಾಪ್ತಿಯಲ್ಲಿರುವವರೆಲ್ಲ ಉಪಯೋಗಿಸುತ್ತಿದ್ದಾರೆ. ತೆರಿಗೆ ಪಾವತಿಸಿಕೊಂಡು ಬಿಡಿಎ ಖಾತಾ ನೀಡುವುದರಿಂದ ಭೂಮಿ ಮೌಲ್ಯವೂ ಹೆಚ್ಚುತ್ತದೆ’ ಎಂದು ಬಿಡಿಎ ಆಯುಕ್ತ ಎನ್‌. ಜಯರಾಂ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT