ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಹಸು ಪಾಲನೆ

Published : 17 ಸೆಪ್ಟೆಂಬರ್ 2024, 22:41 IST
Last Updated : 17 ಸೆಪ್ಟೆಂಬರ್ 2024, 22:41 IST
ಫಾಲೋ ಮಾಡಿ
Comments

ಟೊಮೆಟೊ ಬೆಲೆ ಹೆಚ್ಚಾದಾಗ ಸುಮಿ ಮನೆ ಕಾಂಪೌಂಡ್‍ನಲ್ಲಿ ಟೊಮೆಟೊ ಬೆಳೆದಳು. ಈರುಳ್ಳಿ ದರ ಏರಿಕೆಯಾದಾಗ ಕುಂಡದಲ್ಲಿ ಈರುಳ್ಳಿ ಫಸಲು ತೆಗೆದು ಸಾಂಬಾರ್ ಮಾಡಿ ಸಂಸಾರ ಸಾಗಿಸಿದ್ದಳು. ಈಗ ಹಾಲಿನ ದರ ಹೆಚ್ಚಳದ ಪ್ರಸ್ತಾಪ ಸುಮಿಯನ್ನು ಚಿಂತೆಗೀಡುಮಾಡಿತ್ತು.

‘ರೀ, ನಾವೂ ಒಂದು ಹಸು ತಂದು ಸಾಕಿ ಹಾಲಿನ ಸ್ವಾವಲಂಬಿಯಾಗೋಣ...’ ಅಂದಳು.

‘ಹಸು ಪಾಲನೆ ಸುಲಭವಲ್ಲ. ಬೆಡ್‍ರೂಂ ಸೈಜಿನ ಕೊಟ್ಟಿಗೆ ಇರಬೇಕು. ಹುಲ್ಲು, ಹಿಂಡಿ, ಬೂಸ ತಿನ್ನಿಸಬೇಕು, ಎರಡು ಹೊತ್ತೂ ಹಾಲು ಕರೆಯಬೇಕು, ಸಗಣಿ, ಗಂಜಲ ಬಾಚಬೇಕು...’ ಶಂಕ್ರಿ ನಿರಾಸಕ್ತಿ ತೋರಿಸಿದ.

‘ಹಸು ಬದಲು ನಾಯಿ ಸಾಕೋಣ. ಮನೆ ಕಾವಲು ಕಾಯುತ್ತದೆ, ಅಪರಿಚಿತರು ಬಂದರೆ ಬೊಗಳುತ್ತದೆ, ಹಸು ಬೊಗಳುವುದಿಲ್ಲ’ ಎಂದಳು ಮಗಳು.

‘ಹಸು ಹಾಲು ಕೊಡುತ್ತೆ, ನಾಯಿ ಏನು ಕೊಡುತ್ತೆ?’ ಎಂದು ರೇಗಿದ ಸುಮಿ, ‘ಹಸು ಕೊಡುವ ಹಾಲನ್ನು ನಾವು ಕುಡಿದು ಮಿಕ್ಕಿದ್ದನ್ನು ಡೇರಿಗೆ ಹಾಕಿದರೆ ಅದರ ಹಣ ಮನೆ
ಖರ್ಚಿಗಾಗುತ್ತದೆ’ ಎಂದಳು.

‘ಹೈನುಗಾರಿಕೆ ಲಾಭದಾಯಕ ವ್ಯವಹಾರವೇ, ನಿರ್ವಹಣೆ ಕಷ್ಟ’ ಶಂಕ್ರಿ ಹೇಳಿದ.

‘ನಾಯಿ ಮೇನ್‍ಟೆನೆನ್ಸ್ ಈಸಿ ಡ್ಯಾಡಿ. ನಾಯಿ ಹುಲ್ಲು ತಿನ್ನೋದಿಲ್ಲ, ನಾವು ತಿನ್ನೋದನ್ನೇ ತಿನ್ಕೊಂಡಿರುತ್ತೆ’ ಅಂದ ಮಗ.

‘ಹಸು ಸಾಕಾಣಿಕೆಗೆ ಬ್ಯಾಂಕ್‍ಗಳು ಸಾಲ ಕೊಡುತ್ತವೆ, ನಾಯಿ ಸಾಕಲು ಯಾರೂ ಲೋನ್ ಕೊಡೋದಿಲ್ಲ’ ಅಂದ ಶಂಕ್ರಿ.

‘ಸ್ಕೂಲಿನ ಬ್ಯಾಲೆನ್ಸ್ ಫೀಸ್ ಕಟ್ಟಲು ಟೀಚರ್ ಹೇಳಿದ್ದಾರೆ ಡ್ಯಾಡಿ’ ಅಂದ ಮಗ.

‘ಹಸು ಸಾಕುವುದಕ್ಕಿಂತ ಮಕ್ಕಳನ್ನು ಸಾಕುವುದು ಕಷ್ಟ ಆಗಿಬಿಟ್ಟಿದೇರೀ’ ಸುಮಿಗೆ ಸಂಕಟ.

ನಿಟ್ಟುಸಿರುಬಿಟ್ಟ ಶಂಕ್ರಿ, ‘ಪಶುಪಾಲನೆಗೆ ನೀಡುವಂತೆ ಮಕ್ಕಳ ಪಾಲನೆಗೂ ಸರ್ಕಾರ ಸಾಲಸೌಲಭ್ಯ ಯೋಜನೆ ಜಾರಿಗೆ ತಂದು ನೆರವಾಗಬೇಕು...’ ಎಂದು ಆಸೆಪಟ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT