ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು: ಐವರು ಡ್ರಗ್ಸ್ ಪೆಡ್ಲರ್‌ಗಳ ಬಂಧನ

₹26 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ
Published 16 ಜುಲೈ 2024, 14:56 IST
Last Updated 16 ಜುಲೈ 2024, 14:56 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಗೇರಿ, ಪರಪ್ಪನ ಅಗ್ರಹಾರ, ವರ್ತೂರು ಹಾಗೂ ಶೇಷಾದ್ರಿಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿ, ಇಬ್ಬರು ವಿದೇಶಿ ಡ್ರಗ್ಸ್‌ ಪೆಡ್ಲರ್‌ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

ಬಂಧಿತರಿಂದ ₹26 ಲಕ್ಷ ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.‌

ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್‌ ಪೆಡ್ಲಿಂಗ್‌ ನಡೆಸುತ್ತಿದ್ದ ನೈಜಿರಿಯಾ ದೇಶದ ಕಿಂಗ್ಸ್‌ಲೇ ನಾನಾ ಹಾಗೂ ಸಂಡೆಕೂಡಿ ಎಂಬುವವರನ್ನು ಬಂಧಿಸಲಾಗಿದೆ.

‘ಬಂಧಿತರಿಂದ ₹21 ಲಕ್ಷ ಮೌಲ್ಯದ 206 ಗ್ರಾಂ ಎಂಡಿಎಂಎ ಕ್ರಿಸ್ಟೆಲ್‌ ಹಾಗೂ ಮೂರು ಮೊಬೈಲ್‌ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಇಬ್ಬರೂ ಆರೋಪಿಗಳು ಬ್ಯುಸಿನೆಸ್‌ ವೀಸಾ ಪಡೆದು 2021ರಲ್ಲಿ ಭಾರತಕ್ಕೆ ಬಂದಿದ್ದರು. ಬೆಂಗಳೂರಿನಲ್ಲಿ ವಾಸ್ತವ್ಯ ಮಾಡಿದ್ದರು. ದೆಹಲಿ, ಗೋವಾ, ಮುಂಬೈನಿಂದ ಎಂಡಿಎಂಎ ಕ್ರಿಸ್ಟೆಲ್‌ ಖರೀದಿಸಿ ಬೆಂಗಳೂರಿನ ಗ್ರಾಹಕರಿಗೆ ಪೂರೈಸುತ್ತಿದ್ದರು. ಇದರಿಂದ ಬಂದ ಹಣದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಕೆಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಕೇರಳದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

‘ಬಂಧಿತರಿಂದ ₹3 ಲಕ್ಷ ಮೌಲ್ಯದ 2.75 ಕೆ.ಜಿ ಗಾಂಜಾ, ಎರಡು ಮೊಬೈಲ್‌ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು ಕೇರಳದಿಂದ ಡ್ರಗ್ಸ್ ತಂದು ನಗರದ ವಿದ್ಯಾರ್ಥಿಗಳು ಹಾಗೂ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದರು’ ಎಂದು ತನಿಖೆಯಿಂದ ಗೊತ್ತಾಗಿದೆ.

ಒಡಿಶಾದ ಆರೋಪಿ ಬಂಧನ

ಶೇಷಾದ್ರಿಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಡ್ರಗ್ಸ್ ಪೆಡ್ಲಿಂಗ್‌ ನಡೆಸುತ್ತಿದ್ದ ಒಡಿಶಾದ ಇಮಾಮ್‌ಶೂ ಬೆಹಾರ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.

ಆರೋಪಿಯಿಂದ 1 ಕೆ.ಜಿ ತೂಕದ ಗಾಂಜಾವನ್ನು ಜಪ್ತಿ ಮಾಡಲಾಗಿದೆ.

‘ಆರೋಪಿಯು ಜೊಮ್ಯಾಟೊ ಕಿಚನ್‌ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. 2023ರಲ್ಲೂ ಗಾಂಜಾ ಮಾರಾಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜಾಮೀನನ ಮೇಲೆ ಬಿಡುಗಡೆಗೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಎಲೆಕ್ಟ್ರಾನಿಕ್‌ ಸಿಟಿಯ ಗೊಲ್ಲಹಳ್ಳಿಯ ಸ್ನೇಹಿತನ ಮನೆಯಲ್ಲಿ ಗಾಂಜಾ ದಾಸ್ತಾನು ಮಾಡಿ, ಮಾರಾಟ ಮಾಡುತ್ತಿದ್ದರು. ಇಮಾಮ್‌ಶೂ ಬೆಹಾರನ ಸಹಚರನನ್ನು ಶಿವಾಜಿನಗರದಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ವರ್ತೂರು ಪೊಲೀಸರು, ಒಬ್ಬ ಆರೋಪಿಯನ್ನು ಬಂಧಿಸಿ ₹2 ಲಕ್ಷ ಮೌಲ್ಯದ 19 ಗ್ರಾಂ ಎಂಡಿಎಂಎ ಕ್ರಿಸ್ಟೆಲ್‌ ಅನ್ನು ಜಪ್ತಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT