ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

₹5 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ; ವಿದೇಶಿ ಪೆಡ್ಲರ್ ಸೇರಿ 7 ಮಂದಿ ಬಂಧನ

13 ಮೊಬೈಲ್‌ ಜಪ್ತಿ
Published : 10 ಸೆಪ್ಟೆಂಬರ್ 2024, 21:35 IST
Last Updated : 10 ಸೆಪ್ಟೆಂಬರ್ 2024, 21:35 IST
ಫಾಲೋ ಮಾಡಿ
Comments

ಬೆಂಗಳೂರು: ಸಿಸಿಬಿ ಹಾಗೂ ಮಾದಕ ದ್ರವ್ಯ ನಿಗ್ರಹ ದಳ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನಗರದ ವಿವಿಧೆಡೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮಹಿಳಾ ವಿದೇಶಿ ಪೆಡ್ಲರ್ ಸೇರಿ ಏಳು ಮಂದಿಯನ್ನು ಬಂಧಿಸಿದ್ದಾರೆ.‌

ಕರೀಂ ಬೇಗ್‌, ತಾರೀಕ್ ಅಜೀಜ್‌, ಇಕ್ರಂ, ಕೆನ್ಯಾದ ರೋಜ್‌, ನೆಲಮಂಗಲದ ಅಭಿಷೇಕ್ ಗೌಡ, ಶೀಜಿನ್‌ ಹಾಗೂ ರೌವನಕ್‌ ಗುಪ್ತಾ ಎಂಬುವರನ್ನು ಬಂಧಿಸಿ, ₹ 5 ಕೋಟಿಗೂ ಅಧಿಕ ಮೌಲ್ಯದ ಗಾಂಜಾ, ಹೆರಾಯಿನ್, ಎಂಡಿಎಂಎ ಕ್ರಿಸ್ಟಲ್ ಮತ್ತು ಹೈಡ್ರೊ  ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ ಹಾಗೂ 13 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್‌ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬ್ಯುಸಿನೆಸ್‌ ವೀಸಾ, ವಿದ್ಯಾರ್ಥಿ ವೀಸಾ, ವೈದ್ಯಕೀಯ ತುರ್ತು ವೀಸಾ ಮೇಲೆ ವಿದೇಶದಿಂದ ಬಂದಿರುವ ಕೆಲವರು ಮಾದಕ ವಸ್ತು ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೋಸ್‌ ಗಾರ್ಡನ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್‌ ಕರೀಂ ಬೇಗ್‌ ಎಂಬುವವರನ್ನು ಬಂಧಿಸಲಾಯಿತು. ಆತನಿಂದ ₹ 10 ಲಕ್ಷ ಮೌಲ್ಯದ 10 ಕೆ.ಜಿ. ಗಾಂಜಾ, ಎಲೆಕ್ಟ್ರಾನಿಕ್ ತೂಕದ ಯಂತ್ರ, ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಪಿ.ಪಾರ್ಕ್ ಬಳಿಯ ಎಸ್‌.ಬಿ.ಎಂ ಕಾಲೊನಿಯಲ್ಲಿ ಮಣಿಪುರದ ಡ್ರಗ್ ಪೆಡ್ಲರ್‌ ವಶಕ್ಕೆ ಪಡೆದು, ₹75 ಲಕ್ಷ ಮೌಲ್ಯದ 84 ಗ್ರಾಂ ಹೆರಾಯಿನ್, ತೂಕದ ಯಂತ್ರವನ್ನು ಜಪ್ತಿ ಮಾಡಲಾಗಿದೆ. ಆರೋಪಿಗೆ ಗಾಂಜಾ ಪೂರೈಕೆ ಮಾಡಿದ್ದ ಸ್ನೇಹಿತನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಬ್ಯುಸಿನೆಸ್‌ ವೀಸಾದಲ್ಲಿ ಭಾರತಕ್ಕೆ: ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ಎಂಟನೇ ಮುಖ್ಯ ರಸ್ತೆಯಲ್ಲಿರುವ ಮನೆಯಲ್ಲಿ ಕೆನ್ಯಾದ ಡ್ರಗ್ ಪೆಡ್ಲರ್‌ ರೋಜಾ ಎಂಬುವರನ್ನು ಬಂಧಿಸಿ, ₹10 ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ 2019ರಲ್ಲಿ ಬ್ಯುಸಿನೆಸ್ ವೀಸಾ ಮೇಲೆ ಭಾರತಕ್ಕೆ ಬಂದಿದ್ದರು. ಡ್ರಗ್‌ ಪೆಡ್ಲಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಕಾರಣ 2023ರಲ್ಲಿ ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಎನ್‌ಡಿಪಿಎಸ್‌ ಪ್ರಕರಣ ದಾಖಲಾಗಿತ್ತು. ಜಾಮೀನಿನ ಮೇಲೆ ಹೊರ ಬಂದು ಮತ್ತೆ ಡ್ರಗ್‌ ಪೆಡ್ಲಿಂಗ್‌ನಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ಎಚ್‌.ಎಸ್.ಆರ್.ಲೇಔಟ್‌ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನೆಲಮಂಗಲ ನಿವಾಸಿ ಅಭಿಷೇಕ್ ಗೌಡ ಎಂಬಾತ ಅಂಚೆ ಮೂಲಕ ಬೆಲ್ಜಿಯಂನಿಂದ ₹ 1 .50 ಕೋಟಿ ಮೌಲ್ಯದ ಎಲ್ಎಸ್‌ಡಿ ಸ್ಟ್ರಿಪ್ಸ್‌ ತರಿಸಿಕೊಂಡಿದ್ದರು. ಬೆಲ್ಜಿಯಂನಲ್ಲಿರುವ ಸ್ನೇಹಿತ ಇದನ್ನು ಕಳುಹಿಸಿರುವುದಾಗಿ ಆರೋಪಿ ತಿಳಿಸಿದ್ದು, ಇವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಮಂಗಮ್ಮನ ಪಾಳ್ಯದಲ್ಲಿ ಹೈಡ್ರೊ ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳದ ಡ್ರಗ್ ಪೆಡ್ಲರ್‌ ಶೀಜಿನ್ ಎಂಬಾತನನ್ನು ಬಂಧಿಸಿ, ₹1.50 ಗ್ರಾಂ ಮೌಲ್ಯದ ಸ್ವತ್ತು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೆ.ಬಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಮಹೇಶ್ವರಿ ನಗರದ ಲಕ್ಷ್ಮಣ ನಾಯಕ್ ಎಂಬುವವರನ್ನು ಬಂಧಿಸಿ, ₹ 3 ಲಕ್ಷ ಮೌಲ್ಯದ 2 ಕೆ.ಜಿ. 300 ಗ್ರಾಂ ಗಾಂಜಾ, ದ್ವಿಚಕ್ರ ವಾಹನ, ಮೊಬೈಲ್ ಫೋನ್, ₹ 8,500 ನಗದು ವಶಕ್ಕೆ ಪಡೆಯಲಾಗಿದೆ. ಈತ ಒಡಿಶಾದಿಂದ ಕಡಿಮೆ ಬೆಲೆಗೆ ಗಾಂಜಾವನ್ನು ತಂದು, ಸಾರ್ವಜನಿಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೇಕರಿ ಪದಾರ್ಥದ ಬಾಕ್ಸ್‌ನಲ್ಲಿ ಮಾದಕ ವಸ್ತು ಆಮದು. 
ಬೇಕರಿ ಪದಾರ್ಥದ ಬಾಕ್ಸ್‌ನಲ್ಲಿ ಮಾದಕ ವಸ್ತು ಆಮದು. 

ಬೇಕರಿ ಪದಾರ್ಥ ಬಾಕ್ಸ್​ಗಳಲ್ಲಿ ಮಾದಕ ವಸ್ತು

ಥಾಯ್ಲೆಂಡ್‌ನಿಂದ ಮಾದಕ ವಸ್ತುಗಳನ್ನು ಬೆಂಗಳೂರಿಗೆ ತರಿಸಿಕೊಂಡು ಕಾಲೇಜು ವಿದ್ಯಾರ್ಥಿಗಳು ಮತ್ತು ಪರಿಚಿತರಿಗೆ ಪೂರೈಸುತ್ತಿದ್ದ ಆರೋಪಿ ತವನೀಶ್ ಎಂಬುವವರನ್ನು ಬಂಧಿಸಿ ₹ 1.22 ಕೋಟಿ ಮೌಲ್ಯದ 2 ಕೆ.ಜಿ 770 ಗ್ರಾಂ ಹೈಡ್ರೊ ಗಾಂಜಾವನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

‘ನಗರದಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಆರೋಪಿ ಡಿ.ಜೆ ಪಾರ್ಟಿಗಳಲ್ಲಿ ಭಾಗಿಯಾಗಲು‌ ಹಿಮಾಚಲ ಪ್ರದೇಶಕ್ಕೆ ತೆರಳುತ್ತಿದ್ದ. ಅದೇ ಸಮಯದಲ್ಲಿ ಆರೋಪಿಗೆ ಕೇರಳದ ಸೈಜು ಎಂಬಾತನ ಪರಿಚಯವಾಗಿತ್ತು. ಸೈಜು ಮೂಲಕ ಥಾಯ್ಲೆಂಡ್‌ನಿಂದ ಹೈಡ್ರೊ ಗಾಂಜಾವನ್ನು ತರಿಸಿಕೊಳ್ಳುತ್ತಿದ್ದರು. ಗಾಂಜಾವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಪ್ಯಾಕ್ ಮಾಡಿ ಬೇಕರಿ ಪದಾರ್ಥಗಳ ಬಾಕ್ಸ್‌ಗಳಲ್ಲಿ ತುಂಬಿ ಅವುಗಳನ್ನು ಬಿಸ್ಕೆಟ್ ಚಾಕೊಲೇಟ್ ಎಂದು ಬಿಂಬಿಸಿ ಸೈಜು ಮೂಲಕ ಬೆಂಗಳೂರಿಗೆ ತರಿಸಿಕೊಳ್ಳುತ್ತಿದ್ದರು. ಬಳಿಕ ಅವುಗಳನ್ನು ಕಾಲೇಜು ವಿದ್ಯಾರ್ಥಿಗಳು ಮತ್ತು ಪರಿಚಿತರಿಗೆ ಬಂಧಿತ ಆರೋಪಿ ಮಾರಾಟ ಮಾಡುತ್ತಿದ್ದರು. ಇವರ ವಿರುದ್ಧ ನಗರದ ಠಾಣೆಗಳಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಸಹೋದರಿ ಮದುವೆಗಾಗಿ ಗಾಂಜಾ ಮಾರಾಟ

ರೈಲಿನ ಮೂಲಕ ಒಡಿಶಾದಿಂದ ಮಾದಕ ವಸ್ತುಗಳನ್ನು ತಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಾಣಸವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬದ್ರುದ್ದೀನ್ ಬಂಧಿತ ಆರೋಪಿ.

ಇವರಿಂದ ₹1 ಲಕ್ಷ ಮೌಲ್ಯದ 5 ಕೆ.ಜಿ 20 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಬದ್ರುದ್ದೀನ್‌ಗೆ ಕುಟುಂಬ ನಿರ್ವಹಣೆ ಕಷ್ಟವಾಗಿತ್ತು. ಸಹೋದರಿಯ ಮದುವೆ ಮಾಡುವ ಜವಾಬ್ದಾರಿ ಸಹ ಇತ್ತು. ಮಾದಕ ವಸ್ತುಗಳನ್ನು ಮಾರಾಟ ಮಾಡಿ ಹೆಚ್ಚು ಆದಾಯ ಗಳಿಸಬಹುದು ಎಂದುಕೊಂಡು ಸರಬರಾಜುದಾರರ ನಂಬರ್ ಪಡೆದು ಒಡಿಶಾಗೆ ತೆರಳಿದ್ದರು.

ಸೆ.2ರಂದು ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಆರೋಪಿಯನ್ನು ಗಾಂಜಾ ಸಮೇತ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT