ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಟ್ರೊ ಪ್ರಯಾಣ ದರ ಶೀಘ್ರ ಪರಿಷ್ಕರಣೆ: ಸಾರ್ವಜನಿಕರಿಂದ ಸಲಹೆ ಆಹ್ವಾನಿಸಿದ BMRCL

Published : 5 ಅಕ್ಟೋಬರ್ 2024, 23:30 IST
Last Updated : 5 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

ಬೆಂಗಳೂರು: ‘ನಮ್ಮ ಮೆಟ್ರೊ’ ಪ್ರಯಾಣ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಬಿಎಂಆರ್‌ಸಿಎಲ್‌ ಆಹ್ವಾನಿಸಿದೆ. 

2011ರಲ್ಲಿ ಮೆಟ್ರೊ ಸಂಚಾರ ಆರಂಭವಾಗಿದ್ದು, 2017ರಲ್ಲಿ ದರ ಪರಿಷ್ಕರಣೆ ಮಾಡಲಾಗಿತ್ತು. ಇದೀಗ ಎರಡನೇ ಬಾರಿಗೆ ಪರಿಷ್ಕರಿಸಬೇಕಿದ್ದು, ಅದಕ್ಕಾಗಿ ದರ ನಿಗದಿ ಸಮಿತಿ ರಚಿಸಲಾಗಿದೆ. ನಾಗರಿಕರು ಸಲಹೆಗಳನ್ನು ಅ.21ರ ಒಳಗೆ ffc@bmrc.co.in ಮೇಲ್ ಮಾಡಬಹುದು. ಅಥವಾ ಅಧ್ಯಕ್ಷರು, ದರ ನಿಗದಿ ಸಮಿತಿ, ನಮ್ಮ ಮೆಟ್ರೊ, 3ನೇ ಮಹಡಿ, 'ಸಿ' ಬ್ಲಾಕ್, ಬಿಎಂಟಿಸಿ ಕಾಂಪ್ಲೆಕ್ಸ್, ಕೆಎಚ್‌ ರಸ್ತೆ, ಶಾಂತಿನಗರ, ಬೆಂಗಳೂರು-560027 ಇಲ್ಲಿಗೆ ಕಳುಹಿಸಬಹುದು ಎಂದು ತಿಳಿಸಿದೆ.

ಮೆಟ್ರೊ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ, 2002 ರ ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ರಚಿಸಿದ ಬಿಎಂಆರ್‌ಸಿಎಲ್‌ನ ಮೊದಲ ದರ ನಿಗದಿ ಸಮಿತಿ ಇದಾಗಿದೆ. ಸದ್ಯ ಕನಿಷ್ಠ ದರ ₹ 10 ಹಾಗೂ ಗರಿಷ್ಠ ದರ ₹ 60 ಇದೆ. ಸ್ಮಾರ್ಟ್‌ಕಾರ್ಡ್‌, ಕ್ಯುಆರ್‌ ಕೋಡ್‌ ಟಿಕೆಟ್‌ ಬಳಸುವವರಿಗೆ ಶೇ 5 ರಿಯಾಯಿತಿ ಇದೆ.

‘ಮೆಟ್ರೊ ರೈಲುಗಳ ನಿರ್ವಹಣೆ, ಸಿಬ್ಬಂದಿ ವೇತನ ಸಹಿತ ಎಲ್ಲ ವೆಚ್ಚಗಳು ಪ್ರತಿ ವರ್ಷ ಜಾಸ್ತಿಯಾಗುತ್ತಿದೆ. ಏಳು ವರ್ಷಗಳಿಂದ ದರ ಪರಿಷ್ಕರಣೆ ಆಗಿಲ್ಲ. ಈಗಾಗಲೇ ಬಹಳ ವಿಳಂಬವಾಗಿದೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಸದ್ಯ ಸಮಿತಿ ರಚನೆಯಾಗಿದೆ. ಪ್ರಯಾಣಿಕರು, ಸಂಘ ಸಂಸ್ಥೆಗಳು, ತಜ್ಞರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಸಮಿತಿಯು ದರ ನಿಗದಿ ಮಾಡಲಿದೆ. ಬಿಎಂಆರ್‌ಸಿಎಲ್‌ನಿಂದ ರಾಜ್ಯ ಸರ್ಕಾರ ಅನುಮತಿಗೆ ಕಳುಹಿಸಲಾಗುತ್ತದೆ. ರಾಜ್ಯ ಸರ್ಕಾರದ ಒಪ್ಪಿಗೆ ಸಿಕ್ಕಿದ ಮೇಲೆ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಎಲ್ಲ ಹಂತದಲ್ಲಿ ಅನುಮತಿ ಪಡೆದ ಬಳಿಕ ದರ ಹೆಚ್ಚಳವಾಗಲಿದೆ. ಇದೆಲ್ಲ ಕನಿಷ್ಠ ಆರು ತಿಂಗಳ ಪ್ರಕ್ರಿಯೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT