ಗುರುವಾರ, 27 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಬ್ ಸ್ಫೋಟ ಪ್ರಕರಣ: ಅರೇಬಿಕ್ ಶಿಕ್ಷಕರು ಎನ್‌ಐಎ ವಶಕ್ಕೆ

Published 19 ಮಾರ್ಚ್ 2024, 23:10 IST
Last Updated 19 ಮಾರ್ಚ್ 2024, 23:10 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ಲಾಮಿಕ್ ಸ್ಟೇಟ್(ಐಎಸ್‌) ಭಯೋತ್ಪಾದನಾ ಸಂಘಟನೆ ಜೊತೆ ನಂಟು ಹೊಂದಿದ್ದ ಹಾಗೂ ಕೊಯಮತ್ತೂರು ಕಾರು ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಪ್ರಕರಣದಲ್ಲಿ ಬಂಧಿತರಾಗಿರುವ ಮದ್ರಾಸ್ ಅರೇಬಿಕ್ ಕಾಲೇಜು ಶಿಕ್ಷಕರನ್ನು ವಶಕ್ಕೆ ಪಡೆದಿರುವ ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ಅಧಿಕಾರಿಗಳು, ದಿ ರಾಮೇಶ್ವರಂ ಕೆಫೆ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.

ಬ್ರೂಕ್‌ಫೀಲ್ಡ್‌ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್‌ 1ರಂದು ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು, ಬಾಂಬ್‌ ಇಟ್ಟಿದ್ದವನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಐಎಸ್‌ ಜೊತೆ ನಂಟು ಹೊಂದಿದ್ದ ಶಂಕಿತರು ಕೃತ್ಯ ಎಸಗಿರುವ ಬಗ್ಗೆ ಅಧಿಕಾರಿಗಳು ಅನುಮಾನ ಹೊಂದಿದ್ದಾರೆ. ಇದೇ ಕಾರಣಕ್ಕೆ, ಹಳೇ ಬಾಂಬ್‌ ಸ್ಫೋಟ ಪ್ರಕರಣದ ಆರೋಪಿಗಳನ್ನು ಜೈಲಿನಿಂದ ಕಸ್ಟಡಿಗೆ ಪಡೆದು ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

‘ಐಎಸ್‌ ಜೊತೆ ನಂಟು ಹಾಗೂ ಕೊಯಮತ್ತೂರು ಕಾರು ಬಾಂಬ್ ಸ್ಫೋಟ ಪ್ರಕರಣದಲ್ಲಿ 2024ರ ಫೆಬ್ರುವರಿಯಲ್ಲಿ 21 ಸ್ಥಳಗಳ ಮೇಲೆ ದಾಳಿ ಮಾಡಲಾಗಿತ್ತು. ಚೆನ್ನೈನ ಜಮೀಲ್ ಬಾಷಾ ಉಮರಿ (55), ಕೊಯಮತ್ತೂರು ಮೌಲ್ವಿ ಎಂ. ಮೊಹಮ್ಮದ್ ಹುಸೇನ್ ಅಲಿಯಾಸ್ ಹುಸೇನ್ ಫೈಜಿ (38), ಐ. ಇರ್ಷಾತ್ (32) ಹಾಗೂ ಸೈಯದ್ ಅಬ್ದುರ್ ರಹಮಾನ್ ಉಮರಿಯನ್ನು(52) ಬಂಧಿಸಲಾಗಿತ್ತು. ನಾಲ್ವರೂ ತಮಿಳುನಾಡಿನ ಜೈಲಿನಲ್ಲಿದ್ದರು’ ಎಂದು ತನಿಖಾ ಸಂಸ್ಥೆ ಮೂಲಗಳು ಹೇಳಿವೆ.

‘ದಾಳಿ ಸಂದರ್ಭದಲ್ಲಿ ಶಂಕಿತರಿಂದ 6 ಲ್ಯಾಪ್‌ಟಾಪ್, 25 ಮೊಬೈಲ್, 34 ಸಿಮ್‌ ಕಾರ್ಡ್, 3 ಹಾರ್ಡ್‌ ಡಿಸ್ಕ್‌ ಹಾಗೂ 6 ಎಸ್‌ಡಿ ಕಾರ್ಡ್ ಜಪ್ತಿ ಮಾಡಲಾಗಿತ್ತು. ಇದೇ ಶಂಕಿತರು, ತಮಿಳುನಾಡು, ಕರ್ನಾಟಕ, ಕೇರಳ ಹಾಗೂ ಇತರೆ ರಾಜ್ಯಗಳಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಸಂಗತಿ ತನಿಖೆಯಿಂದ ಕಂಡುಬಂದಿತ್ತು. ಹೀಗಾಗಿ, ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ವಿಚಾರಣೆಗಾಗಿ ನಾಲ್ವರನ್ನೂ ನ್ಯಾಯಾಲಯದ ಅನುಮತಿಯಂತೆ ಸೋಮವಾರ (ಮಾರ್ಚ್ 18) ಕಸ್ಟಡಿಗೆ ಪಡೆಯಲಾಗಿದೆ. ಮಾರ್ಚ್‌ 28ರವರೆಗೆ ವಿಚಾರಣೆ ನಡೆಸಲು ಅವಕಾಶವಿದೆ’ ಎಂದು ಮೂಲಗಳು ತಿಳಿಸಿವೆ.

ಅರೇಬಿಕ್ ಕಾಲೇಜಿನಲ್ಲಿ ಕೆಲಸ: ‘ಶಂಕಿತ ಜಮೀಲ್ ಬಾಷಾ ಉಮರಿ, ಮದ್ರಾಸ್‌ ಅರೇಬಿಕ್ ಕಾಲೇಜು ಶಿಕ್ಷಕರು. ಇವರ ಬಳಿ ಕಲಿತಿದ್ದ ಮೌಲ್ವಿ ಎಂ. ಮೊಹಮ್ಮದ್ ಹುಸೇನ್, ಐ. ಇರ್ಷಾತ್ ಹಾಗೂ ಸೈಯದ್ ಅಬ್ದುರ್ ರಹಮಾನ್ ಉಮರಿ ಸಹ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇವರೆಲ್ಲರೂ ಸೇರಿಕೊಂಡು ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದರು’ ಎಂದು ಮೂಲಗಳು ಹೇಳಿವೆ.

‘ಕಾಲೇಜು ವಿದ್ಯಾರ್ಥಿಗಳು ಹಾಗೂ ಮುಸ್ಲಿಂ ಸಮುದಾಯದ ಯುವಕರನ್ನು ಧಾರ್ಮಿಕವಾಗಿ ಪ್ರಚೋದಿಸುತ್ತಿದ್ದ ಶಂಕಿತರು, ಅವರನ್ನು ಭಯೋತ್ಪಾದನಾ ಸಂಘಟನೆಗೆ ಸೇರಿಸಿಕೊಳ್ಳುತ್ತಿದ್ದರು. ಶಂಕಿತ ಸೈಯದ್ ಅಬ್ದುರ್ ರಹಮಾನ್ ಉಮರಿ, ವಾಟ್ಸ್‌ಆ್ಯಪ್, ಟೆಲಿಗ್ರಾಂ ಹಾಗೂ ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರನ್ನು ಸಂಪರ್ಕಿಸುವ ಜವಾಬ್ದಾರಿ ವಹಿಸಿಕೊಂಡಿದ್ದ.’

‘ಅರೇಬಿಕ ಭಾಷೆ ಕಲಿಸುವ ಸೋಗಿನಲ್ಲಿ ವಿದ್ಯಾರ್ಥಿಗಳನ್ನು ಪ್ರಚೋದಿಸುತ್ತಿದ್ದರು. 2022ರ ಅಕ್ಟೋಬರ್‌ನಲ್ಲಿ ನಡೆದಿದ್ದ ಕಾರು ಬಾಂಬ್ ಸ್ಫೋಟ ಹಾಗೂ ಇತರೆ ಪ್ರಕರಣಗಳಲ್ಲೂ ಶಂಕಿತರು ಭಾಗಿಯಾಗಿರುವ ಮಾಹಿತಿ ಇದೆ’ ಎಂದು ತಿಳಿಸಿವೆ.

ಬಾಂಬ್‌ ಇಟ್ಟವನ ಪರಿಚಯ: ‘ರಾಮೇಶ್ವರಂ ಕೆಫೆಯಲ್ಲಿ ಸಿಕ್ಕಿರುವ ಸ್ಫೋಟಕ ಅವಶೇಷಗಳು ಹಾಗೂ ಕೊಯಮತ್ತೂರು ಕಾರು ಸ್ಫೋಟ ಸ್ಥಳದಲ್ಲಿ ಸಿಕ್ಕ ಅವಶೇಷಗಳಿಗೆ ಹೋಲಿಕೆಯಾಗುತ್ತಿದೆ. ಎರಡೂ ಪ್ರಕರಣಗಳಿಗೂ ಸಾಮ್ಯತೆ ಇರಬಹುದು. ಜಮೀಲ್ ಬಾಷಾ ಉಮರಿಗೆ ಬಾಂಬ್ ಇಟ್ಟವನ ಪರಿಚಯವಿರುವ ಅನುಮಾನವಿದ್ದು, ಇದೇ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಫಿಶ್ ಮಾರ್ಕೆಟ್ ರಸ್ತೆಯ ಮಾಝ್‌ ಮುನೀರ್ ಅಹ್ಮದ್‌ನನ್ನು (26) ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈತನಿಂದ ಕೆಲ ಮಾಹಿತಿ ಲಭ್ಯವಾಗಿದೆ’ ಎಂದು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT