ಹೆಚ್ಚು ಅಪಘಾತಗಳು ಸಂಭವಿಸಿರುವ ಹಾಗೂ ದಟ್ಟಣೆಯಿರುವ ಸ್ಥಳಗಳನ್ನು ಸ್ಕೈವಾಕ್ ನಿರ್ಮಾಣಕ್ಕೆ ಗುರುತಿಸಿದ್ದೇವೆ. ಸ್ಥಳಾವಕಾಶ ಆಧರಿಸಿ ಅಂಡರ್‌ಪಾಸ್ ಅಥವಾ ಸ್ಕೈವಾಕ್ ಯಾವುದನ್ನಾದರೂ ನಿರ್ಮಿಸಬಹುದು.
–ಎಂ.ಎನ್.ಅನುಚೇತ್ ಡಿಸಿಪಿ ಸಂಚಾರ ವಿಭಾಗ
ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಜಾಲಹಳ್ಳಿ ಕ್ರಾಸ್‌ನಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕಾಗಿ ರಸ್ತೆ ಪಕ್ಕದ ಕೆಲವು ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಚುನಾವಣೆ ನಂತರ ಕೆಲಸ ಮುಂದುವರಿಸಲಿಲ್ಲ. ವಾಹನ ದಟ್ಟಣೆಯ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ. ಬೇಗ ಅಂಡರ್‌ಪಾಸ್ ನಿರ್ಮಾಣವಾಗಬೇಕು.
– ವಿನಯ್ (ಅನಿಲ್) ಮೆಡಿಕಲ್ ಸ್ಟೋರ್ ಉದ್ಯೋಗಿ ಜಾಲಹಳ್ಳಿ ಕ್ರಾಸ್
ಮಂದಗತಿ ಕಾಮಗಾರಿ
ಸ್ಕೈವಾಕ್‌ಗಳ ನಿರ್ಮಾಣಕ್ಕೆ ಹೊಸ ಪ್ರಸ್ತಾವ ಸಲ್ಲಿಸುವ ಮುನ್ನವೇ ಅತ್ಯಂತ ದಟ್ಟಣೆ ಪ್ರದೇಶಗಳಲ್ಲಿ ಒಂದಾಗಿರುವ ಜಾಲಹಳ್ಳಿ ಜಂಕ್ಷನ್‌ನಲ್ಲಿ ‘ಗ್ರೇಡ್ ಸೆಪರೇಟರ್’ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈಗಲೂ ಕಾಮಗಾರಿ ಕುಂಟುತ್ತಾ ಸಾಗಿದೆ. ಜಾಲಹಳ್ಳಿಯ ಎಸ್.ಎಂ. ರಸ್ತೆಯಿಂದ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ (ಜಾಲಹಳ್ಳಿ ಕ್ರಾಸ್) ಸಂಪರ್ಕ ಕಲ್ಪಿಸುವ ಈ ಗ್ರೇಡ್ ಸೆಪರೇಟರ್ ಕಾಮಗಾರಿಗೆ 2019ರಲ್ಲೇ ಯೋಜನೆ ರೂಪಿಸಲಾಗಿತ್ತು. ₹ 57 ಕೋಟಿ ವೆಚ್ಚದ ಕಾಗಾರಿಗೆ ಟೆಂಡರ್ ಪ್ರಕ್ರಿಯೆ ನಡೆಸಿ 24 ತಿಂಗಳ ಕಾಲಾವಧಿ ನಿಗದಿ ಪಡಿಸಲಾಗಿತ್ತು. ರಸ್ತೆಯ ಎರಡು ಬದಿಗಳಲ್ಲಿದ್ದ ಕಟ್ಟಡಗಳನ್ನು ತೆರವುಗೊಳಿಸಿದ್ದು ಬಿಟ್ಟರೆ ಗುರುತಿಸುವಂತಹ ಪ್ರಗತಿ ಕಂಡಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ‘ಸದಾ ವಾಹನಗಳು ಹಾಗೂ ಜನರಿಂದ ಗಿಜಿಗುಡುವ ಈ ಜಂಕ್ಷನ್‌ನಲ್ಲಿ ಹೆದ್ದಾರಿ ದಾಟಲು ಸರಿಯಾದ ವ್ಯವಸ್ಥೆಯಿಲ್ಲ. ಪಾದಚಾರಿಗಳು ಆತಂಕದಿಂದಲೇ ರಸ್ತೆ ದಾಟುತ್ತಾರೆ. ಹಲವು ವರ್ಷಗಳಿಂದಲೂ ಈ ಸಮಸ್ಯೆಗೆ ಮುಕ್ತಿಯೇ ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.