ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವು ಕಚ್ಚಿ ಸಾವು | ಪರಿಹಾರ ಒಂದೇ ರೀತಿಯಿರಲಿ: ದಿನೇಶ್‌ ಗುಂಡೂರಾವ್‌

Published 11 ಜುಲೈ 2024, 0:06 IST
Last Updated 11 ಜುಲೈ 2024, 0:06 IST
ಅಕ್ಷರ ಗಾತ್ರ

ಬೆಂಗಳೂರು: ಹಾವು ಕಚ್ಚಿ ಮರಣ ಹೊಂದಿದರೆ ಕೃಷಿಕರು–ಇತರರು ಎಂದು ವಿಂಗಡಿಸದೇ ಪರಿಹಾರ ನೀಡಬೇಕು. ಅದಕ್ಕೆ ಪೂರಕವಾಗಿ ಕ್ರಿಯಾಯೋಜನೆ ರೂಪಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದರು.

ಹಾವು ಕಡಿತದ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಬುಧವಾರ ಹಮ್ಮಿಕೊಂಡಿದ್ದ ರಾಜ್ಯ ಕ್ರಿಯಾ ಯೋಜನೆಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿ ಕೆಲಸದಲ್ಲಿ ಭಾಗಿಯಾಗಿರುವಾಗ ಹಾವು ಕಚ್ಚಿ ಮೃತಪಟ್ಟರೆ ಕೃಷಿ ಇಲಾಖೆಯಿಂದ ₹ 1 ಲಕ್ಷ ಪರಿಹಾರ ನೀಡುವ ಯೋಜನೆ ಜಾರಿಯಲ್ಲಿದೆ. ಮನೆಯಲ್ಲಿ ಅಥವಾ ದಾರಿಯಲ್ಲಿ ಹಾವು ಕಚ್ಚಿ ಸಾವು ಉಂಟಾದರೆ ಯಾವುದೇ ಪರಿಹಾರವಿಲ್ಲ. ಎಲ್ಲರಿಗೂ ಪರಿಹಾರ ಸಿಗುವಂತೆ ನಿಯಮ ಮಾರ್ಪಾಡು ಮಾಡುವುದು ಅಗತ್ಯ ಎಂದು ಹೇಳಿದರು.

‘ರಾಜ್ಯದಲ್ಲಿ ಹಾವು ಕಚ್ಚಿದ ಹೆಚ್ಚಿನ ಪ್ರಕರಣಗಳು ಸರ್ಕಾರದ ಗಮನಕ್ಕೆ ಬರುತ್ತಿರಲಿಲ್ಲ. ಹಾವು ಕಚ್ಚಿ ಸಾವು ಉಂಟಾದರೂ ಕೆಲವಷ್ಟೇ ದಾಖಲಾಗುತ್ತಿದ್ದವು. ಎಲ್ಲ ಪ್ರಕರಣಗಳ ಮಾಹಿತಿ ಸಿಗಬೇಕು. ಎಷ್ಟು ಮಂದಿಗೆ ಹಾವು ಕಚ್ಚಿದೆ? ಅದರಿಂದ ಎಷ್ಟು ಮಂದಿಗೆ ಅಂಗವೈಕಲ್ಯ ಉಂಟಾಗಿದೆ? ಎಷ್ಟು ಮಂದಿ ಮೃತಪಟ್ಟಿದ್ದಾರೆ? ಯಾವ ಪ್ರದೇಶದಲ್ಲಿ ಹಾವು ಕಡಿತ ಹೆಚ್ಚಿದೆ ಎಂಬ ಖಚಿತ ಮಾಹಿತಿ ಸಿಗುವಂತಾಗಬೇಕು. ಅದಕ್ಕಾಗಿಯೇ ಹಾವು ಕಚ್ಚುವ ಪ್ರಕರಣವನ್ನು ಅಧಿಸೂಚಿತ ರೋಗವೆಂದು ಘೋಷಣೆ ಮಾಡಲಾಗಿದೆ’ ಎಂದು ವಿವರಿಸಿದರು.

ಎಲ್ಲ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕೇಂದ್ರಗಳು ನೀಡಿದ ಮಾಹಿತಿ ಪ್ರಕಾರ, ಈ ವರ್ಷ ರಾಜ್ಯದಲ್ಲಿ ಹಾವು ಕಚ್ಚಿದ 5,418 ಪ್ರಕರಣಗಳು ದಾಖಲಾಗಿವೆ. 36 ಜನರು ಮೃತಪಟ್ಟಿದ್ದಾರೆ. ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳು, ಆಯ್ದ ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತ ಚಿಕಿತ್ಸಾ ಕೇಂದ್ರಗಳು ಎಂದು ಗುರುತಿಸಲಾಗಿದೆ. ಅಲ್ಲಿ ದಿನದ 24 ಗಂಟೆಯೂ ಚಿಕಿತ್ಸೆ ದೊರೆಯುವಂತಾಗಬೇಕು ಎಂದು ಸಲಹೆ ನೀಡಿದರು.

ಜಗತ್ತಿನಲ್ಲಿ 2,000 ಪ್ರಭೇದ ಹಾವುಗಳಿವೆ. ಭಾರತದಲ್ಲಿ 310 ಪ್ರಭೇದಗಳಷ್ಟೇ ಕಂಡು ಬಂದಿವೆ. ಅದರಲ್ಲಿ 66 ಪ್ರಭೇದಗಳು ಮಾತ್ರ ವಿಷಕಾರಿಯಾಗಿವೆ. ರಾಜ್ಯದಲ್ಲಿ ಯಾವ ವಿಷಕಾರಿ ಹಾವು ಕಚ್ಚಿದರೆ ಏನು ಪರಿಣಾಮ ಆಗುತ್ತದೆ ಎಂಬ ಸ್ಪಷ್ಟ ಚಿತ್ರಣ ಇರಬೇಕು ಎಂದು ತಿಳಿಸಿದರು.

‘ನಾಟಿ ವೈದ್ಯರಿಗೂ ತರಬೇತಿ ನೀಡಿ’

ಹಾವು ಕಚ್ಚಿದಾಗ ಜನರು ನಾಟಿ ವೈದ್ಯರ ಬಳಿಗೆ ಹೋಗುವುದೇ ಹೆಚ್ಚು. ಹಾಗಾಗಿ ಕ್ರಿಯಾ ಯೋಜನೆಯು ನಾಟಿ ವೈದ್ಯರನ್ನೂ ಒಳಗೊಂಡಿರಬೇಕು. ಹಾವು ಕಡಿತ ಆಗಿ ಅವರ ಬಳಿ ಬಂದಾಗ ಪ್ರಥಮ ಚಿಕಿತ್ಸೆ ನೀಡುವುದು ಹೇಗೆ? ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಏನು ಮಾಡಬೇಕು ಎಂಬ ಬಗ್ಗೆ ಅವರಿಗೂ ತರಬೇತಿ ನೀಡಬೇಕು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT