ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನೌಕರರ ಅನಿರ್ದಿಷ್ಟಾವಧಿ ಧರಣಿ: ಗ್ರಾಮ ಪಂಚಾಯಿತಿ ಸೇವೆ ಇಂದಿನಿಂದ ಬಂದ್‌

ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ, ಸದಸ್ಯರು ಜೊತೆಗೂಡಿ ಧರಣಿ
Published : 3 ಅಕ್ಟೋಬರ್ 2024, 20:05 IST
Last Updated : 3 ಅಕ್ಟೋಬರ್ 2024, 20:05 IST
ಫಾಲೋ ಮಾಡಿ
Comments

ಬೆಂಗಳೂರು: ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಬಲವರ್ಧನೆ ಮತ್ತು ಪಂಚಾಯಿತಿ ಅಧಿಕಾರಿಗಳು ಹಾಗೂ ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು, ನೌಕರರು ಮತ್ತು ಸದಸ್ಯರು ಜೊತೆಗೂಡಿ ಶುಕ್ರವಾರದಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲಿದ್ದಾರೆ. ಇದರಿಂದಾಗಿ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳು ಸ್ತಬ್ಧವಾಗಲಿವೆ.

ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ), ಕಾರ್ಯದರ್ಶಿಗಳು, ಕರ ವಸೂಲಿಗಾರರು, ಗುಮಾಸ್ತರು ಮತ್ತು ಡಾಟಾ ಎಂಟ್ರಿ ಆಪರೇಟರ್‌ಗಳು, ನೀರಗಂಟಿಗಳು, ಜವಾನರು, ಸ್ವಚ್ಛತಾ ಕೆಲಸಗಾರರು, ದ್ವಿತೀಯ ದರ್ಜೆ ಸಹಾಯಕರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಗೆಜೆಟೆಡ್‌ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ್‌ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುವ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು, ನೌಕರರು ಮತ್ತು ಸದಸ್ಯರು ಗುರುವಾರವೇ ರಾಜ್ಯ ರಾಜಧಾನಿಯತ್ತ ಹೊರಟಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಹೋರಾಟ ನಡೆಯಲಿದೆ. ಪಿಡಿಒ ಹುದ್ದೆಗಳನ್ನು ‘ಬಿ’ ಗುಂಪಿನ ಹುದ್ದೆಗಳಾಗಿ ಉನ್ನತೀಕರಿಸುವುದು, ಜ್ಯೇಷ್ಠತಾ ಪಟ್ಟಿ ಅಂತಿಮಗೊಳಿಸುವುದು, ವಿವಿಧ ವೃಂದಗಳ ನೌಕರರಿಗೆ ಸಕಾಲಕ್ಕೆ ಬಡ್ತಿ ನೀಡುವುದು, ಕಾರ್ಮಿಕರ ರಾಜ್ಯ ವಿಮೆ ಮತ್ತು ಭವಿಷ್ಯ ನಿಧಿ ನೀಡುವುದು, ನೇರ ನೇಮಕಾತಿಯಲ್ಲಿ ಆದ್ಯತೆ ನೀಡುವುದು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಹುದ್ದೆಗಳಲ್ಲಿ ಪಂಚಾಯತ್‌ ರಾಜ್‌ ಇಲಾಖೆಯ ಗೆಜೆಟೆಡ್ ಅಧಿಕಾರಿಗಳಿಗೆ ಮೀಸಲು ನೀಡಬೇಕೆಂಬ ಬೇಡಿಕೆಗಳನ್ನು ಅಧಿಕಾರಿಗಳು ಮತ್ತು ನೌಕರರು ಮುಂದಿಟ್ಟಿದ್ದಾರೆ.

ಸ್ವಾಯತ್ತತೆಗೆ ಆಗ್ರಹ: ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಕಾಯ್ದೆಯಲ್ಲಿರುವ ಜವಾಬ್ದಾರಿ ನಕ್ಷೆಯಂತೆ ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ನೀಡುವುದು,ಕರ್ನಾಟಕ ಅಭಿವೃದ್ಧಿ ಸಭೆಗಳ ಬಲವರ್ಧನೆ ಮಾಡುವುದು, ಸ್ಥಾಯಿ ಸಮಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವುದು, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರನ್ನು ರಾಜ್ಯ ಶಿಷ್ಟಾಚಾರದ ವ್ಯಾಪ್ತಿಗೆ ತರುವುದು, ಕೇರಳ ಮಾದರಿಯಲ್ಲಿ ವೇತನ ಮತ್ತು ಭತ್ಯೆ ಪಾವತಿ, ಗ್ರಾಮ ಪಂಚಾಯಿತಿಗಳ ವಿದ್ಯುತ್‌ ಬಿಲ್‌ ಬಾಕಿ ಸಮಸ್ಯೆ ಪರಿಹರಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟ ಮಂಡಿಸಿದೆ.

‘ನಮ್ಮ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸದೇ ಇರುವುದರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸುತ್ತಿದ್ದೇವೆ. ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಶುಕ್ರವಾರದಿಂದ ಯಾವುದೇ ಸೇವೆ ದೊರಕುವುದಿಲ್ಲ. 40,000ಕ್ಕೂ ಹೆಚ್ಚು ಮಂದಿ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸುವವರೆಗೂ ಹೋರಾಟ ಮುಂದುವರಿಯಲಿದೆ’ ಎಂದು ರಾಜ್ಯ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ರಾಜು ವಾರದ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT