ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುವತಿಗೆ ಕಿರುಕುಳ: ಪಿ.ಜಿ ಮಾಲೀಕನ ಬಂಧನ

‘ಡೇಟಿಂಗ್‌ ಆ್ಯಪ್‌’ನಲ್ಲಿ ಯುವತಿ ಖಾಸಗಿ ಮಾಹಿತಿ, ಫೋಟೊ ಅಪ್‌ಲೋಡ್‌ ಮಾಡಿದ್ದ ಆರೋಪಿ
Published 7 ಜುಲೈ 2024, 18:50 IST
Last Updated 7 ಜುಲೈ 2024, 18:50 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಮಾಧ್ಯಮದಲ್ಲಿ ಪೇಯಿಂಗ್ ಗೆಸ್ಟ್‌ನ(ಪಿ.ಜಿ) ಅವ್ಯವಸ್ಥೆಯ ಬಗ್ಗೆ ವಿಮರ್ಶೆ ಮಾಡಿದ್ದ ಯುವತಿಯ ವೈಯಕ್ತಿಕ ಮಾಹಿತಿಯನ್ನು ‘ಡೇಟಿಂಗ್ ಆ್ಯಪ್‌’ನಲ್ಲಿ ಪೋಸ್ಟ್‌ ಮಾಡಿ ಕಿರುಕುಳ ನೀಡಿದ್ದ ಪಿ.ಜಿ ಮಾಲೀಕನನ್ನು ಪೂರ್ವ ವಿಭಾಗದ ಸೆನ್ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಶೇಷಾದ್ರಿಪುರ ನಿವಾಸಿ ಆನಂದ್ ಶರ್ಮಾ(32) ಬಂಧಿತ ಆರೋಪಿ.

‘ಆರೋಪಿಯ ಮೊಬೈಲ್ ಜಪ್ತಿ ಮಾಡಲಾಗಿದೆ. 24 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.

‘ರಾಜಸ್ಥಾನ ಮೂಲದ ಆನಂದ್ ಶರ್ಮಾ ಅವರು ಶೇಷಾದ್ರಿಪುರದಲ್ಲಿ ‘ವಿ–ಸ್ಟೇಜ್‌’ ಹೆಸರಿನ ಪಿ.ಜಿ ನಡೆಸುತ್ತಿದ್ದಾರೆ. ಇದೇ ಪಿ.ಜಿಯಲ್ಲಿ ದೂರು ನೀಡಿದ್ದ ಯುವತಿ ಕೆಲವು ತಿಂಗಳಿಂದ ನೆಲೆಸಿದ್ದರು. ಪಿ.ಜಿಯಲ್ಲಿ ಸರಿಯಾದ ವ್ಯವಸ್ಥೆ ಇರಲಿಲ್ಲ ಎಂಬ ಕಾರಣಕ್ಕೆ ಆಕೆ ಪಿ.ಜಿ ತೊರೆದು ಬೇರೊಂದು ಪಿ.ಜಿಗೆ ಹೋಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಯುವತಿ ಮಾಡಿದ್ದ ವಿಮರ್ಶೆ ಗಮನಿಸಿದ್ದ ಆರೋಪಿ, ಆಕೆಗೆ ಬುದ್ದಿ ಕಲಿಸಬೇಕೆಂದು ನಿರ್ಧರಿಸಿ ಕಿರುಕುಳ ನೀಡಿದ್ದರು’ ಎಂದು ಪೊಲೀಸರು ಹೇಳಿದರು.

‘ಕಾಲ್‌ ಗರ್ಲ್‌’ ಎಂದು ಬಿಂಬಿಸಿದ್ದ ಆರೋಪಿ’:
‘ಯುವತಿ ಪಿ.ಜಿ ಸೇರುವಾಗ ತನ್ನ ವೈಯಕ್ತಿಕ ದಾಖಲೆಗಳನ್ನು ಪಿ.ಜಿ ಮಾಲೀಕರಿಗೆ ನೀಡಿದ್ದರು. ಆ ಎಲ್ಲ ಮಾಹಿತಿಯನ್ನು ಆನಂದ್ ಶರ್ಮಾ ಅವರು ‘ಲೋಕ್ಯಾಂಟೊ’ ಎಂಬ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ಅಲ್ಲದೆ, ಯುವತಿಯ ಪೋಟೊವನ್ನು ಅಪ್‌ಲೋಡ್ ಮಾಡಿ, ‘ಕಾಲ್ ಗರ್ಲ್‌’ ಎಂದು ಬಿಂಬಿಸಿದ್ದರು. ಹೀಗಾಗಿ ಆಕೆಗೆ ಕೆಲವು ಯುವಕರಿಂದ ಕರೆಗಳು ಬರುತ್ತಿದ್ದವು. ಅಲ್ಲದೇ ಆಕೆಯ ಮೊಬೈಲ್‌ ಸಂಖ್ಯೆಯನ್ನೂ ಆರೋಪಿ ತನ್ನ ಆಪ್ತ ಬಳಗದಲ್ಲಿ ಹಂಚಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

ತಪ್ಪೊಪ್ಪಿಕೊಂಡ ಆರೋಪಿ:
‘ವಿಚಾರಣೆ ವೇಳೆ ಕೃತ್ಯ ಎಸಗಿರುವ ಬಗ್ಗೆ ಆರೋಪಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT