ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಕ್ಸೊ ಪ್ರಕರಣದ ಆರೋಪಿಗೆ ಹೈಕೋರ್ಟ್ ಜಾಮೀನು

Published 29 ಜೂನ್ 2024, 20:21 IST
Last Updated 29 ಜೂನ್ 2024, 20:21 IST
ಅಕ್ಷರ ಗಾತ್ರ

ಬೆಂಗಳೂರು: ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ-2012) ಪ್ರಕರಣದ ಆರೋಪಿಯೊಬ್ಬರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು‌‌ ಮಂಜೂರು ಮಾಡಿದೆ.

ಈ ಕುರಿತಂತೆ ಜಾಮೀನು ಕೋರಿ ಆರೋಪಿ 21 ವರ್ಷದ ಯುವಕ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

‘ಆರೋಪಿ ಸಂತ್ರಸ್ತೆಯನ್ನು ಮದುವೆಯಾಗಿದ್ದಾರೆ. ಸದ್ಯ ಆಕೆ ಗಂಡನ (ಆರೋಪಿ) ಮನೆಯಲ್ಲೇ ಇದ್ದಾಳೆ. ಆಕೆಗೆ ಈಗ ಗರ್ಭಪಾತವನ್ನೂ ಮಾಡಿಸಲಾಗಿದೆ. ಅಂತೆಯೇ, ಶಾಲಾ ದಾಖಲಾತಿ ಪ್ರಕಾರ ಸಂತ್ರಸ್ತೆಗೆ ಈಗ 18 ವರ್ಷ ತುಂಬಿದೆ’ ಎಂಬ ಅಂಶಗಳ ಆಧಾರದಡಿ ನ್ಯಾಯಪೀಠ ಆರೋಪಿಗೆ ಜಾಮೀನು ನೀಡಿದೆ.

‘ಆರೋಪಿಯು ₹ 2 ಲಕ್ಷ‌ ಮೊತ್ತದ ಬಾಂಡ್, ಇಬ್ಬರ ಶ್ಯೂರಿಟಿ, ಯಾವುದೇ ಅಪರಾಧ ಎಸಗಬಾರದು, ಸಾಕ್ಷ್ಯ ನಾಶ ಮಾಡಬಾರದು, ಅಗತ್ಯವಿದ್ದಾಗ ವಿಚಾರಣಾ ಕೋರ್ಟ್ ಗೆ ಹಾಜರಾಗಬೇಕು’ ಎಂಬ ಷರತ್ತುಗಳನ್ನು ವಿಧಿಸಲಾಗಿದೆ‌.

ಪ್ರಕರಣವೇನು?: ‘ನಾನು ಗಾರೆ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದೇನೆ. ನನ್ನ ಮಗಳು ಇತ್ತೀಚೆಗೆ ಮನೆ ಬಿಟ್ಟು ಹೋಗಿ ಇದೇ ನಗರದಲ್ಲಿರುವ ನಮ್ಮ ಹತ್ತಿರದ ಸಂಬಂಧಿಕರ ಮನೆಯಲ್ಲಿದ್ದಳು. ಕೇವಲ ಮೂರನೇ ತರಗತಿವರೆಗೆ ಓದಿದ್ದ ಆಕೆ ಅಲ್ಲಿ ಚೆನ್ನಾಗಿರುತ್ತಾಳೆ ಎಂದು ತಿಳಿದಿದ್ದೆವು. ಈ ದಿನಗಳಲ್ಲಿ ಆರೋಪಿಯು ನನ್ನ ಮಗಳನ್ನು ಪುಸಲಾಯಿಸಿ ಮದುವೆ ಮಾಡಿಕೊಂಡಿದ್ದ. ಅದೊಂದು ದಿ‌ನ ಆಕೆ ರಸ್ತೆಯಲ್ಲಿ ತಲೆ ಸುತ್ತು ಬಂದು ಬಿದ್ದಿದ್ದಾಳೆ ಎಂಬ ಸುದ್ದಿ ತಿಳಿದು ತಕ್ಷಣವೇ ಸ್ಥಳಕ್ಕೆ ಹೋಗಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದೆ‌. ಪರೀಕ್ಷಿಸಿದ ವೈದ್ಯರು ಈಕೆ ಈಗ ಐದು ತಿಂಗಳ ಗರ್ಭಿಣಿ ಎಂದು ತಿಳಿಸಿದರು ಮತ್ತು ಇನ್ನೂ 18 ವರ್ಷವಾಗಿಲ್ಲ ಎಂಬುದನ್ನು ಗಮನಕ್ಕೆ ತಂದಿದ್ದರು’ ಎಂದು ಸಂತ್ರಸ್ತ ಬಾಲಕಿಯ ತಾಯಿ ದೂರಿನಲ್ಲಿ ವಿವರಿಸಿದ್ದರು.

ನಗರ ಪೊಲೀಸರು 2024ರ ಮಾರ್ಚ್ 15ರಂದು ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯ ವಿವಿಧ ಕಲಂಗಳಡಿ ದೂರು ದಾಖಲಿಸಿಕೊಂಡಿದ್ದರು. ಆರೋಪಿಯು 2024ರ ಮಾರ್ಚ್ 16 ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಸಂತ್ರಸ್ತೆಯ ಪರ ಹೈಕೋರ್ಟ್ ವಕೀಲರಾದ ಕೆ.ರಾಘವೇಂದ್ರ ಮತ್ತು ಆರೋಪಿಯ ಪರ ಡಿ.ಮೋಹನ್ ಕುಮಾರ್ ವಾದ ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT