ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದರ್ಶನ್‌ಗೆ ಆತಿಥ್ಯ: ನಾಗ, ವೇಲು ಪೋಲಿಸರ ವಶಕ್ಕೆ

ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿದ ಪ್ರಕರಣದ ತನಿಖೆ ಚುರುಕು
Published : 19 ಸೆಪ್ಟೆಂಬರ್ 2024, 22:30 IST
Last Updated : 19 ಸೆಪ್ಟೆಂಬರ್ 2024, 22:30 IST
ಫಾಲೋ ಮಾಡಿ
Comments

ಬೆಂಗಳೂರು: ನಟ ದರ್ಶನ್‌ ಅವರಿಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿದ ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆ ನಡೆಸಲು ರೌಡಿಶೀಟರ್‌ ವಿಲ್ಸನ್‌ ಗಾರ್ಡನ್‌ ನಾಗ ಅಲಿಯಾಸ್‌ ನಾಗರಾಜ್‌ ಹಾಗೂ ವೇಲು ಅವರನ್ನು ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಗುರುವಾರ ಸಂಜೆ ತ‌ಮ್ಮ ವಶಕ್ಕೆ ಪಡೆದುಕೊಂಡರು.

ಜೈಲಿನಲ್ಲಿ ವಿಶೇಷ ಆತಿಥ್ಯ ಪ್ರಕರಣ ಸಂಬಂಧ ಮೂರು ಎಫ್‌ಐಆರ್‌ಗಳು ದಾಖಲಾಗಿದ್ದವು. ವಿಶೇಷ ಆತಿಥ್ಯ ನೀಡಿದ್ದ ಪ್ರಕರಣದಲ್ಲಿ ಕಸ್ಟಡಿಗೆ ಪಡೆದಿರುವ ಪೊಲೀಸರು, ಹುಳಿಮಾವು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ತನಿಖೆ ನಡೆಸುತ್ತಿದ್ದಾರೆ. ಇಬ್ಬರನ್ನೂ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಸೆಲ್‌ನಲ್ಲಿ ಇರಿಸಲಾಗಿದೆ.

ನಾಗ ಮತ್ತು ವೇಲು ಅವರನ್ನು ಗುರುವಾರ ಬೆಳಿಗ್ಗೆ ನ್ಯಾಯಾಲಯದ ಎದುರು ಹಾಜರುಪಡಿಸಿದ್ದ ಪೊಲೀಸರು, ಜೈಲಿನ ಒಳಗೆ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ. ನಾಗನ ಬಳಿ ಮೊಬೈಲ್​ಗಳು ಪತ್ತೆಯಾಗಿದ್ದು, ವಿಚಾರಣೆಗೆ ತಮ್ಮ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿದ್ದರು. ನ್ಯಾಯಾಧೀಶರು ಸಮ್ಮತಿ ನೀಡಿದ ಬಳಿಕ ಇಬ್ಬರೂ ವಿಚಾರಣಾಧೀನ ಕೈದಿಗಳನ್ನು ‘ಬಾಡಿ ವಾರಂಟ್‌’ ಮೇಲೆ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡರು.

‘ಆಗಸ್ಟ್‌ 22ರಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿಶೇಷ ಬ್ಯಾರಕ್‌ ಎದುರು ಟೀ–ಪಾರ್ಟಿ ಆಯೋಜಿಸಿದ್ದು ವಿಲ್ಸನ್‌ ಗಾರ್ಡನ್‌ ನಾಗ. ಅಂದು ಸಂಜೆ ನಾನಿದ್ದ ಬ್ಯಾರಕ್‌ಗೆ ವ್ಯಕ್ತಿಯೊಬ್ಬ ಬಂದು, ‘ನಮ್ಮ ಬಾಸ್ ನಾಗ ಬರಲು ಹೇಳಿದ್ದಾರೆ’ ಎಂದರು. ನಾನು ಎದ್ದು ಹೋಗಿದ್ದೆ. ಅವರು ಕುರ್ಚಿಯಲ್ಲಿ ಕುಳಿತುಕೊಳ್ಳಲು ಹೇಳಿ ಸಿಗರೇಟ್‌, ಟೀ ನೀಡಿದ್ದರು. ನಾನು ಯಾರಿಗೂ ಸಿಗರೇಟ್, ಟೀ ಬೇಕೆಂದು ಕೇಳಿಲ್ಲ’ ಎಂಬುದಾಗಿ ರೇಣುಕಸ್ವಾಮಿ ಕೊಲೆ ಪ್ರಕರಣ ಆರೋಪಿ ದರ್ಶನ್‌ ಅವರು ಪೊಲೀಸರ ವಿಚಾರಣೆ ವೇಳೆ ಹೇಳಿಕೆ ನೀಡಿದ್ದರು. ಆ ಹೇಳಿಕೆ ಆಧರಿಸಿ ಇಬ್ಬರನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಶೇಷ ಆತಿಥ್ಯದ ಬಳಿಕ ದರ್ಶನ್‌ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. 

ಬೆಳಗಾವಿ ಜೈಲಿಗೆ ನಾಗ: ಕೊಲೆ ಪ್ರಕರಣದಲ್ಲಿ ನ್ಯಾಯಾಂಗದ ಬಂಧನದಲ್ಲಿರುವ ನಾಗ ಹಾಗೂ ಸಹಚರರನ್ನು ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲು ನ್ಯಾಯಾಲಯ ಆದೇಶ ನೀಡಿದೆ. ಪೊಲೀಸರ ವಿಚಾರಣೆ ಮುಕ್ತಾಯವಾದ ಬಳಿಕ ಸ್ಥಳಾಂತರ ಮಾಡಲಾಗುವುದು ಎಂದು ಕಾರಾಗೃಹ ಇಲಾಖೆ ಮೂಲಗಳು ತಿಳಿಸಿವೆ.

ವಿಶೇಷ ಆತಿಥ್ಯ ಪ್ರಕರಣದ ತನಿಖಾಧಿಕಾರಿ ಆಗಿರುವ ಸಿಸಿಬಿ ಜಂಟಿ ಕಮಿಷನರ್‌ ಚಂದ್ರಗುಪ್ತ ಅವರು ಗುರುವಾರ ಕಾರಾಗೃಹಕ್ಕೆ ಭೇಟಿ ನೀಡಿ, ಪ್ರಕರಣದ ಸಂಬಂಧ ಮಾಹಿತಿ ಕಲೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT