ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಾವಿದರ ಮಾಸಾಶನ ₹3 ಸಾವಿರಕ್ಕೆ ಹೆಚ್ಚಳ: ಸಿದ್ದರಾಮಯ್ಯ ಭರವಸೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ * ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪ್ರದಾನ
Published : 19 ಸೆಪ್ಟೆಂಬರ್ 2024, 16:05 IST
Last Updated : 19 ಸೆಪ್ಟೆಂಬರ್ 2024, 16:05 IST
ಫಾಲೋ ಮಾಡಿ
Comments

ಬೆಂಗಳೂರು: ‘ಸಂಕಷ್ಟದಲ್ಲಿರುವ ಕಲಾವಿದರಿಗೆ ನೀಡಲಾಗುತ್ತಿರುವ ಮಾಸಾಶನವನ್ನು ಮುಂದಿನ ವರ್ಷದಿಂದ ₹ 3 ಸಾವಿರಕ್ಕೆ ಹೆಚ್ಚಿಸಲಾಗುತ್ತದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಕರ್ನಾಟಕ ನಾಟಕ ಅಕಾಡೆಮಿ ನಗರದಲ್ಲಿ ಗುರುವಾರ ಹಮ್ಮಿಕೊಂಡ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2022–23ನೇ ಸಾಲಿನ, 2023–24ನೇ ಸಾಲಿನ ಹಾಗೂ 2024–25ನೇ ಸಾಲಿನ ಪ್ರಶಸ್ತಿ ವಿತರಿಸಿ, ಮಾತನಾಡಿದರು.

‘ಸದ್ಯ ಪ್ರತಿ ತಿಂಗಳು ₹ 2 ಸಾವಿರ ಮಾಸಾಶನ ನೀಡಲಾಗುತ್ತಿದೆ. 12 ಸಾವಿರಕ್ಕೂ ಅಧಿಕ ಕಲಾವಿದರು ಮಾಸಾಶನ ಪಡೆಯುತ್ತಿದ್ದಾರೆ. ಮುಂದಿನ ವರ್ಷದಿಂದ ಮಾಸಾಶನ ಹೆಚ್ಚಿಸಲಾಗುತ್ತದೆ. ಹಿಂದೆ ನಾವು ಅಧಿಕಾರದಲ್ಲಿ ಇದ್ದಾಗ ಅಕಾಡೆಮಿಗಳಿಗೆ ಹೆಚ್ಚಿನ ಅನುದಾನ ಒದಗಿಸುತ್ತಿದ್ದವು. ಬಳಿಕ ಬಂದ ಸರ್ಕಾರಗಳು ಅನುದಾನ ಕಡಿತ ಮಾಡಿದವು. ನಾವು ಈಗ ಹೆಚ್ಚಿನ ಅನುದಾನ ನೀಡಿದ್ದೇವೆ. ಮುಂದಿನ ವರ್ಷ ಅಕಾಡೆಮಿಗಳಿಗೆ ನೀಡುವ ಅನುದಾನವನ್ನು ಇನ್ನಷ್ಟು ಹೆಚ್ಚಳ ಮಾಡುತ್ತೇವೆ’ ಎಂದು ಹೇಳಿದರು.

‘ಪ್ರಶಸ್ತಿಗಳನ್ನು ಎರಡು ಮೂರು ವರ್ಷಗಳು ನಿಲ್ಲಿಸಿ, ಬಳಿಕ ವಿತರಿಸುವ ಕೆಲಸವನ್ನು ನಾವು ಮಾಡುವುದಿಲ್ಲ. ಆಯಾ ವರ್ಷದ ಪ್ರಶಸ್ತಿಗಳನ್ನು ಅದೇ ವರ್ಷ ವಿತರಿಸುತ್ತೇವೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಮಾತನಾಡಿ, ‘ಹಿಂದಿನ ಸರ್ಕಾರ ಕಲಾವಿದರು ಹಾಗೂ ಸಾಹಿತಿಗಳನ್ನು ಕಡೆಗಣಿಸಿತ್ತು. ಇದರಿಂದಾಗಿ ಮೂರು ವರ್ಷಗಳಿಂದ ವಿವಿಧ ವಾರ್ಷಿಕ ಪ್ರಶಸ್ತಿಗಳ ಪ್ರದಾನ ನಡೆದಿರಲಿಲ್ಲ. ಅಕಾಡೆಮಿಗಳಿಗೆ ಕಾರ್ಯಕಾರಿ ಸಮಿತಿಯನ್ನೂ ನೇಮಿಸಿರಲಿಲ್ಲ. ನಮ್ಮ ಸರ್ಕಾರವು ಈ ಕೊರತೆಯನ್ನು ನೀಗಿಸಿ, ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡುತ್ತಿದೆ. ಅಕಾಡೆಮಿಗಳಿಗೂ ಹೆಚ್ಚಿನ ಅನುದಾನ ಒದಗಿಸಲಾಗುತ್ತಿದೆ. ಸಂಕಷ್ಟದಲ್ಲಿರುವ 12,543 ಕಲಾವಿದರಿಗೆ ಮಾಸಾಶನ ನೀಡಲಾಗುತ್ತಿದೆ. ಈ ವರ್ಷ ಇನ್ನಷ್ಟು ಮಂದಿಗೆ ಮಾಸಾಶನ ನೀಡಲು ಕ್ರಮವಹಿಸಲಾಗಿದೆ’ ಎಂದರು.

ಕರ್ನಾಟಕ ನಾಟಕ ಆಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ‘ಕನ್ನಡ ರಂಗಭೂಮಿಯು ಮೂರು ವರ್ಷಗಳಿಂದ ಸ್ತಬ್ಧವಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸರ್ಕಾರಕ್ಕೆ ಆದಾಯ ತರದಿದ್ದರೂ ಗೌರವ ತರಲಿದೆ. ಇದನ್ನು ಅರಿತು ಈಗಿನ ಸರ್ಕಾರ ಕಲೆ ಮತ್ತು ಸಾಹಿತ್ಯಕ್ಕೆ ಅಗತ್ಯ ಪ್ರೋತ್ಸಾಹ ನೀಡುತ್ತಿದೆ’ ಎಂದರು.

ಕೇರಳದ ರಂಗಭೂಮಿ ಕಲಾವಿದ ಚಂದ್ರದಾಸನ್, ಮುಂಬೈ ರಂಗಭೂಮಿ ಕಲಾವಿದ ಗಣೇಶ್ ಯಾದವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ. ಧರಣೀದೇವಿ, ಕರ್ನಾಟಕ ನಾಟಕ ಅಕಾಡೆಮಿ ರಿಜಿಸ್ಟ್ರಾರ್ ನಿರ್ಮಲಾ ಮಠಪತಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT