ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಸಿ.ಜನರಲ್: ₹ 200 ಕೋಟಿಯಲ್ಲಿ ಅಭಿವೃದ್ಧಿ- ಆರೋಗ್ಯ ಸಚಿವ ದಿನೇಶ್

ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
Published 29 ಜೂನ್ 2024, 20:20 IST
Last Updated 29 ಜೂನ್ 2024, 20:20 IST
ಅಕ್ಷರ ಗಾತ್ರ

ಬೆಂಗಳೂರು: ‘ಮಲ್ಲೇಶ್ವರದಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ₹ 200 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಟ್ರಾಮಾ ಸೆಂಟರ್, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ವೇಳೆ ‘₹ 200 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸುವ ಮೂಲಕ ಜನರಿಗೆ ಗುಣಮಟ್ಟದ ಸೇವೆ ಒದಗಿಸಲು ಕ್ರಮವಹಿಸಲಾಗುವುದು’ ಎಂದು ಹೇಳಿದರು.

ಆಸ್ಪತ್ರೆ ಆವರಣದಲ್ಲಿ ₹ 35 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 50 ಹಾಸಿಗೆಗಳ ಟ್ರಾಮಾಕೇರ್ ಸೆಂಟರ್ ಕಾಮಗಾರಿ ಪರಿಶೀಲಿಸಿ, ಮುಂಬರುವ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು. ಆಸ್ಪತ್ರೆಯಲ್ಲಿನ ತುರ್ತು ನಿಗಾ ಘಟಕವನ್ನು ನೂತನವಾಗಿ ನಿರ್ಮಾಣಗೊಳ್ಳಲಿರುವ ಟ್ರಾಮಾಕೇರ್ ಸೆಂಟರ್‌ಗೆ ಸ್ಥಳಾಂತರಿಸುವ ಬಗ್ಗೆಯೂ ಚರ್ಚಿಸಿದರು.

‘ಆಸ್ಪತ್ರೆ ಆವರಣದಲ್ಲಿ ₹ 66.78 ಕೋಟಿ ವೆಚ್ಚದಲ್ಲಿ 200 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡದ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ. ಇದರ ಶಂಕುಸ್ಥಾಪನೆ ಕಾರ್ಯಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವ ರೋಗಿಗಳು ಔಷಧಕ್ಕಾಗಿ ಹೊರಗೆ ಹೋಗುವ ಸ್ಥಿತಿ ತಪ್ಪಬೇಕು. ಹಾಗಾಗಿ, ಆಸ್ಪತ್ರೆ ಆವರಣದಲ್ಲಿರುವ ಖಾಸಗಿ ಔಷಧಾಲಯಗಳಿಗೆ ಗೇಟ್ ಪಾಸ್ ನೀಡಿ, ಸರ್ಕಾರಿ ಔಷಧಾಲಯವನ್ನೇ ಮಧ್ಯರಾತ್ರಿವರೆಗೂ ತೆರೆಯಲು ಸಿಬ್ಬಂದಿ ನೇಮಕ ಸೇರಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ಹೃದಯಾಘಾತ ಸೇರಿ ಹೃದಯ ಸಂಬಂಧಿ ಸಮಸ್ಯೆಗೆ ಬರುವವರಿಗೆ ತುರ್ತು ಚಿಕಿತ್ಸೆ ನೀಡಲು ಸ್ಥಾಪಿಸಿರುವ ಜಯದೇವ ಹೃದ್ರೋಗ ಘಟಕವು ರಾತ್ರಿ 10 ಗಂಟೆಯವರೆಗೂ ಕಾರ್ಯನಿರ್ವಹಿಸುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಇಂದರಾ ಕಬಾಡೆ, ಸ್ಥಾನಿಕ ವೈದ್ಯಾಧಿಕಾರಿ ಡಾ. ಮೋಹನ್ ಸೇರಿ ಇಲಾಖೆ ಹಾಗೂ ಆಸ್ಪತ್ರೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಆಸ್ಪತ್ರೆಯಲ್ಲಿನ ಅಭಿವೃದ್ಧಿ ಕಾಮಗಾರಿಗಳು

। ₹ 38.28 ಕೋಟಿ ವೆಚ್ಚದಲ್ಲಿ ಬೋಧಕ ವಿಭಾಗ ಕಟ್ಟಡ ನಿರ್ಮಾಣ । ₹ 4.28 ಕೋಟಿ ವೆಚ್ಚದಲ್ಲಿ ಶವಾಗಾರ ಕೊಠಡಿ ನಿರ್ಮಾಣ । ₹ 4.80 ಕೋಟಿ ವೆಚ್ಚದಲ್ಲಿ ಅಗ್ನಿ ಶಾಮಕ ವ್ಯವಸ್ಥೆ । ₹ 2 ಕೋಟಿ ವೆಚ್ಚದಲ್ಲಿ ಲಾಂಡ್ರಿ ವ್ಯವಸ್ಥೆ । ₹ 38 ಲಕ್ಷ ವೆಚ್ಚದಲ್ಲಿ ಜೈವಿಕ ವೈದ್ಯಕೀಯ ತ್ಯಾಜ್ಯ ಘಟಕ । ಮುರಿದು ಬಿದ್ದಿರುವ ಆರ್‌ಸಿಸಿ ಸಜ್ಜಾಗಳ ಮರು ನಿರ್ಮಾಣ ಶೌಚಾಲಯಗಳಲ್ಲಿನ ನೀರು ಸರಬರಾಜು ಮತ್ತು ನೈರ್ಮಲೀಕರಣ ವ್ಯವಸ್ಥೆ ಸೇರಿ ಆಸ್ಪತ್ರೆಯ ಹಳೆಯ ಕಟ್ಟಡಗಳ ದುರಸ್ತಿಗಾಗಿ ಸರ್ಕಾರಕ್ಕೆ ₹ 9.98 ಕೋಟಿ ವೆಚ್ಚದ ಪ್ರಸ್ತಾವನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT