ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ಪ್ರಕಾಶನ, ಮಾರಾಟದಲ್ಲಿ ಹೊಸತನ ಬರಲಿ: ಎಚ್‌.ಎನ್‌. ನಾಗಮೋಹನದಾಸ್‌

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಚ್‌.ಎನ್‌. ನಾಗಮೋಹನದಾಸ್‌
Published : 8 ಜುಲೈ 2024, 21:33 IST
Last Updated : 8 ಜುಲೈ 2024, 21:33 IST
ಫಾಲೋ ಮಾಡಿ
Comments

ಬೆಂಗಳೂರು: ‘ಪುಸ್ತಕ ಪ್ರಕಾಶಕರು ಮತ್ತು ಸರ್ಕಾರವು ಹೊಸ ಕಾರ್ಯವಿಧಾನಗಳನ್ನು ಕಂಡುಕೊಂಡು ಓದುಗರಿಗೆ ಪುಸ್ತಕ ತಲುಪಿಸುವ ಕೆಲಸ ಮಾಡಬೇಕು’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನದಾಸ್‌ ಅವರು ಸಲಹೆ ಮಾಡಿದರು.

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅಮೆರಿಕದಲ್ಲಿ ಪುಸ್ತಕ ಖರೀದಿಸಿ, ಓದಿದ ನಂತರ ಹಾಳು ಮಾಡದೇ ಮೂರು ದಿನಗಳಲ್ಲಿ ವಾಪಸು ಮಾಡಿದರೆ ಪುಸ್ತಕ ದರದ ಶೇ 75ರಷ್ಟು ವಾಪಸು ನೀಡುತ್ತಾರೆ. 1 ವಾರದಲ್ಲಿ ವಾಪಸು ಮಾಡಿದರೆ ಶೇ 50, 3 ವಾರಗಳಲ್ಲಿ ವಾಪಸು ಮಾಡಿದರೆ ಶೇ 25 ದರ ವಾಪಸು ಮಾಡುತ್ತಾರೆ. ಅಂಥ ಪದ್ಧತಿ ನಮ್ಮಲ್ಲೂ ಬರಬೇಕು’ ಎಂದು ಸಲಹೆ ನೀಡಿದರು.

‘ಅಲ್ಲಿನ ನ್ಯಾಯಾಲಯದಲ್ಲಿ ಒಂದು ತೀರ್ಪು ಬಂದರೆ ಬರಹಗಾರರು ಜಾಲಾಡಿಸಿಬಿಡುತ್ತಾರೆ. ವಿಮರ್ಶಿಸುತ್ತಾರೆ. ಪ್ರಶ್ನೆ ಮಾಡುತ್ತಾರೆ. ಆ ಬಗ್ಗೆ ಪುಸ್ತಕವನ್ನೇ ತರುತ್ತಾರೆ. ಆದರೆ, ನಮ್ಮಲ್ಲಿ ತೀರ್ಪುಗಳನ್ನು ಓದುವ ಅಭ್ಯಾಸವೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಬರವಣಿಗೆಯಲ್ಲಿ ಯಾರಿಗಾದರೂ ಮಾನನಷ್ಟ ಉಂಟು ಮಾಡಿದರೆ ಬರಹಗಾರನ ಜೊತೆಗೆ ಪ್ರಕಾಶಕನೂ ಜವಾಬ್ದಾರಿ. ಇಂಥ ಒಂದು ಮೊಕದ್ದಮೆ ಹೂಡಿದರೆ ಪ್ರಕಾಶಕ ದುಡಿದಿರುವುದನ್ನೆಲ್ಲ ಅದಕ್ಕೆ ವೆಚ್ಚ ಮಾಡಬೇಕಾಗುತ್ತದೆ. ಇದನ್ನು ತಪ್ಪಿಸಲು ವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದರು.

ಕಾನೂನು ಪುಸ್ತಕದಿಂದ ‘ಕ್ರಿಮಿನಲ್‌ ಕಂಟೆಂಟ್‌ ಆಫ್‌ ಕೋರ್ಟ್‌’, ‘ಕ್ರಿಮಿನಲ್‌ ಡಿಫರ್ಮೇಶನ್‌’, ‘ಸೆಡಿಶನ್‌’ ತೆಗೆದು ಅಭಿವ್ಯಕ್ತಿ ಸ್ವಾತಂತ್ರ್ಯ ಕಾಪಾಡಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಅವರು, ‘2020ನೇ ಸಾಲಿನ ಸಗಟು ಪುಸ್ತಕ ಖರೀದಿಯ ಹಣ ₹ 13 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಬೇಕು. 3 ವರ್ಷಗಳಿಂದ ಪುಸ್ತಕ ಖರೀದಿಯಾಗಿಲ್ಲ. ಖರೀದಿಗೆ ಪುಟಕ್ಕೆ 40 ಪೈಸೆ ಹೆಚ್ಚಿಸಬೇಕು. ಹೈಟೆಕ್‌ ಗ್ರಂಥಾಲಯ ತೆರೆಯಬೇಕು’ ಎಂದು ಆಗ್ರಹಿಸಿದರು.

ಎನ್‌. ಜಗದೀಶ ಕೊಪ್ಪ ಅವರಿಗೆ ‘ಸಾಹಿತ್ಯ ರತ್ನ’, ರಂಜಿನಿ ರಾಘವನ್‌ ಅವರಿಗೆ ‘ಯುವ ಸಾಹಿತ್ಯ ರತ್ನ’, ಅಭಿರುಚಿ ಗಣೇಶ್‌ ಅವರಿಗೆ ‘ಪುಸ್ತಕ ರತ್ನ’, ಟಂಕಸಾಲ ಎಸ್‌. ನಾಗರಾಜ್‌ ಅವರಿಗೆ ‘ಮುದ್ರಣ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕಿ ಎಂ. ಕನಗವಲ್ಲಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ. ಸಂಘದ ಕಾರ್ಯದರ್ಶಿ ಆರ್.ದೊಡ್ಡೆಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT