ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮ ಪಂಚಾಯತ್‌ ನೌಕರರ ಮುಷ್ಕರ: ಕ್ರಮಕ್ಕೆ ಆಯುಕ್ತರ ಸೂಚನೆ

Published : 8 ಅಕ್ಟೋಬರ್ 2024, 16:32 IST
Last Updated : 8 ಅಕ್ಟೋಬರ್ 2024, 16:32 IST
ಫಾಲೋ ಮಾಡಿ
Comments

ಬೆಂಗಳೂರು: ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಮತ್ತು ನೌಕರರ ಮುಷ್ಕರ ರಾಜ್ಯದಾದ್ಯಂತ ಮುಂದುವರಿದಿದೆ. ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮಂಗಳವಾರ ಪತ್ರವೊಂದನ್ನು ರವಾನಿಸಿರುವ ಪಂಚಾಯತ್‌ ರಾಜ್‌ ಇಲಾಖೆ ಆಯುಕ್ತರು, ಮುಷ್ಕರ ಮುಂದುವರಿಸುವ ಅಧಿಕಾರಿಗಳು, ನೌಕರರ ವಿರುದ್ಧ ಕ್ರಮ ಜರುಗಿಸುವಂತೆ ಸೂಚಿಸಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು, ನೌಕರರು ಹಾಗೂ ಚುನಾಯಿತ ಸದಸ್ಯರು ಜೊತೆಯಾಗಿ ಶುಕ್ರವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಮೊದಲ ಎರಡು ದಿನ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಮುಷ್ಕರ ನಡೆಸಲಾಗಿತ್ತು. ಸೋಮವಾರದಿಂದ ಜಿಲ್ಲಾ ಕೇಂದ್ರಗಳಲ್ಲಿ ಮುಷ್ಕರ ಮುಂದುವರಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟವು ಅಕ್ಟೋಬರ್‌ 4ರಿಂದ ಮುಷ್ಕರ ನಡೆಸುವುದಾಗಿ ಪ್ರಕಟಿಸಿತ್ತು. ಸೆಪ್ಟೆಂಬರ್‌ 30ರಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಸಚಿವರ ಅಧ್ಯಕ್ಷತೆಯಲ್ಲಿ ಎರಡು ಪ್ರತ್ಯೇಕ ಸಭೆಗಳನ್ನು ಆಯೋಜಿಸಲಾಗಿತ್ತು. ಆದರೆ, ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಪ್ರತಿನಿಧಿಗಳು ಸಭೆಗೆ ಹಾಜರಾಗಿರಲಿಲ್ಲ ಎಂದು ಪಂಚಾಯತ್‌ ರಾಜ್‌ ಆಯುಕ್ತೆ ಅರುಂಧತಿ ಚಂದ್ರಶೇಖರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅ. 1ರಂದು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಕರೆದ ಸಭೆಗೂ ಹೋರಾಟದ ನೇತೃತ್ವ ವಹಿಸಿದ್ದವರು ಬರಲಿಲ್ಲ. ಅ.4ರಂದು ಹೋರಾಟ ನಡೆಯುತ್ತಿದ್ದ ಸ್ವಾತಂತ್ರ್ಯ ಉದ್ಯಾನಕ್ಕೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರೇ ಭೇಟಿನೀಡಿ ಮನವಿ ಸ್ವೀಕರಿಸಿದ್ದರು. ಆ ದಿನ ಸಂಜೆ ಮುಷ್ಕರನಿರತರ ಪ್ರತಿನಿಧಿಗಳ ಜೊತೆ ಸಭೆಯನ್ನೂ ನಡೆಸಿದ್ದರು ಎಂದು ತಿಳಿಸಿದ್ದಾರೆ.

‘ಪಂಚಾಯಿತಿಗಳ ಅಧಿಕಾರಿಗಳು, ನೌಕರರು ಮತ್ತು ಸದಸ್ಯರ ಬೇಡಿಕೆಗಳ ಕುರಿತು ಚರ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರ ಅಧ್ಯಕ್ಷತೆಯಲ್ಲಿ ಅ.10ರಂದು ಸಭೆ ನಿಗದಿಯಾಗಿದೆ. ಆದರೂ, ಗ್ರಾಮ ಪಂಚಾಯಿತಿಗಳ ಅಧಿಕಾರಿಗಳು ಮತ್ತು ನೌಕರರು ಕರ್ತವ್ಯಕ್ಕೆ ಹಾಜರಾಗದೇ ಇರುವುದು ಕಂಡುಬಂದಿದೆ. ಮುಷ್ಕರ ಅಥವಾ ಪ್ರತಿಭಟನೆಯಲ್ಲಿ ಭಾಗವಹಿಸಲು ಸರ್ಕಾರಿ ನೌಕರರಿಗೆ ಅವಕಾಶವಿಲ್ಲ. ಕರ್ತವ್ಯಕ್ಕೆ ಹಾಜರಾಗದೇ ಇರುವವರ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಗಳ ಅಡಿಯಲ್ಲಿ ಕ್ರಮ ಜರುಗಿಸಬೇಕು’ ಎಂದು ಆಯುಕ್ತರು ಪತ್ರದಲ್ಲಿ ಸೂಚಿಸಿದ್ದಾರೆ.

‘ಬೆದರಿಕೆಗೆ ಮಣಿಯುವುದಿಲ್ಲ’

‘ಆಯುಕ್ತರು ಕ್ರಮ ಜರುಗಿಸುವಂತೆ ಸೂಚಿಸುವ ಮೂಲಕ ಹೋರಾಟಕ್ಕೆ ಇಳಿದಿರುವ ಅಧಿಕಾರಿಗಳು ಮತ್ತು ನೌಕರರನ್ನು ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ರಾಜು ವಾರದ ತಿಳಿಸಿದ್ದಾರೆ.

‘ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ. ಬೆದರಿಕೆಗೆ ನಾವು ಮಣಿಯುವುದಿಲ್ಲ’ ಎಂದೂ ಅವರು ಹೇಳಿದ್ದಾರೆ.

‘ಗ್ರಾ.ಪಂ. ಸಿಬ್ಬಂದಿ, ಸದಸ್ಯರ ಬೇಡಿಕೆ ಈಡೇರಿಸಿ’

‘ಗ್ರಾಮ ಪಂಚಾಯತಿ ಅಧಿಕಾರಿ, ಸಿಬ್ಬಂದಿ ಮತ್ತು ಸದಸ್ಯರ ಬೇಡಿಕೆಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ತಜ್ಞರ ತಂಡ ರಚಿಸಬೇಕು’ ಎಂದು ಒತ್ತಾಯಿಸಿ ವಿಧಾನ ಪರಿಷತ್ ಕಾಂಗ್ರೆಸ್‌ ಸದಸ್ಯ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಪತ್ರ ಬರೆದಿದ್ದಾರೆ.

‘ಅಧಿಕಾರ ವಿಕೇಂದ್ರೀಕರಣ ಸಾಧ್ಯವಾಗುತ್ತಿರುವುದು ಗ್ರಾಮ ಪಂಚಾಯತಿಗಳಿಂದ. ವಸತಿ ಯೋಜನೆ, ಕುಡಿಯುವ ನೀರು, ಬೀದಿ ದೀಪಗಳು ಮತ್ತು ನೈರ್ಮಲ್ಯ ನಿರ್ವಹಣೆ ಜತೆಗೆ ಸರ್ಕಾರದ ವಿವಿಧ 29 ಸೇವೆಗಳನ್ನು ಗ್ರಾಮ ಪಂಚಾಯತಿಗಳು ನೀಡುತ್ತಿವೆ. ಗ್ರಾಮ ಪಂಚಾಯತಿಗಳ ಮೇಲೆ ಕಾರ್ಯದೊತ್ತಡ ಹೆಚ್ಚು ಇದೆ. ಇದನ್ನು ನಿರ್ವಹಿಸುವ ಸಿಬ್ಬಂದಿಯ ಬೇಡಿಕೆಗಳನ್ನು ಈಡೇರಿಸುವುದು ಅತ್ಯಗತ್ಯ’ ಎಂದು ಪತ್ರದಲ್ಲಿ ಹೇಳಿದ್ದಾರೆ.

‘ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಸದಸ್ಯರು ನಾಲ್ಕು ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ಧರಣಿ ನಡೆಸುತ್ತಿದ್ದಾರೆ. ಅವರ ಬೇಡಿಕೆಗಳು ನ್ಯಾಯಯುತ ವಾಗಿದ್ದು, ಅವುಗಳ ಈಡೇರಿಕೆಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

‘ಗ್ರಾಮ ಪಂಚಾಯತಿಗಳಲ್ಲಿ ನಾಲ್ಕು ದಿನಗಳಿಂದ ಎಲ್ಲ ಸ್ವರೂಪದ ಕೆಲಸ ಸ್ಥಗಿತವಾಗಿವೆ. ಜನರಿಗೆ ತೊಂದರೆಯಾಗುತ್ತಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಗ್ರಾಮ ಪಂಚಾಯತ್ ರಾಜ್‌ ಸದಸ್ಯರ ಒಕ್ಕೂಟ, ಪಿಡಿಒ ಕ್ಷೇಮಾಭಿವೃದ್ಧಿ ಒಕ್ಕೂಟ ಮತ್ತು ನೌಕರರ ಸಂಘಗಳ ಪದಾಧಿಕಾರಿಗಳನ್ನು ಕರೆದು ತಕ್ಷಣವೇ ಸಭೆ ನಡೆಸಬೇಕು’ ಎಂದು ಗೂಳಿಗೌಡ ಅವರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT