ಬುಧವಾರ, 2 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಆತಿಥ್ಯ?: ಫೋಟೊ, ವಿಡಿಯೊ ಬಹಿರಂಗ

ಸಿಗರೇಟ್‌ ಸೇದುತ್ತಾ ಸಹಚರರ ಜತೆ ಹರಟೆ – ಫೋಟೊ ಬಹಿರಂಗವಾದ ಬೆನ್ನಲ್ಲೇ ತನಿಖೆ ಆರಂಭ
Published : 25 ಆಗಸ್ಟ್ 2024, 16:00 IST
Last Updated : 25 ಆಗಸ್ಟ್ 2024, 16:00 IST
ಫಾಲೋ ಮಾಡಿ
Comments

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ ಜೈಲಿನ ಒಳಗೆ ಸಹಚರರ ಜೊತೆ ಕುರ್ಚಿ ಮೇಲೆ ಕುಳಿತು ಕಾಫಿ ಹೀರುತ್ತಾ, ಸಿಗರೇಟ್‌ ಸೇದುತ್ತಿದ್ದಾರೆ ಎನ್ನಲಾದ ಫೋಟೊ ಬಹಿರಂಗವಾಗಿದೆ.

ಫೋಟೊ ಬಹಿರಂಗವಾದ ಬೆನ್ನಲ್ಲೆ, ಜೈಲಿನಲ್ಲಿ ದರ್ಶನ್‌ಗೆ ವಿಶೇಷ ಆತಿಥ್ಯ ನೀಡುತ್ತಿರುವ ಆರೋಪ ಕೇಳಿಬಂದಿದೆ. ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಹಿರಿಯ ಅಧಿಕಾರಿಗಳು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭಾನುವಾರ ಸಂಜೆಯೇ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.

ಕಾರಾಗೃಹದ ಅತಿ ಭದ್ರತಾ ಬ್ಯಾರಕ್‌ನಲ್ಲಿ ದರ್ಶನ್ ಅವರನ್ನು 65 ದಿನಗಳಿಂದ ಇರಿಸಲಾಗಿದೆ. ಬ್ಯಾರಕ್‌ ಹೊರಗೆ ಕುರ್ಚಿಯಲ್ಲಿ ಕುಳಿತಿರುವ ದರ್ಶನ್‌, ಒಂದು ಕೈಯಲ್ಲಿ ಕಾಫಿ ಮಗ್‌ ಮತ್ತು ಇನ್ನೊಂದು ಕೈಯಲ್ಲಿ ಸಿಗರೇಟ್‌ ಹಿಡಿದಿರುವುದು ಬಹಿರಂಗಗೊಂಡಿರುವ ಫೋಟೊದಲ್ಲಿ ಕಾಣಿಸುತ್ತಿದೆ. ರೌಡಿ ಶೀಟರ್‌ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್‌ ನಾಗರಾಜ್‌, ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ದರ್ಶನ್ ಮ್ಯಾನೇಜರ್‌ ನಾಗರಾಜ್‌ ಹಾಗೂ ಮತ್ತೊಬ್ಬ ಆರೋಪಿ ಕುಳ್ಳ ಸೀನಾ ಜೊತೆಯಲ್ಲಿ ನಗುತ್ತಾ ಮಾತುಕತೆ ನಡೆಸುತ್ತಿದ್ದಾರೆ.

ದರ್ಶನ್​ ತಲೆ ಬೋಳಿಸಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈಗ ಬಹಿರಂಗಗೊಂಡಿರುವ ಫೋಟೊದಲ್ಲಿ ದರ್ಶನ್‌ ವಿಗ್‌ ಧರಿಸಿಲ್ಲ. ಗಿಡ್ಡನೆಯ ತಲೆಗೂದಲು ಹೊಂದಿದ್ದಾರೆ.

ಜೈಲಿನಲ್ಲಿರುವ ಕೈದಿಯೊಬ್ಬರು ದರ್ಶನ್‌ ಮತ್ತು ಸಹಚರರು ವಿಶೇಷ ಬ್ಯಾರಕ್‌ ಎದುರಿನ ನಡಿಗೆ ಪಥದ ಬಳಿ ಕುಳಿತು ಹರಟುತ್ತಿದ್ದ ಫೋಟೊವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು, ಪತ್ನಿಗೆ ಕಳುಹಿಸಿದ್ದರು. ಆ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ತಪಾಸಣೆ ಬೆನ್ನಲ್ಲೇ ಬಹಿರಂಗ:

ಅಕ್ರಮ ಚಟುವಟಿಕೆ ನಡೆಯುತ್ತಿರುವ ಶಂಕೆಯಲ್ಲಿ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಶನಿವಾರ ದಿಢೀರ್‌ ದಾಳಿ ನಡೆಸಿ, ಕೈದಿಗಳ ಬ್ಯಾರಕ್‌ಗಳಲ್ಲಿ ತಪಾಸಣೆ ನಡೆಸಿದ್ದರು. ದರ್ಶನ್‌, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಇರುವ ಬ್ಯಾರಕ್‌ಗಳು ಸೇರಿದಂತೆ ಜೈಲಿನ ಎಲ್ಲಾ ಬ್ಯಾರಕ್‌ಗಳನ್ನು ಹಲವು ಗಂಟೆ ಶೋಧಿಸಿದ್ದರು.

‘ಜೈಲಿನಲ್ಲಿ ಮೊಬೈಲ್‌ ಸೇರಿದಂತೆ ಯಾವುದೇ ಅನಧಿಕೃತ ವಸ್ತುಗಳು ದೊರೆತಿಲ್ಲ’ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದರು. ಇದರ ಬೆನ್ನಲ್ಲೇ ದರ್ಶನ್ ಸಹಚರರ ಜತೆ ಕುಳಿತು ಚರ್ಚಿಸುತ್ತಿರುವ ಫೋಟೊ ಭಾನುವಾರ ಬೆಳಿಗ್ಗೆ ಬಹಿರಂಗವಾಗಿದೆ.

ವಿಲ್ಸನ್‌ ಗಾರ್ಡನ್‌ ನಾಗನ ವಿರುದ್ಧ ದರೋಡೆ, ಕೊಲೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಜೈಲಿನಲ್ಲಿಯೇ ಕುಳಿತು ಅಕ್ರಮ ಚಟುವಟಿಕೆಗೆ ಸಂಚು ರೂಪಿಸುತ್ತಿದ್ದರು ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿತ್ತು. ಹೀಗಾಗಿ, ವಿಲ್ಸನ್ ಗಾರ್ಡನ್‌ ನಾಗ ಸೇರಿದಂತೆ ಹಲವು ರೌಡಿಗಳನ್ನು ಬೇರೆ ಕಾರಾಗೃಹಗಳಿಗೆ ಸ್ಥಳಾಂತರಿಸುವಂತೆ ಕಾರಾಗೃಹ ಇಲಾಖೆ ಅಧಿಕಾರಿಗಳಿಗೆ ಸಿಸಿಬಿ ಪೊಲೀಸರು ಪತ್ರವನ್ನೂ ಬರೆದಿದ್ದರು.

ತಪ್ಪು ನಡೆದಿದ್ದರೆ ಕಠಿಣ ಕ್ರಮ’
‘‘ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಫೋಟೊವನ್ನು ಮಾಧ್ಯಮಗಳ ಮೂಲಕ ನೋಡಿದ್ದೇನೆ. ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದು ತಪ್ಪು ನಡೆದಿದ್ದರೆ ಅದಕ್ಕೆ ಕಾರಣರಾಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಕಾರಾಗೃಹಗಳು ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಪೊಲೀಸ್ ಮಹಾನಿರ್ದೇಶಕಿ ಮಾಲಿನಿ ಕೃಷ್ಣಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. ‘ನಮ್ಮ ಇಲಾಖೆಯ ಹೆಚ್ಚುವರಿ ಐಜಿಪಿ ಬಿ.ವಿ. ಆನಂದ್‌ ರೆಡ್ಡಿ ಮತ್ತು ಐಜಿಪಿ ಸೋಮಶೇಖರ್ ಅವರನ್ನು ವಿಚಾರಣಾ ಅಧಿಕಾರಿಗಳಾಗಿ ನೇಮಿಸಲಾಗಿದೆ. ಅವರು ನೀಡುವ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಪಡೆಯಲು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ವಿ. ಶೇಷಮೂರ್ತಿ ಅವರಿಗೆ ಕರೆ ಮಾಡಿದರೂ ಅವರ ಮೊಬೈಲ್‌ ಸಂಖ್ಯೆ ‘ಸ್ವಿಚ್ಡ್‌ ಆಫ್‌’ ಆಗಿತ್ತು.

ವಿಡಿಯೊ ಕರೆ ಮಾಡಿದ್ದ ದರ್ಶನ್

ಜೈಲಿನಲ್ಲಿ ಸಹಚರರ ಜತೆ ಕುಳಿತು ಹರಟೆ ಹೊಡೆಯುತ್ತಿರುವ ಫೋಟೊ ಹರಿದಾಡಿದ ಬೆನ್ನಲ್ಲೇ ದರ್ಶನ್ ಅವರು ಸಹ ಕೈದಿಯೊಬ್ಬರ ಮೊಬೈಲ್‌ನಿಂದ ಆಪ್ತರಿಗೆ ವಿಡಿಯೊ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾದ ದೃಶ್ಯಾವಳಿಯ ತುಣುಕು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಭಾನುವಾರ ರಾತ್ರಿ ಬಹಿರಂಗವಾಗಿದೆ. ‘ಊಟ ಆಯಿತಾ ಆರಾಮವಾಗಿದ್ದೀನಿ’ ಎಂದು ಆಪ್ತನಿಗೆ ಹೇಳಿರುವ ವಿಡಿಯೊ ತುಣುಕನ್ನು ರೆಡ್ಡಿ ಎಂಬವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT