ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಡಿಎ ಕಾಂಪ್ಲೆಕ್ಸ್ ಉಳಿಸಲು ಇದೇ 12ರಂದು ಪ್ರತಿಭಟನೆ

Published : 9 ಸೆಪ್ಟೆಂಬರ್ 2024, 16:08 IST
Last Updated : 9 ಸೆಪ್ಟೆಂಬರ್ 2024, 16:08 IST
ಫಾಲೋ ಮಾಡಿ
Comments

ಬೆಂಗಳೂರು: ನಗರದ ಏಳು ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಸಾರ್ವಜನಿಕ ಖಾಸಗಿ (ಪಿಪಿಪಿ) ಸಹಭಾಗಿತ್ವದಲ್ಲಿ ಮರು ನಿರ್ಮಿಸಲು ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿರುವ ಆದೇಶವನ್ನು ರದ್ದುಪಡಿಸುವಂತೆ ಆಗ್ರಹಿಸಿ ಇದೇ 12ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಡಿಎ ಕಾಂಪ್ಲೆಕ್ಸ್ ಉಳಿಸಿ ಹೋರಾಟ ಸಮಿತಿ ತಿಳಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಮುಖಂಡ ಆರ್. ನಾಗೇಶ್, ‘ಇಂದಿರಾನಗರ ವಾಣಿಜ್ಯ ಸಂಕೀರ್ಣವನ್ನು ಮೆವ್ರಿಕ್‌ ಹೋಲ್ಡಿಂಗ್ಸ್‌ ಇನ್‌ವೆಸ್ಟ್‌ಮೆಂಟ್ಸ್‌ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಕೋರಮಂಗಲ, ಎಚ್‌ಎಸ್‌ಆರ್‌ ಬಡಾವಣೆ, ಆರ್.ಟಿ. ನಗರ, ಆಸ್ಟಿನ್‌ ಟೌನ್‌, ಸದಾಶಿವನಗರ ಮತ್ತು ವಿಜಯನಗರ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಎಂ–ಫಾರ್‌ ಡೆವಲಪರ್ಸ್‌ ಸಂಸ್ಥೆಗೆ ಪಿಪಿಪಿ ಸಹಭಾಗಿತ್ವದಲ್ಲಿ ಮರು ನಿರ್ಮಿಸಲು ಗುತ್ತಿಗೆ ನೀಡಲಾಗಿದೆ. ಈ ಸಂಸ್ಥೆಗಳು ಸದ್ಯ ಇರುವ ಕಟ್ಟಡವನ್ನು ಕೆಡವಿಹಾಕಿ, ಇದೇ ಜಾಗದಲ್ಲಿ ಬಹುಮಹಡಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಲಿವೆ’ ಎಂದು ಹೇಳಿದರು.

‘ಖಾಸಗಿ ಸಂಸ್ಥೆಗಳು ಈ ಏಳೂ ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು ಮರು ನಿರ್ಮಿಸಿ, ಅದರಲ್ಲಿ 65:35ರ ಅನುಪಾತದಲ್ಲಿ 30 ವರ್ಷಕ್ಕೆ ಗುತ್ತಿಗೆ ಪಡೆದುಕೊಳ್ಳಲಿವೆ. ಮುಂದಿನ 30 ವರ್ಷಕ್ಕೆ ಗುತ್ತಿಗೆ ಅವಧಿಯನ್ನು ವಿಸ್ತರಿಸಲು ಕರಾರಿನಲ್ಲಿ ಅವಕಾಶವಿದೆ. ಈ ವಾಣಿಜ್ಯ ಸಂಕೀರ್ಣಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಮೂಲಕವೇ ಮರು ನಿರ್ಮಿಸಬೇಕಿತ್ತು. ಇದಕ್ಕೆ ಅಗತ್ಯವಿರುವಷ್ಟು ಸಾಲ ಸೌಲಭ್ಯವೂ ಸಿಗುತ್ತಿತ್ತು. ಅದರ ಜೊತೆಗೆ ಬಿಡಿಎಗೆ ಆದಾಯವು ಬರುತ್ತಿತ್ತು. ಆದರೆ, ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಿರುವ ಸರ್ಕಾರದ ನಡೆ ಖಂಡನೀಯ’ ಎಂದರು.

‘ಈ ಏಳು ವಾಣಿಜ್ಯ ಸಂಕೀರ್ಣಗಳು ಆಯಕಟ್ಟಿನ ಜಾಗದಲ್ಲಿದ್ದು, ಇವುಗಳ ವಿಸ್ತೀರ್ಣ 12 ಎಕರೆ ಇದೆ. ಈ ಜಮೀನುಗಳ ಒಟ್ಟು ಮೌಲ್ಯ ಸುಮಾರು ₹20 ಸಾವಿರ ಕೋಟಿ ಇದೆ. ಈ ಸಾರ್ವಜನಿಕಿ ಆಸ್ತಿಯನ್ನು ಖಾಸಗಿ ಸಂಸ್ಥೆಗಳಿಗೆ ನೀಡುವುದನ್ನು ವಿರೋಧಿಸಿ ಪ್ರತಿಭಟನೆ ಆಯೋಜಿಸಲಾಗಿದೆ’ ಎಂದು ಹೇಳಿದರು.

ಸಿಪಿಐ ರಾಜ್ಯ ಸಮಿತಿಯ ಸದಸ್ಯೆ ಗೌರಮ್ಮ, ಎಎಪಿ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ, ನಜೀಬ್‌ ಎಂ.ಎ. ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT