ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ | ದರ್ಶನ್, ಪವಿತ್ರಾಗೌಡಗೆ ಡಿಎನ್‌ಎ ಪರೀಕ್ಷೆ

Published : 19 ಜೂನ್ 2024, 16:29 IST
Last Updated : 19 ಜೂನ್ 2024, 16:29 IST
ಫಾಲೋ ಮಾಡಿ
Comments

ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಡಿಎನ್‌ಎ ಪರೀಕ್ಷೆಗೆ ತನಿಖಾಧಿಕಾರಿಗಳು ಮುಂದಾಗಿದ್ದು, ದರ್ಶನ್‌ ಹಾಗೂ ಅವರ ಆಪ್ತೆ ಪವಿತ್ರಾಗೌಡ ಸೇರಿ 9 ಮಂದಿಯ ರಕ್ತ, ಕೂದಲು ಮಾದರಿಯನ್ನು ಬುಧವಾರ ಸಂಗ್ರಹಿಸಿದರು. 

ವಿಕ್ಟೋರಿಯಾ ಆಸ್ಪತ್ರೆಗೆ ಆರೋಪಿಗಳನ್ನು ಕರೆದೊಯ್ದು ಮಾದರಿ ಸಂಗ್ರಹಿಸಲಾಗಿದ್ದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ‌

ಕೃತ್ಯ ನಡೆದ ಪಟ್ಟಣಗೆರೆ ಶೆಡ್​ನಲ್ಲಿ ರಕ್ತದ ಮಾದರಿ ಹಾಗೂ ಕೂದಲು ದೊರೆತಿದ್ದು, ಎಫ್​ಎಸ್​ಎಲ್ ತಜ್ಞರು ಅದನ್ನು ಪರಿಶೀಲಿಸಿದ್ದರು. ಸ್ಥಳದಲ್ಲಿದ್ದ ರಕ್ತದ ಮಾದರಿ ಹಾಗೂ ಕೂದಲು ಯಾರದ್ದು ಎಂಬುದರ ಬಗ್ಗೆ ನಿಖರವಾಗಿ ತಿಳಿಯಲು ತನಿಖಾಧಿಕಾರಿಗಳು ಡಿಎನ್ಎ ಪರೀಕ್ಷೆಯ ಮೊರೆ ಹೋಗಿದ್ದಾರೆ.

‘ಕೃತ್ಯದ ನಡೆದ ಸ್ಥಳದಲ್ಲಿ ಸಿಕ್ಕಿದ ರಕ್ತ ಹಾಗೂ ಕೂದಲಿಗೂ ಹೋಲಿಕೆ ನಡೆಯಲಿದೆ. ಕೂದಲು ಆರೋಪಿಗಳದ್ದೇ ಎಂದು ದೃಢಪಟ್ಟರೆ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯ ಆಗಲಿದೆ. ಶೆಡ್ ಒಳಕ್ಕೆ ತೆರಳದೇ ಕೆಲವು ಆರೋಪಿಗಳು ಹೊರಗೆ ಇದ್ದರು. ಅವರನ್ನು ಈ ಪರೀಕ್ಷೆಗೆ ಒಳಪಡಿಸುತ್ತಿಲ್ಲ’ ಎಂದು ಪೊಲೀಸರು ಹೇಳಿದರು. 

ರಕ್ತದ ಕಲೆ ಪತ್ತೆ

ಮೃತದೇಹ ಸಾಗಿಸಿದ ಸ್ಕಾರ್ಪಿಯೊ ವಾಹನವನ್ನು ಎಫ್‌ಎಸ್‌ಎಲ್‌ ತಜ್ಞರು ಪರಿಶೀಲಿಸಿದ್ದು ರಕ್ತದ ಕಲೆಗಳು ಹಾಗೂ ಭೌತಿಕ ಕುರುಹುಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.‌

ಸಾಕ್ಷ್ಯನಾಶಕ್ಕೆ ಆರೋಪಿ ಪ್ರದೂಷ್‌ ಪ್ರಯತ್ನ

ಮೃತದೇಹವನ್ನು ಸುಮನಹಳ್ಳಿಯ ರಾಜಕಾಲುವೆಗೆ ಎಸೆಯಲಾಗಿತ್ತು. ಕೊಲೆಯಾದ ವ್ಯಕ್ತಿಯ ಮೊಬೈಲ್‌ ಹಾಗೂ ಆರೋಪಿ ರಾಘವೇಂದ್ರ ಅವರ ಮೊಬೈಲ್‌ ಅನ್ನು ಪ್ರದೂಷ್‌ ಕಾಲುವೆಗೆ ಎಸೆದು ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ್ದಾರೆ. ಮೊಬೈಲ್‌ಗಳು ದೊರೆತಿಲ್ಲ. ರಾಘವೇಂದ್ರ ಹೊಸ ಬಟ್ಟೆ ಖರೀದಿಸಿ ಕೃತ್ಯ ನಡೆದ ಸ್ಥಳದಲ್ಲಿ ಧರಿಸಿದ್ದ ಬಟ್ಟೆಗಳನ್ನು ಆರ್‌ಆರ್‌ ನಗರದ ಐಡಿಯಲ್‌ ಹೋಮ್ಸ್ ಶಿಪ್‌ ಬಳಿಯ ಖಾಲಿ ಪ್ರದೇಶದಲ್ಲಿ ಎಸೆದಿದ್ದರು’ ಎಂದು ವಿವರಿಸಲಾಗಿದೆ.

‘ಮೃತದೇಹ ಎಸೆದ ಬಳಿಕ ಕಾರ್ತಿಕ್‌ ಕೇಶವ ನಿಖಿಲ್‌ ಅವರು ಆರ್‌ಆರ್‌ ನಗರದ ಟ್ರೋಬ್ರೊ ಹೋಟೆಲ್‌ನಲ್ಲಿ ಕೊಠಡಿ ಪಡೆದು ಉಳಿದುಕೊಂಡಿದ್ದರು. ಅವರು ಹೊಸ ಹೊಸಬಟ್ಟೆ ಧರಿಸಿ ಹಳೇ ಬಟ್ಟೆಯನ್ನು ಕೊಠಡಿಯಲ್ಲಿ ಬಿಟ್ಟು ತೆರಳಿದ್ದರು. ಕೊಠಡಿ ಪರಿಶೀಲಿಸಿದಾಗ ಬಟ್ಟೆ ಇರಲಿಲ್ಲ. ಎರಡು ದಿನಗಳ ಬಳಿಕ ಹೋಟೆಲ್‌ ಸಿಬ್ಬಂದಿ ಬಿಬಿಎಂಪಿ ಕಸದ ಲಾರಿಗೆ ಆ ಬಟ್ಟೆಗಳನ್ನು ಹಾಕಿದ್ದರು’ ಎಂದು ವಿವರಿಸಲಾಗಿದೆ.

ವಿದ್ಯುತ್ ಶಾಕ್ ಪ್ರಬಲ ಹೊಡೆತಗಳಿಂದ ಸಾವು

ಆರೋಪಿಗಳ ಹಲ್ಲೆಯಿಂದ ರೇಣುಕಸ್ವಾಮಿ ಅವರ ಸಾವು ಸಂಭವಿಸಿದೆ ಎಂಬ ಅಂಶ ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದ್ದು ವೈದ್ಯರ ಅಂತಿಮ ವರದಿ ತನಿಖಾಧಿಕಾರಿಗಳ ಕೈ ಸೇರಿದೆ. ವಿದ್ಯುತ್ ಶಾಕ್ ಹಾಗೂ ಪ್ರಬಲವಾದ ಹೊಡೆತಗಳ ಕಾರಣದಿಂದ ರಕ್ತಸ್ರಾವವಾಗಿ ಸಾವು ಸಂಭವಿಸಿದೆ. ಈ ವರದಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ರವಾನೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ನಟ ಪ್ರಥಮ್‌ಗೆ ಬೆದರಿಕೆ
ನಟ ಪ್ರಥಮ್‌ ಅವರಿಗೆ ದರ್ಶನ್‌ ಅಭಿಮಾನಿಗಳು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಮಧ್ಯಾಹ್ನ ಪ್ರಥಮ್‌ ಅವರೇ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಸಾಮಾಜಿಕ ಮಾಧ್ಯಮದ ಮೇಲೆ ನಿಗಾ

ದರ್ಶನ್‌ ಅಭಿಮಾನಿಗಳ ಸಂಘದ ಸದಸ್ಯರು ಸಾಮಾಜಿಕ ಮಾಧ್ಯಮ ಮೂಲಕ ಕೆಲವರಿಗೆ ಬೆದರಿಕೆ ಹಾಕುತ್ತಿದ್ದು ನಿಗಾ ವಹಿಸಲಾಗಿದೆ ಎಂದು ಪೊಲೀಸರು ಹೇಳಿದರು.  

‘ದರ್ಶನ್‌ ಅಭಿಮಾನಿಗಳು ಹಾಗೂ ಸಂಘದ ಸದಸ್ಯರು ಬೆದರಿಕೆ ಹಾಕುತ್ತಿರುವುದು ಗೊತ್ತಾಗಿದೆ. ಇಂಥವರ ಮೇಲೆ ಕಣ್ಣಿಡಲು ಪೊಲೀಸ್‌ ಅಧಿಕಾರಿ ಒಬ್ಬರಿಗೆ ಸೂಚಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

ಸೆಕ್ಯೂರಿಟಿ ಗಾರ್ಡ್‌ ಹೇಳಿಕೆ ದಾಖಲು

ಪಟ್ಟಣಗೆರೆಯ ಶೆಡ್ ಸೆಕ್ಯೂರಿಟಿ ಗಾರ್ಡ್ ವಿಚಾರಣೆ ನಡೆಸಿರುವ ಪೊಲೀಸರು ಸಿಆರ್‌ಪಿಸಿ– 164ರ ಅಡಿ ಅವರ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದಾರೆ. ‘ಹಿಂದಿ ಭಾಷೆ ಮಾತನಾಡುತ್ತಿದ್ದ ಅವರ ಹೇಳಿಕೆಯನ್ನು ಚಾಮರಾಜಪೇಟೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರ ಸಹಾಯದಿಂದ ಭಾಷಾಂತರಿಸಲಾಗಿದೆ. ನ್ಯಾಯಾಧೀಶರ ಮುಂದೆ ದಾಖಲಿಸಲಾಗಿದೆ’ ಎಂಬ ಅಂಶವನ್ನು ಪೊಲೀಸರು ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT