ನದಿ ರಕ್ಷಿಸಬೇಕು ನದಿಪಾತ್ರ ಉಳಿಸಿಕೊಳ್ಳಬೇಕು ಜನರಿಗೆ ಶುದ್ಧವಾದ ನೀರು ಕೊಡಬೇಕು ಎಂಬ ರಾಜಕೀಯ ಇಚ್ಛಾಶಕ್ತಿ ಕಾಣಿಸುತ್ತಿಲ್ಲ. ರಾಜಕೀಯ ಹಾಗೂ ರಿಯಲ್ ಎಸ್ಟೇಟ್ ಲಾಬಿಗೆ ಮಣಿದು ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದ ಬಫರ್ ವಲಯವನ್ನು ಕಡಿಮೆ ಮಾಡಲಾಗುತ್ತಿದೆ. 2003ರಲ್ಲಿದ್ದ ಆದೇಶವನ್ನು ಜಾರಿಗೆ ತಂದಿದ್ದರೆ ಈ 20 ವರ್ಷಗಳಲ್ಲಿ ನಾವು ಪರಿಸರಯುಕ್ತ ಶುದ್ಧ ನೀರಿನ ಹರಿವನ್ನು ಇಲ್ಲಿ ಕಾಣಬಹುದಿತ್ತು. ಆದರೆ ಆದೇಶ ಜಾರಿ ಮಾಡಿ ಸುಮ್ಮನೆ ಕುಳಿತುಕೊಂಡು ಅಕ್ರಮ ಅನಧಿಕೃತ ನಿರ್ಮಾಣಗಳಾಗಲು ರಾಜಕಾರಣಿಗಳೇ ಕಾರಣರಾಗಿದ್ದಾರೆ. ಭೂತಾಯಿಯ ಮೇಲೆ ದೌರ್ಜನ್ಯ ಎಸಗಿರುವ ಕ್ರಿಮಿನಲ್‌ಗಳು ಇವರು. ಈ ಹಿಂದೆ ಟೌನ್‌ಶಿಪ್ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದ್ದರೂ ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲರು ಅದರ ವಿರುದ್ಧ ಕ್ರಮ ಕೈಗೊಂಡಿದ್ದರು. ಸಚಿವ ಸಂಪುಟ ಸಭೆಯಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ಸಮ್ಮತಿ ನಿರಾಕರಿಸಿ ನ್ಯಾಯಾಲಯ ನಿಂದನೆಯಾದರೂ ಎದುರಿಸುತ್ತೇವೆ ಎಂದಿದ್ದರು. ಅವರ ಅಂದಿನ ನಿರ್ಧಾರದಿಂದಲೇ ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶ ಇಷ್ಟಾದರೂ ಉಳಿದುಕೊಂಡಿದೆ.
-ಯಲ್ಲಪ್ಪರೆಡ್ಡಿ, ಪರಿಸರ ತಜ್ಞ
ಬೆಂಗಳೂರಿನ ಶೇ 25ರಷ್ಟು ಪ್ರದೇಶಕ್ಕೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಆದರೆ ಇಂದು ಅಲ್ಲಿನ ನೀರು ಹರಿಯುವ ಪ್ರದೇಶವನ್ನೇ ಹಾಳು ಮಾಡಲಾಗಿದೆ. ಬಫರ್ ವಲಯದಲ್ಲಿ ಗಿಡ–ಮರ ಹುಲ್ಲು–ಕಂಟಿ ಇರಬೇಕು. ಅವುಗಳು ಮಳೆ ನೀರನ್ನು ಹಿಡಿದುಕೊಂಡು ಜಲ ಜಿನುಗುವಂತೆ ಮಾಡುತ್ತವೆ. ಪ್ರಾಣಿ–ಪಕ್ಷಿಗಳಿರಬೇಕು. ಇದೇ ಪರಿಸರ ವೈವಿಧ್ಯ. ಇವುಗಳಿಲ್ಲದೆ ಕಟ್ಟಡಗಳನ್ನು ಉಳಿಸುವುದಕ್ಕಾಗಿ ಬಫರ್ ವಲಯ ಕಡಿಮೆ ಮಾಡಲು ಹೊರಟಿರುವುದು ದುರಂತ. ಸಾವಿರಾರು ಕೋಟಿ ವೆಚ್ಚ ಮಾಡಿ ನೂರಾರು ಕಿ.ಮೀ ದೂರದಿಂದ ಕುಡಿಯುವ ನೀರು ತರುತ್ತಿದ್ದೇವೆ. ಇಲ್ಲಿರುವ ನೀರನ್ನು ಕಲುಷಿತಗೊಳಿಸಿ ಕೈಗಾರಿಕೆಗಳಿಗೆ ಅನುವು ಮಾಡಿಕೊಡುತ್ತಿರುವುದು ವಿಷಾದನೀಯ. ನಾಳೆಯ ಬೆಂಗಳೂರಿಗೆ ತಿಪ್ಪಗೊಂಡನಹಳ್ಳಿ ಜಲಾಶಯದಿಂದ ಕುಡಿಯುವ ನೀರು ಕೊಡಬೇಕು ಎಂಬ ಮನಸ್ಸು ಸರ್ಕಾರಕ್ಕೆ ಇದ್ದರೆ ಬಫರ್ ವಲಯ ಕಡಿಮೆ ಮಾಡಬಾರದು. 2003ರ ಆದೇಶದಲ್ಲಿರುವುದಕ್ಕಿಂತ ಇನ್ನೂ ಹೆಚ್ಚಿನ ಬಫರ್ ವಲಯ ಇದ್ದರೇ ಒಳ್ಳೆಯದು.
– ಸುರೇಶ್ ಹೆಬ್ಳೀಕರ್ ಚಲನಚಿತ್ರ ನಟ ಹಾಗೂ ಪರಿಸರ ಕಾರ್ಯಕರ್ತ