ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾನೂನು ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆ: ಪ್ರೊ.ಸಿ. ಬಸವರಾಜು ಸಲಹೆ

ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ. ಬಸವರಾಜು ಅಭಿಮತ
Published 25 ಜುಲೈ 2024, 15:53 IST
Last Updated 25 ಜುಲೈ 2024, 15:53 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾನೂನು ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಗಳಾಗುತ್ತಿದ್ದು, ಇದಕ್ಕೆ ತಕ್ಕಂತೆ ಕಾನೂನು ವಿದ್ಯಾರ್ಥಿಗಳು ವೃತ್ತಿ ಜೀವನದ ಸವಾಲುಗಳನ್ನು ಎದುರಿಸಲು ಸಜ್ಜಾಗಬೇಕು’ ಎಂದು ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ. ಬಸವರಾಜು ಸಲಹೆ ನೀಡಿದರು.

ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ನಾಗಸಂದ್ರದ ಸೌಂದರ್ಯ ಕಾನೂನು ಕಾಲೇಜು ಗುರುವಾರ ಹಮ್ಮಿಕೊಂಡಿದ್ದ ಕಾನೂನು ವೃತ್ತಿಪರರಿಗೆ ಮಾರ್ಗದರ್ಶನ ಕುರಿತ ಕಾರ್ಯಾಗಾರದಲ್ಲಿ ಭಾಗವಹಿಸಿ, ಅವರು ಮಾತನಾಡಿದರು.

‘ವಕೀಲರ ವೃತ್ತಿಜೀವನ ವ್ಯಾಪಕವಾಗಿ ವಿಕಸನಗೊಳ್ಳುತ್ತಿದ್ದು, ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವುದನ್ನು ಕಲಿಯಬೇಕು. ಅವಕಾಶಗಳ ಅನ್ವೇಷಣೆಗೂ ಒತ್ತು ನೀಡಬೇಕು. ಆಳವಾದ ಅಧ್ಯಯನ ಇಂದಿನ ಅಗತ್ಯವಾಗಿದ್ದು, ಅವಕಾಶಗಳ ಬಾಗಿಲು ತೆರೆಯುತ್ತಿದ್ದಂತೆ ಅದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು’ ಎಂದರು.

ವಕೀಲ ಬಿ.ಆರ್. ದೀಪಕ್ ಮಾತನಾಡಿ, ‘ವೃತ್ತಿಯಲ್ಲಿ ಮುಂದುವರೆಯಲು ಸೂಕ್ತ ಯೋಜನೆಯನ್ನು ರೂಪಿಸಿಕೊಳ್ಳಬೇಕು. ಕಾನೂನು ವಲಯದ ವಿವಿಧ ವೃತ್ತಿ ವಿಧಾನಗಳ ಕುರಿತು ಅರ್ಥಮಾಡಿಕೊಳ್ಳುವುದು ಸೂಕ್ತ’ ಎಂದು ಹೇಳಿದರು.

ಡಾ. ರಾಮ್ ಮನೋಹರ ಲೋಹಿಯಾ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜಿ. ರಮೇಶ್ ಮಾತನಾಡಿ, ‘ವಕೀಲಿ ವೃತ್ತಿಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಆದ್ಯತೆ ನೀಡಬೇಕು. ವೃತ್ತಿಪರ ನಡವಳಿಕೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು’ ಎಂದರು.

ಮಣಿಪಾಲ್ ಸ್ಕೂಲ್ ಆಫ್ ಲಾದ ಸಹಾಯಕ ಪ್ರಾಧ್ಯಾಪಕ ಪವನ್ ಮಾತನಾಡಿ, ‘ಕಾನೂನು ಪದವೀಧರರಿಗೆ ವಿಪುಲ ಅವಕಾಶಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಸೌಂದರ್ಯ ಎಜುಕೇಶನ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೀರ್ತನ್ ಕುಮಾರ್, ಪ್ರಭಾರಿ ಪ್ರಾಂಶುಪಾಲ ಹನುಮಂತೇಗೌಡ, ಉಪ ಪ್ರಾಂಶುಪಾಲ ಶ್ವಾಸ್ ಪುಟ್ಟಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT