ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೂರಜ್‌ ರೇವಣ್ಣ ಪ್ರಕರಣ | ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

Published 23 ಜೂನ್ 2024, 15:36 IST
Last Updated 23 ಜೂನ್ 2024, 15:36 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಅದಕ್ಕೆಲ್ಲ ನಾವು ಹೆದರುವುದಿಲ್ಲ’ ಎಂದು ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಹೇಳಿದರು.

ತಮ್ಮ ಮಗ, ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅವರನ್ನು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿಸಿರುವ ಕುರಿತು ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ‘ಷಡ್ಯಂತ್ರ ಮಾಡಲಿ ಬಿಡಿ, ಅದರ ಬಗ್ಗೆ ಈಗ ಏನನ್ನೂ ಹೇಳುವುದಿಲ್ಲ. ನನಗೆ ನ್ಯಾಯಾಂಗ ಮತ್ತು ದೇವರ ಮೇಲೆ ನಂಬಿಕೆ ಇದೆ. ಯಾವುದಕ್ಕೂ ಹೆದರಿ ಓಡಿಹೋಗುವುದಿಲ್ಲ’ ಎಂದರು.

‘ಈ ಪ್ರಕರಣದಲ್ಲಿ ಏನೇನು ನಡೆದಿದೆ ಎಂದು ಸೂರಜ್‌ ಶನಿವಾರವೇ ಹೇಳಿಲ್ವಾ? ಸಮಯ ಬಂದಾಗ ಎಲ್ಲವನ್ನೂ ನಾನು ಹೇಳುತ್ತೇನೆ. ಷಡ್ಯಂತ್ರ ಮಾಡಿದವರು ಯಾರು ಎಂಬುದನ್ನು ಈಗ ಹೇಳುವುದಿಲ್ಲ’ ಎಂದರು.

ಪ್ರತಿಕ್ರಿಯೆಗೆ ನಕಾರ: ಸೂರಜ್‌ ಬಂಧನ ಪ್ರಕರಣ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ, ‘ನನಗೆ ಏಕೆ ಆ ಬಗ್ಗೆ ಪ್ರಶ್ನೆ ಕೇಳುತ್ತಿದ್ದೀರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗಾರರು ಭಾನುವಾರ ಈ ಬಗ್ಗೆ ಪ್ರಶ್ನಿಸಿದಾಗ, ‘ನೀವು ನನಗೆ ಏಕೆ ಬೆದರಿಕೆ ಹಾಕುತ್ತಿದ್ದೀರಿ? ಈ ರೀತಿಯ ವಿಚಾರಗಳಿಗೆ ನಾನು ಪ್ರತಿಕ್ರಿಯಿಸುವ ಅಗತ್ಯವಿಲ್ಲ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ’ ಎಂದರು.

‘ಸೂರಜ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗುತ್ತದೆಯೇ’ ಎಂದು ಕೇಳಿದಾಗ, ‘ಯಾರನ್ನ? ನನಗೂ ಅದಕ್ಕೂ ಏನು ಸಂಬಂಧ? ಅವೆಲ್ಲವನ್ನೂ ಆಮೇಲೆ ಮಾತಾಡೋಣ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT