ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಾನ್‌ಸ್ಟೆಬಲ್‌ ಹುದ್ದೆ ಭರ್ತಿ: ಮರುಪರೀಕ್ಷೆಗೆ ಆಗ್ರಹ

Published 25 ಜುಲೈ 2024, 16:15 IST
Last Updated 25 ಜುಲೈ 2024, 16:15 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್‌ ಇಲಾಖೆಯ ಸಶಸ್ತ್ರ ಮೀಸಲು ಪಡೆ ಕಾನ್‌ಸ್ಟೆಬಲ್‌ ಹುದ್ದೆ ಭರ್ತಿಗೆ ನಡೆದ ದೈಹಿಕ ಪರೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಲಾಗಿದ್ದು, ಮರುಪರೀಕ್ಷೆ ನಡೆಸಬೇಕು ಎಂದು ಲಿಂಗತ್ವ ಮತ್ತು ‘ಲೈಂಗಿಕ ಬಹುತ್ವಕ್ಕಾಗಿ ಚಳವಳಿ’ ಆಗ್ರಹಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷೆ ವೈಶಾಲಿ, ‘ಪೊಲೀಸ್‌ ಕಾನ್‌ಸ್ಟೆಬಲ್‌ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಎಲ್ಲ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ತರಬೇತಿ ನೀಡಬೇಕು. ಈ ಸಮುದಾಯದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ದೈಹಿಕ ಪರೀಕ್ಷೆ ನಡೆಸಬೇಕು’ ಎಂದು ಒತ್ತಾಯಿಸಿದರು.

ವಕೀಲ ಬಿ.ಟಿ. ವೆಂಕಟೇಶ್ ಮಾತನಾಡಿ, ‘ಪೊಲೀಸ್ ಕಾನ್‌ಸ್ಟೆಬಲ್‌ ನೇಮಕಾತಿ ಪ್ರಕ್ರಿಯೆಯ ದೈಹಿಕ ಪರೀಕ್ಷೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳನ್ನು ‘ಸಿಸ್‌ ಲಿಂಗ’ ವ್ಯಕ್ತಿಗಳ ವರ್ಗದಲ್ಲಿ ಸೇರಿಸಿರುವುದು ಸರಿಯಲ್ಲ. ಪೊಲೀಸ್‌ ಇಲಾಖೆ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಆದ್ದರಿಂದ, ಸರ್ಕಾರ ಕೂಡಲೇ ಈ ಸಮುದಾಯದ ಜೊತೆಗೆ ಸಂವಾದ ನಡೆಸಿ ಪೊಲೀಸ್‌ ಇಲಾಖೆಯಲ್ಲಿ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕು’ ಎಂದು ಸಲಹೆ ನೀಡಿದರು.

ಮಾನವ ಹಕ್ಕುಗಳ ಹೋರಾಟಗಾರ ಮನೋಹರ್ ಎಲವರ್ತಿ ಮಾತನಾಡಿ, ‘ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡಿರುವ ಶೇಕಡ 1ರಷ್ಟು ಮೀಸಲಾತಿಯಿಂದ ಈ ಸಮುದಾಯದ ಕೆಲವರಿಗೆ ಸರ್ಕಾರಿ ಉದ್ಯೋಗ ಸಿಕ್ಕಿದೆ. ಈ ಸಮುದಾಯದ ಬಹುತೇಕ ಮಂದಿ ವಿದ್ಯಾಭ್ಯಾಸವನ್ನು ಸ್ಥಗಿತಗೊಳಿಸಿದ್ದು, ಹಲವರಿಗೆ ಉದ್ಯೋಗದ ಅರ್ಹತಾ ವಯೋಮಿತಿ ಮೀರಿದೆ. ಆದ್ದರಿಂದ, ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಕನಿಷ್ಠ ಐದು ವರ್ಷ ವಯೋಮಿತಿಯನ್ನು ಸಡಿಲಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT