ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯುವನಿಧಿಯಲ್ಲಿ ಬೀದರ್‌ ಸಾಧನೆ ಕಳಪೆ: ಎಸ್. ಆರ್. ಮೆಹರೋಜ್ ಖಾನ್

Published : 11 ಸೆಪ್ಟೆಂಬರ್ 2024, 13:01 IST
Last Updated : 11 ಸೆಪ್ಟೆಂಬರ್ 2024, 13:01 IST
ಫಾಲೋ ಮಾಡಿ
Comments

ಬೀದರ್‌: ‘ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ‘ಯುವನಿಧಿ’ಯಲ್ಲಿ ಬೀದರ್‌ ಜಿಲ್ಲೆಯ ಸಾಧನೆ ಬಹಳ ಕಳಪೆಯಾಗಿದೆ. ‘ಯುವನಿಧಿ’ಗೆ ಸಂಬಂಧಿಸಿದಂತೆ ಅಧಿಕಾರಿಗಳು ಮಾಡುತ್ತಿರುವ ಕೆಲಸ ತೃಪ್ತಿ ತಂದಿಲ್ಲ’ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್. ಆರ್. ಮೆಹರೋಜ್ ಖಾನ್ ಬೇಸರ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ಏರ್ಪಡಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ‌ಪರಿಶೀಲನಾ ಸಭೆ ಹಾಗೂ ಫಲಾನುಭವಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬೀದರ್‌ ಜಿಲ್ಲೆಯಲ್ಲಿ ‘ಯುವನಿಧಿ’ಯಲ್ಲಿ ಬಹಳ ಕಳಪೆ ಕೆಲಸವಾಗಿದೆ. ‘ಯುವನಿಧಿ’ ಮೂಲಕ ನಿರುದ್ಯೋಗಿ ಪದವೀಧರರಿಗೆ ಹಣ ಕೊಡಲಾಗುತ್ತಿದೆ. ಇದಕ್ಕಿಂತ ಮುಖ್ಯವಾಗಿ ಈ ಯೋಜನೆ ಮೂಲಕ ನಿರುದ್ಯೋಗಿಗಳನ್ನು ಗುರುತಿಸಿ ಅವರಿಗೆ ಕೌಶಲ್ಯ ತರಬೇತಿ ಕೊಡುವುದಾಗಿದೆ. ಆದರೆ, ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೆಲಸವೇ ಆಗಿಲ್ಲ. ನಿಮ್ಮ ಕಾರ್ಯವೈಖರಿ ಬದಲಿಸಿಕೊಳ್ಳಬೇಕು ಎಂದು ಉದ್ಯೋಗ ವಿನಿಮಯ ಅಧಿಕಾರಿ ಬಸವರಾಜ ಅವರನ್ನು ತರಾಟೆಗೆ ತೆಗೆದುಕೊಂಡರು.

‘ಯುವನಿಧಿ’ ಅಡಿ ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ಕೊಡುವುದರ ಬಗ್ಗೆ ಸರ್ಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಬಸವರಾಜ ಹೇಳಿದರು. ‌ಇದರಿಂದ ಮತ್ತಷ್ಟು ಸಿಟ್ಟಿಗಾದ ಮೆಹರೋಜ್‌ ಖಾನ್‌, ಎಲ್ಲ ಮಾಹಿತಿಯೂ ಯುವನಿಧಿ ಒಳಗೊಂಡಿದೆ. ನೀವು ಕೌಶಲ್ಯ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಬೇಕು. ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿ ಕೊಟ್ಟು ಆ ಮೂಲಕ ಅವರಿಗೆ ಉದ್ಯೋಗ ಒದಗಿಸಿಕೊಡುವ ಕೆಲಸ ಮಾಡಬೇಕು. ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಬೇಕು ಎಂದು ಸೂಚನೆ ಕೊಟ್ಟರು.

ಪದವಿ, ಡಿಪ್ಲೊಮಾ ಕಾಲೇಜುಗಳಿಗೆ ಭೇಟಿ ಕೊಡಬೇಕು. ಅಲ್ಲಿ ಪಾಸಾದವರ ಮಾಹಿತಿ ಸಂಗ್ರಹಿಸಿ, ಯುವನಿಧಿಯ ಸೌಲಭ್ಯಗಳ ಕುರಿತು ಅವರ ಮೊಬೈಲ್‌ಗೆ ಸಂದೇಶ ಕಳಿಸಬೇಕು. ಕಾಲೇಜುಗಳಲ್ಲಿ ಪ್ರಚಾರ ಮಾಡಬೇಕು. ಜಿಲ್ಲೆಯಲ್ಲಿ ಇತರೆ ನಾಲ್ಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಶೇ 95ರಷ್ಟಾಗಿದೆ. ಆದರೆ, ಯುವನಿಧಿಯಲ್ಲಿ ಬಹಳ ಹಿಂದೆ ಬಿದ್ದಿದೆ ಎಂದರು.

ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 3.29 ಲಕ್ಷ ಫಲಾನುಭವಿಗಳಿದ್ದು, ಇದುವರೆಗೆ ₹681 ಕೋಟಿ ವೆಚ್ಚವಾಗಿದೆ. ಗೃಹಜ್ಯೋತಿ ಅಡಿ 3.51 ಲಕ್ಷ ಫಲಾನುಭವಿಗಳಿದ್ದು ₹169 ಕೋಟಿ, ಅನ್ಯಭಾಗ್ಯ ಯೋಜನೆಯಡಿ 3.60 ಲಕ್ಷ ಫಲಾನುಭವಿಗಳಿದ್ದು, ₹218 ಕೋಟಿ, ಶಕ್ತಿ ಯೋಜನೆಯಡಿ 4.94 ಮಹಿಳೆಯರು ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಪ್ರಯಾಣ ಬೆಳೆಸಿದ್ದು, ₹135 ಕೋಟಿ ವೆಚ್ಚವಾಗಿದೆ. ಯುವನಿಧಿಯಲ್ಲಿ 2,746 ಫಲಾನುಭವಿಗಳಿದ್ದು ₹5.10 ಕೋಟಿ ವೆಚ್ಚವಾಗಿದೆ ಎಂದು ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಿಗೆ ಬಹಳ ಅನುಕೂಲವಾಗಿದೆ. ಮಕ್ಕಳ ಶಾಲಾ ಶುಲ್ಕ, ಔಷಧಿ ಖರೀದಿ ಸೇರಿದಂತೆ ಇತರೆ ಕೆಲಸಗಳಿಗೆ ಹಣ ಬಳಸಿಕೊಳ್ಳುತ್ತಿದ್ದಾರೆ. ಯುಪಿಎ ಸರ್ಕಾರವಿದ್ದಾಗ ನರೇಗಾ ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆ ಮೂಲಕ ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲೆತ್ತುವ ಕೆಲಸ ಮಾಡಲಾಗಿತ್ತು. ಅದರ ಅಧ್ಯಯನಕ್ಕೆ ವಿಶ್ವಸಂಸ್ಥೆಯಿಂದ ಅಧ್ಯಯನ ತಂಡವೊಂದು ಭಾರತಕ್ಕೆ ಬಂದಿತ್ತು. ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಸಮೀಕ್ಷೆ ನಡೆಸುತ್ತಿವೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್‌ ಚಿಮಕೋಡೆ ಹಾಜರಿದ್ದರು.

‘ಅಧ್ಯಕ್ಷರು ಪ್ರತಿ ತಿಂಗಳು ಸಭೆ ನಡೆಸಲಿ’

‘ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರತಿ ತಿಂಗಳು ಜಿಲ್ಲಾಮಟ್ಟದಲ್ಲಿ ಸಭೆ ನಡೆಸಬೇಕು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೊಂದಿಗೆ ಚರ್ಚಿಸಿ, ಒಂದು ದಿನಾಂಕ ನಿಗದಿಪಡಿಸಿ, ಸಭೆ ನಡೆಸಿ ವಿವಿಧ ಇಲಾಖೆಗಳಿಂದ ಮಾಹಿತಿ ಪಡೆದು, ಎಲ್ಲ ಐದು ಗ್ಯಾರಂಟಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು’ ಎಂದು ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್‌ ಚಿಮಕೋಡೆ ಅವರಿಗೆ ಎಸ್. ಆರ್. ಮೆಹರೋಜ್ ಖಾನ್ ಸೂಚಿಸಿದರು.

ಅದೇ ರೀತಿ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಪ್ರತಿ ತಿಂಗಳು ಸಭೆ ನಡೆಸಬೇಕು. ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಏನಾದರೂ ಸಮಸ್ಯೆಗಳಿದ್ದರೆ ಬಗೆಹರಿಸಬೇಕು. ಯೋಜನೆ ವ್ಯಾಪ್ತಿಗೆ ಸೇರದವರನ್ನು ಸೇರಿಸುವ ಕೆಲಸವೂ ಮಾಡಬೇಕೆಂದು ಹೇಳಿದರು.

‘ಬಸ್‌ ನಿಲ್ಲಿಸದ ಕಾರಣ ತೊಂದರೆ’

‘ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಮಹಿಳೆಯರಿಗೆ ಬಹಳ ಅನುಕೂಲವಾಗಿದೆ. ಇದೇ ವೇಳೆ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಬಸ್ಸುಗಳ ಸಂಖ್ಯೆ ಹೆಚ್ಚಿಸಿಲ್ಲ. ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ’ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಲತಾ ಹಾರಕೂಡ ಸಭೆಯ ಗಮನಕ್ಕೆ ತಂದರು.

ಸಮಿತಿ ಸದಸ್ಯೆ ಪೂಜಾ ಜಾರ್ಜ್‌ ಮತ್ತಿತರರು ಮಧ್ಯ ಪ್ರವೇಶಿಸಿ, ‘ಪೀಕ್‌ ಅವರ್‌ನಲ್ಲಿ ಪ್ರಯಾಣಿಕರಿಗೆ ಬಹಳ ಸಮಸ್ಯೆ ಉಂಟಾಗುತ್ತಿದೆ. ಇಡೀ ಜಿಲ್ಲೆಯ ಜನ ಬಸ್‌ಗಳಲ್ಲಿ ಆಗುತ್ತಿರುವ ದಟ್ಟಣೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ವಿದ್ಯಾರ್ಥಿಗಳು ಬಹಳ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ತಿಳಿಸಿದರು.

ಕೆಕೆಆರ್‌ಟಿಸಿ ಬೀದರ್‌ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್‌ ಮಾತನಾಡಿ, ಜಿಲ್ಲೆಯಲ್ಲಿ ಶಕ್ತಿ ಯೋಜನೆಯಡಿ 4.94 ಮಹಿಳೆಯರು ಉಚಿತವಾಗಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಸಂಸ್ಥೆಗೆ ₹1.36 ಕೋಟಿ ಆದಾಯ ಬಂದಿದೆ. ಎಲ್ಲೆಲ್ಲಿ ಬಸ್‌ಗಳಿಗೆ ಬೇಡಿಕೆ ಇದೆಯೋ ಅಲ್ಲಿ ಬಸ್‌ ಸೌಕರ್ಯ ಕಲ್ಪಿಸಲಾಗುವುದು. ವಿದ್ಯಾರ್ಥಿಗಳು ಹೆಚ್ಚಿರುವ ಕಡೆಗಳಲ್ಲಿ ಟ್ರಿಪ್‌ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಎಸ್. ಆರ್. ಮೆಹರೋಜ್ ಖಾನ್ ಮಾತನಾಡಿ, ಸದಸ್ಯರು ಹೇಳಿರುವ ಸಮಸ್ಯೆಗಳನ್ನು ನೋಟ್‌ ಮಾಡಿಕೊಂಡು ಆದ್ಯತೆ ಮೇರೆಗೆ ಬಗೆಹರಿಸಬೇಕು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT