ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ಮತ್ತೆ ನೆನಪಿಸುತ್ತಿದೆ 2008ರ ಅತಿಕ್ರಮಣ ತೆರವು

16 ವರ್ಷಗಳ ನಂತರ ಪುನಃ ಸದ್ದು ಮಾಡುತ್ತಿರುವ ಜೆಸಿಬಿಗಳು; ನಗರ ಬೆಳೆದಂತೆ ಹೆಚ್ಚಾಗದ ಮೂಲಸೌಕರ್ಯ
Published 8 ಜುಲೈ 2024, 5:25 IST
Last Updated 8 ಜುಲೈ 2024, 5:25 IST
ಅಕ್ಷರ ಗಾತ್ರ

ಬೀದರ್‌: ಬೀದರ್‌ ಜಿಲ್ಲೆಯಾದ್ಯಂತ ಕೆಲವು ದಿನಗಳಿಂದ ಜೆಸಿಬಿಗಳು ಸದ್ದು ಮಾಡುತ್ತಿವೆ. ಇದು 2008ರ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಮತ್ತೆ ನೆನಪು ಮಾಡಿಕೊಳ್ಳುವಂತೆ ಮಾಡಿದೆ.

ಅದಕ್ಕೆ ಕಾರಣವೂ ಇದೆ. ಏಕೆಂದರೆ ಹಿಂದೆಂದೂ ಬೀದರ್‌ ಜಿಲ್ಲೆಯ ಜನತೆ ನೋಡದಷ್ಟು, ಕೇಳದಷ್ಟು ದೊಡ್ಡ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಒತ್ತುವರಿದಾರರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗಿತ್ತು. ಜೆಸಿಬಿಗಳು, ಹಿಟಾಚಿಗಳು ಜಿಲ್ಲೆಯ ಜನರಿಗೆ ಹೆಚ್ಚು ಚಿರಪರಿಚತವಾಗಿದ್ದೇ ಆ ಸಂದರ್ಭದಲ್ಲಿ. ಈಗ ಪುನಃ ಜೆಸಿಬಿಗಳು ಸದ್ದು ಮಾಡುತ್ತಿರುವುದರಿಂದ ಸಹಜವಾಗಿಯೇ 2008ರಲ್ಲಾದ ಘಟನೆಯನ್ನು ನೆನಪು ಮಾಡಿಕೊಳ್ಳುವಂತೆ ಮಾಡಿದೆ.

ಆಗಿದ್ದೇನು?

2007ರಲ್ಲಿ ಬೀದರ್‌ ಜಿಲ್ಲೆಗೆ ಐಎಎಸ್‌ ಅಧಿಕಾರಿ ಹರ್ಷ ಗುಪ್ತಾ ಅವರು ಜಿಲ್ಲಾಧಿಕಾರಿ ಆಗಿ ಬಂದಿದ್ದರು. ಮರುವರ್ಷ ಮಳೆಗಾಲದ ಆರಂಭದಲ್ಲಿ ನಗರದ ಲೇಬರ್‌ ಕಾಲೊನಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮಳೆ ನೀರು ನುಗ್ಗಿ, ಅಪಾರ ಹಾನಿಗೆ ಕಾರಣವಾಗಿತ್ತು. ಸಮಸ್ಯೆಯ ಮೂಲ ಹುಡುಕಿದಾಗ ಒತ್ತುವರಿಯಿಂದ ಅವಾಂತರ ಆಗಿದೆ ಎಂಬುದು ಡಿಸಿಗೆ ವರದಿ ಸಲ್ಲಿಕೆಯಾಗಿತ್ತು.

ನಾಲೆಗಳು, ರಾಜಕಾಲುವೆಗಳ ಸಮೀಕ್ಷೆಗೆ ಮುಂದಾದಾಗ ರಸ್ತೆಗಳು, ಸರ್ಕಾರಿ ಆಸ್ತಿ, ಉದ್ಯಾನಗಳೆಲ್ಲ ದೊಡ್ಡ ಮಟ್ಟದಲ್ಲಿ ಅತಿಕ್ರಮಣವಾಗಿದ್ದು ಬೆಳಕಿಗೆ ಬಂತು. ಇದರಲ್ಲಿ ಸಾಮಾನ್ಯ ಜನರಿಗಿಂತ ಪ್ರಭಾವಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ನೋಟಿಸ್‌ ಕೊಟ್ಟರೆ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದರೆ, ಅಂದುಕೊಂಡ ಕೆಲಸ ಮಾಡಲು ವಿಳಂಬವಾಗುತ್ತದೆ ಎಂದು ಭಾವಿಸಿದ ಚಾಣಾಕ್ಷ ಹರ್ಷ ಗುಪ್ತಾ ಅವರು, ಅಧಿಕಾರಿಗಳೊಂದಿಗೆ ಗುಪ್ತ ಸಭೆ ನಡೆಸಿ, ಏಕಾಏಕಿ ಅತಿಕ್ರಮಣದ ವಿರುದ್ಧ ದೊಡ್ಡ ಸಮರ ಸಾರಿದರು. ಆರಂಭದಲ್ಲೇ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳ ಒತ್ತುವರಿ ತೆರವುಗೊಳಿಸಿದರು. ಎಷ್ಟೇ ಪ್ರತಿರೋಧ ಬಂದರೂ ಅದನ್ನು ಲೆಕ್ಕಿಸದೆ ತೆರವು ಮಾಡಿಸಿದರು. ಇದಾದ ನಂತರ ಜನ ಸ್ವಯಂಪ್ರೇರಣೆಯಿಂದ ಅತಿಕ್ರಮಣ ತೆರವುಗೊಳಿಸಲು ಪ್ರಾರಂಭಿಸಿದರು.

ತೆರವಿನ ಪ್ರಮಾಣ ಎಷ್ಟಿತ್ತು ಎಂದರೆ ಭಾರಿ ಪ್ರಮಾಣದ ಭೂಕಂಪನಕ್ಕೆ ನಗರವೊಂದು ನಲುಗಿ ಹೋಗಿ ಕಟ್ಟಡಗಳೆಲ್ಲ ನೆಲಕ್ಕುರುಳಿದ ದೃಶ್ಯದಂತಿತ್ತು. ಜಿಲ್ಲಾ ಕೇಂದ್ರದ ನಂತರ ಅದು ತಾಲ್ಲೂಕು ಕೇಂದ್ರಗಳಿಗೂ ವಿಸ್ತರಣೆಯಾಯಿತು.

33 ರಸ್ತೆಗಳ ವಿಸ್ತರಣೆ

ತೆರವಿನ ಪರಿಣಾಮ ಬೀದರ್‌ ನಗರವೊಂದರಲ್ಲೇ 33 ರಸ್ತೆಗಳು 22 ಅಡಿಗಳಿಂದ 100 ಅಡಿಗಳವರೆಗೆ ವಿಸ್ತರಣೆಯಾದವು. ಎಲ್ಲೆಡೆ ವಿದ್ಯುತ್‌ ದೀಪಗಳು, ಉದ್ಯಾನಗಳ ಸುಂದರೀಕರಣ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಜಾಗ ಹದ್ದು ಬಸ್ತು ಮಾಡಲಾಯಿತು. ಆನಂತರ ರಿಂಗ್‌ರೋಡ್‌ ಕೆಲಸ ಕೂಡ ಶುರುವಾಯಿತು. ಕುಗ್ರಾಮದಂತಿದ್ದ ಬೀದರ್‌ ನಗರದ ಚಹರೆ ಸಂಪೂರ್ಣ ಬದಲಾಯಿತು. ಅಂದಿನ ಮುಖ್ಯಮಂತ್ರಿ, ‘ನಮ್ಮ ಸರ್ಕಾರ ರಾಜ್ಯದಲ್ಲಿ ಯಾವ ರೀತಿ ಅಭಿವೃದ್ಧಿ ಮಾಡುತ್ತಿದೆ, ಹಿಂದುಳಿದ ಜಿಲ್ಲೆಗಳನ್ನು ಹೇಗೆ ಅಭಿವೃದ್ಧಿಗೊಳಿಸುತ್ತಿದೆ ಎನ್ನುವುದಕ್ಕೆ ಬೀದರ್‌ ಜಿಲ್ಲೆಯೇ ಸಾಕ್ಷಿ’ ಎಂದು ಹೇಳಿಕೆ ಕೊಟ್ಟಿದ್ದರು. ಇದರಿಂದಲೇ ಅದರ ಮಹತ್ವ ಅರಿತುಕೊಳ್ಳಬಹುದು.

ನಿರ್ವಹಣೆಗೆ ಪರದಾಟ

2008, 2009ರಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದ ಬೀದರ್‌ ಜಿಲ್ಲೆ ಹೊಸ ಸ್ವರೂಪ ಪಡೆದುಕೊಂಡು ಪುಟಿದೆದ್ದಿತ್ತು. ಆದರೆ, ಆನಂತರ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಯಿತು. ಬಳಿಕ ನಿರ್ವಹಣೆಯೂ ಕಷ್ಟಸಾಧ್ಯವಾಯಿತು. ಇಂದಿಗೂ ರಿಂಗ್‌ರೋಡ್‌ ಕಾಮಗಾರಿ ಪೂರ್ಣಗೊಂಡಿಲ್ಲ. ರಿಂಗ್‌ ಆಕಾರದಲ್ಲಿ ರಿಂಗ್‌ರೋಡ್‌ ಆಗದ ಕಾರಣ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಗುಂಪಾ ರಿಂಗ್‌ ರೋಡ್‌ನಲ್ಲಿ ಒಂದು ಬದಿಯಷ್ಟೇ ರಸ್ತೆ ನಿರ್ಮಾಣವಾಗಿದೆ. ಇನ್ನೊಂದು ಬದಿಯಲ್ಲಿ ಕಟ್ಟಡಗಳಿದ್ದು, ಇದುವರೆಗೆ ಅವುಗಳನ್ನು ತೆರವುಗೊಳಿಸಲು ಸಾಧ್ಯವಾಗಿಲ್ಲ. ನಿತ್ಯ ಸಂಚಾರ ದಟ್ಟಣೆಯಿಂದ ಜನ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ರಿಂಗ್‌ರೋಡ್‌ನಲ್ಲಿ ಹಲವೆಡೆ ವಿದ್ಯುತ್‌ ದೀಪಗಳು ಕೆಟ್ಟು ಹೋಗಿ, ರಾತ್ರಿ ವೇಳೆ ಕತ್ತಲಿಗೆ ಕಾರಣವಾಗಿದೆ. ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ.

ಪ್ರಮುಖ ರಸ್ತೆಗಳ ನಿರ್ವಹಣೆ ಕೂಡ ಅಷ್ಟಕಷ್ಟೇ ಎಂಬಂತಾಗಿದೆ. ಉದ್ಯಾನದ ಜಾಗವನ್ನು ಆ ಸಂದರ್ಭದಲ್ಲಿ ಹದ್ದು ಬಸ್ತು ಮಾಡಲಾಗಿತ್ತು. ಇದರಲ್ಲಿ ಬಹುತೇಕವು ಅಭಿವೃದ್ಧಿ ಕಂಡಿಲ್ಲ. ವಾರಾಂತ್ಯಕ್ಕೆ ಈಗಲೂ ಹೆಚ್ಚಿನ ಜನ ಬರೀದ್‌ ಷಾಹಿ ಉದ್ಯಾನವನ್ನೇ ನೆಚ್ಚಿಕೊಂಡಿದ್ದಾರೆ.

ಇಷ್ಟೇ ಅಲ್ಲ, ಅಂದು ನಿರ್ಮಾಣಗೊಂಡ ಫುಟ್‌ಪಾತ್‌ಗಳೆಲ್ಲ ಅತಿಕ್ರಮಣವಾಗಿದ್ದು, ಪಾದಚಾರಿಗಳು ರಸ್ತೆಯಲ್ಲಿ ನಡೆದಾಡದಂತಾಗಿದೆ. ಪೊಲೀಸ್‌ ಇಲಾಖೆಯ ಪ್ರಕಾರ, ಜಿಲ್ಲೆಯಲ್ಲಿ ಆರು ಜನ ಪಾದಚಾರಿಗಳು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಕಾಲುವೆಗಳು ಹಾಳಾಗಿದ್ದರಿಂದ ಮಳೆ ಹೊಲಸಿನೊಂದಿಗೆ ಮಳೆ ನೀರು ರಸ್ತೆಗಳ ಮೇಲೆ ಸಂಗ್ರಹವಾಗುತ್ತಿತ್ತು. ಈ ಕುರಿತು ‘ಪ್ರಜಾವಾಣಿ’ ಸೇರಿದಂತೆ ಹಲವು ಸಂಘ ಸಂಸ್ಥೆಗಳು ದನಿ ಎತ್ತಿದ ನಂತರ ಜಿಲ್ಲಾಡಳಿತ ಈಗ ಎಚ್ಚೆತ್ತುಕೊಂಡಿದೆ.

ಉಪವಿಭಾಗಾಧಿಕಾರಿ, ನಗರಸಭೆ ಪೌರಾಯುಕ್ತ ಹಾಗೂ ಡಿವೈಎಸ್ಪಿ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿದ್ದು, ಫುಟ್‌ಪಾತ್‌, ರಸ್ತೆಗಳ ಅತಿಕ್ರಮಣ ತೆರವುಗೊಳಿಸಲಾಗುತ್ತಿದೆ. ತಾಲ್ಲೂಕು ಕೇಂದ್ರಗಳಲ್ಲಿ ಈ ಜವಾಬ್ದಾರಿಯನ್ನು ಅಲ್ಲಿನ ತಹಶೀಲ್ದಾರ್‌ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಒಪ್ಪಿಸಲಾಗಿದೆ. ಕೆಲವೆಡೆ ಆಡಳಿತದಿಂದ ತೆರವು ಮಾಡುತ್ತಿದ್ದರೆ, ಮತ್ತೆ ಕೆಲವೆಡೆ ಜನರೇ ಸ್ವಯಂಪ್ರೇರಣೆಯಿಂದ ಒತ್ತುವರಿ ತೆರವು ಮಾಡುತ್ತಿದ್ದಾರೆ. ಈಗ ಈ ಹಿಂದಿನಂತೆ ರಸ್ತೆಗಳು ವಿಶಾಲವಾಗಿ ಕಾಣುತ್ತಿವೆ. ಹಲವೆಡೆ ಹೊಸದಾಗಿ ಚರಂಡಿಗಳನ್ನು ನಿರ್ಮಿಸಲಾಗುತ್ತಿದೆ. ಚರಂಡಿ, ರಾಜಕಾಲುವೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಪ್ರತಿ ಸಲ ಜನ ಹಕ್ಕೊತ್ತಾಯ ಮಾಡಿದ ನಂತರ ಎಚ್ಚೆತ್ತುಕೊಳ್ಳುವುದರ ಬದಲು ಇದೆಲ್ಲ ಕಾಲಕಾಲಕ್ಕೆ ಮಾಡುತ್ತಿದ್ದರೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

‘ನಗರಗಳು ಸಮಯ ಕಳೆದಂತೆಲ್ಲ ವೇಗವಾಗಿ ಬೆಳೆಯುತ್ತವೆ. ಜನಸಂಖ್ಯೆ ಕೂಡ ಹೆಚ್ಚಾಗುತ್ತದೆ. ಅದಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಆದರೆ, ಆ ಕೆಲಸ ಆಗುತ್ತಿಲ್ಲ. ಬೀದರ್‌ನಲ್ಲಿ 2008ರಲ್ಲಾದ ಕೆಲಸವನ್ನು ಸ್ವಲ್ಪ ನಿರ್ವಹಣೆಯೊಂದಿಗೆ ಮುಂದುವರಿಸಿಕೊಂಡು ಹೋದರೆ ಇನ್ನಷ್ಟು ಅಭಿವೃದ್ಧಿ ಕಾಣಬಹುದು. ಆದರೆ, ಅದಾಗುತ್ತಿಲ್ಲ. ಮೂಲಸೌಕರ್ಯವಲ್ಲದಿದ್ದರೂ ತೆರವು ಕಾರ್ಯಾಚರಣೆ ಮೂಲಕ ಹಳೆಯದನ್ನು ಉಳಿಸಿಕೊಳ್ಳುತ್ತಿರುವುದು ಉತ್ತಮ ಕೆಲಸ ಎನ್ನುತ್ತಾರೆ’ ಹಿರಿಯ ನಾಗರಿಕರಾದ ವೀರಭದ್ರಪ್ಪ, ಬಸವರಾಜ ರಾಮರಾಜ್‌.

ಎಂಜಿನಿಯರಿಂಗ್‌ ಪಾಲಿಟೆಕ್ನಿಕ್‌ ಜಾಗವೂ ಅತಿಕ್ರಮಣ

ಬೀದರ್‌ನಲ್ಲಿ ಸರ್ಕಾರಿ ರಸ್ತೆ ಫುಟ್‌ಪಾತ್‌ ಜತೆಗೆ ಆಸ್ತಿಯೂ ಅತಿಕ್ರಮಣವಾಗಿದೆ. ನಗರದ ಸರ್ಕಾರಿ ಎಂಜಿನಿಯರಿಂಗ್‌ ಪಾಲಿಟೆಕ್ನಿಕ್‌ ಕಾಲೇಜು ಕೂಡ ಹೊರತಾಗಿಲ್ಲ. ಒಟ್ಟು 12 ಎಕರೆ ಜಾಗದಲ್ಲಿ ಎಂಜಿನಿಯರಿಂಗ್ ಪಾಲಿಟೆಕ್ನಿಕ್‌ ಕಾಲೇಜು ಇದೆ. ಇವುಗಳಿಗೆ ಸೇರಿದ ಜಾಗ ಖಾಸಗಿಯವರು ಅತಿಕ್ರಮಿಸಿದ್ದು ಸ್ವತಃ ಕಾಲೇಜಿನವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಇನ್ನು ಮೈಲೂರ್‌ ಮುಖ್ಯರಸ್ತೆಯಿಂದ ಎಂಜಿನಿಯರಿಂಗ್‌ ಕಾಲೇಜಿಗೆ ಹೋಗುವ ರಸ್ತೆ 50 ಅಡಿ ಇದೆ. ಆದರೆ ಅತಿಕ್ರಮಣದಿಂದ ಅದು 20 ಅಡಿಗೆ ಇಳಿದಿದೆ. ವಾಹನ ಸಂಚಾರಕ್ಕೆ ಬಹಳ ಸಮಸ್ಯೆಯಾಗುತ್ತಿದೆ. ಜನ ಮೈಲೂರ್‌ ಬದಲು ಕುಂಬಾರವಾಡ ಕ್ರಾಸ್‌ ಮೂಲಕ ಕಾಲೇಜಿಗೆ ಹೋಗಿ ಬರುತ್ತಿದ್ದಾರೆ.

ಅಪಾಯ ಆಹ್ವಾನಿಸುತ್ತಿರುವ ಮರಗಳು

ನಗರದ ಬಹುತೇಕ ಪ್ರಮುಖ ರಸ್ತೆಗಳ ವಿಭಜಕದಲ್ಲಿ ಬೆಳೆಸಿದ ಗಿಡಗಳು ಮರವಾಗಿ ದೊಡ್ಡದಾಗಿ ಬೆಳೆದಿವೆ. ಆದರೆ ಅವುಗಳ ಬೇರುಗಳು ಬೆಳೆಯದ ಕಾರಣ ಜೋರು ಗಾಳಿ ಮಳೆ ಬಂದರೆ ಬುಡಸಮೇತ ನೆಲಕ್ಕುರುಳುತ್ತಿವೆ. ಇತ್ತೀಚೆಗೆ ಬೊಮ್ಮಗೊಂಡೇಶ್ವರ ವೃತ್ತದಲ್ಲಿ ನಡೆದ ಘಟನೆಯೇ ಸಾಕ್ಷಿ. ಹೋದ ವರ್ಷವೂ ವಿದ್ಯಾನಗರದಲ್ಲಿ ಇಂತಹುದೇ ಘಟನೆ ನಡೆದಿತ್ತು.  ‘ರಸ್ತೆ ವಿಭಜಕಗಳಲ್ಲಿ ಮರಗಳು ಬಹಳ ದೊಡ್ಡದಾಗಿ ಬೆಳೆದಿವೆ. ಅವುಗಳ ಕಾಂಡಗಳಿಂದ ವಿದ್ಯುತ್‌ ದೀಪಗಳಿಂದ ಬೆಳಕು ಬೀಳುತ್ತಿಲ್ಲ. ಗಾಳಿ ಮಳೆಗೆ ಉರುಳಿ ಬೀಳುತ್ತಿವೆ. ಅವುಗಳ ಕಾಂಡಗಳನ್ನು ಕತ್ತರಿಸಬೇಕು. ಎತ್ತರವಾಗಿ ಬೆಳೆಯುವ ಮರಗಳ ಬದಲು ಸುಂದರವಾಗಿ ಕಾಣುವಂತಹ ಮಧ್ಯಮ ಗಾತ್ರದ ಗಿಡ ಮರಗಳನ್ನು ಬೆಳೆಸಬೇಕು. ಇದರಿಂದ ಯಾರಿಗೂ ಹಾನಿ ಆಗುವುದಿಲ್ಲ’ ಎಂದು ಯುವ ಮುಖಂಡ ಸಂಗಮೇಶ ನಾಸಿಗಾರ ಆಗ್ರಹಿಸಿದ್ದಾರೆ.

ಇನ್ನಷ್ಟು ಕಟ್ಟುನಿಟ್ಟಾಗಿ ಕ್ರಮ ಕೈಗೊಂಡು ವಾಣಿಜ್ಯ ಮಳಿಗೆಗಳ ನೆಲ ಮಾಳಿಗೆ ಸ್ಥಳವನ್ನು ಖಾಲಿ ಮಾಡಿಸಿದರೆ ಸಂಚಾರ ಸಮಸ್ಯೆ ದೂರವಾಗುತ್ತದೆ
ವಿನಯ್‌ ಮಾಳಗೆ, ಸಾಮಾಜಿಕ ಹೋರಾಟಗಾರ
ನಗರದ ಸುಂದರೀಕರಣದ ದೃಷ್ಟಿಯಿಂದ ಜನಸಾಮಾನ್ಯರ ಅನುಕೂಲಕ್ಕಾಗಿ ಫುಟ್‌ಪಾತ್‌ ರಸ್ತೆ ಒತ್ತುವರಿ ತೆರವುಗೊಳಿಸುತ್ತಿರುವುದು ಸ್ವಾಗತಾರ್ಹ.
ಶಿವಕುಮಾರ ಕಟ್ಟೆ, ಸಾಹಿತಿ
ಬೀದರ್‌ ನಗರದಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ
ಬೀದರ್‌ ನಗರದಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ
ಚಿಟಗುಪ್ಪದಲ್ಲಿ ಕೈಗೆತ್ತಿಕೊಂಡಿರುವ ತೆರವು ಕಾರ್ಯ
ಚಿಟಗುಪ್ಪದಲ್ಲಿ ಕೈಗೆತ್ತಿಕೊಂಡಿರುವ ತೆರವು ಕಾರ್ಯ
ಬೀದರ್‌ನ ಬೊಮ್ಮಗೊಂಡೇಶ್ವರ ವೃತ್ತದಿಂದ ಮನ್ನಳ್ಳಿಗೆ ಹೋಗುವ ರಸ್ತೆಯಲ್ಲಿ ಇತ್ತೀಚೆಗೆ ರಸ್ತೆ ವಿಭಜಕದ ಮರ ಬುಡಸಮೇತ ರಸ್ತೆ ಮೇಲೆ ಬಿದ್ದಿತು
ಬೀದರ್‌ನ ಬೊಮ್ಮಗೊಂಡೇಶ್ವರ ವೃತ್ತದಿಂದ ಮನ್ನಳ್ಳಿಗೆ ಹೋಗುವ ರಸ್ತೆಯಲ್ಲಿ ಇತ್ತೀಚೆಗೆ ರಸ್ತೆ ವಿಭಜಕದ ಮರ ಬುಡಸಮೇತ ರಸ್ತೆ ಮೇಲೆ ಬಿದ್ದಿತು
ಬೀದರ್‌ನ ಮನ್ನಳ್ಳಿ ರಸ್ತೆಯ ವಿಭಜಕದಲ್ಲಿ ಹಾಗೂ ರಸ್ತೆಬದಿಯಲ್ಲಿ ಎತ್ತರವಾಗಿ ಬೆಳೆದಿರುವ ಮರಗಳು
ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ
ಬೀದರ್‌ನ ಮನ್ನಳ್ಳಿ ರಸ್ತೆಯ ವಿಭಜಕದಲ್ಲಿ ಹಾಗೂ ರಸ್ತೆಬದಿಯಲ್ಲಿ ಎತ್ತರವಾಗಿ ಬೆಳೆದಿರುವ ಮರಗಳು ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT