ಬುಧವಾರ, 3 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ಬಡವರಿಗೆ ‘ಗ್ಯಾರಂಟಿ’ ಲಾಭ ಸಿಗಲಿ: ಈಶ್ವರ ಖಂಡ್ರೆ

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಸೂಚನೆ
Published 1 ಜುಲೈ 2024, 16:32 IST
Last Updated 1 ಜುಲೈ 2024, 16:32 IST
ಅಕ್ಷರ ಗಾತ್ರ

ಬೀದರ್‌: ‘ಎಲ್ಲ ಬಡವರಿಗೆ ರಾಜ್ಯ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳ ಲಾಭ ಸಿಗಬೇಕು. ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಗ್ಯಾರಂಟಿ ಯೋಜನೆಗಳ ಮೊದಲ ಸಭೆ ನಡೆಸಿ ಮಾತನಾಡಿದ ಅವರು, ‘ಗ್ಯಾರಂಟಿ ಯೋಜನೆ ಪ್ರಾಧಿಕಾರದ ಸದಸ್ಯರು ಕಾಲ- ಕಾಲಕ್ಕೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ ಗ್ಯಾರಂಟಿ ಯೋಜನೆಗಳ ಲಾಭವನ್ನು ಎಲ್ಲರಿಗೂ ತಲುಪುವ ಹಾಗೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

‘ಗ್ರಾಮಗಳಿಗೆ ಭೇಟಿ ನೀಡಿ ಗ್ಯಾರಂಟಿ ಯೋಜನೆಗಳನ್ನು ಎಲ್ಲ ಜನರಿಗೆ ತಲುಪಿವೆಯೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ಪಡೆಯಬೇಕು. ಜಿಲ್ಲೆಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತರಲಾಗಿದೆ. ಕೆಲವು ಅರ್ಜಿಗಳು ಪೆಂಡಿಂಗ್ ಇದ್ದು, ಅವುಗಳನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸರಿಪಡಿಸಿ, ಅರ್ಹರೆಲ್ಲರಿಗೂ ಸರ್ಕಾರದ ಯೋಜನೆಗಳ ಲಾಭ ದೊರಕಿಸಿಕೊಡಬೇಕು’ ಎಂದು ನಿರ್ದೇಶನ ನೀಡಿದರು.

ಬೀದರ್‌ ಜಿಲ್ಲೆಯಲ್ಲಿ ‘ಗೃಹ ಲಕ್ಷ್ಮಿ’, ‘ಗೃಹ ಜ್ಯೋತಿ’, ‘ಶಕ್ತಿ’, ‘ಅನ್ನಭಾಗ್ಯ’ ಹಾಗೂ ‘ಯುವನಿಧಿ’ ಯೋಜನೆಯಿಂದ ಈಗಾಗಲೇ ಸಾವಿರಾರು ಜನರಿಗೆ ಉಪಯೋಗವಾಗುತ್ತಿದೆ. ಅರ್ಹರಾದವರು ಯಾರು ಈ ಯೋಜನೆಗಳಿಂದ ಹೊರಗುಳಿದಿದ್ದಾರೆ. ಅವರಿಗೆ ಎಲ್ಲ ರೀತಿಯ ನೆರವು ನೀಡಿ ಯೋಜನೆಯ ಫಲ ಸಿಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಗೃಹ ಜ್ಯೋತಿ’ ಯೋಜನೆ ಅಡಿ ಕೆಲವು ನಿರ್ಗತಿಕರಿಗೆ ಅರ್ಜಿಗಳನ್ನು ಹಾಕಲು ಬರುವುದಿಲ್ಲ. ಅಂತಹವರಿಗೆ ವಿದ್ಯುತ್ ಸಂಪರ್ಕ ಕೊಡುವ ಕೆಲಸ ಆಗಬೇಕು. ‘ಯುವ ನಿಧಿ’ ಯೋಜನೆಗೆ ಹೆಚ್ಚಿನ ಪ್ರಚಾರ ನೀಡಬೇಕು. ಅನ್ನ ಭಾಗ್ಯ ಯೋಜನೆಯ ಸಮೀಕ್ಷೆಯನ್ನು ಮಾಡಿ ಅದರಲ್ಲಿ ಬೋಗಸ್ ಇರುವವರ ಹೆಸರು ತೆಗೆದು ಹಾಕಿ ನಿಜವಾದ ಫಲಾನುಭವಿಗಳಿಗೆ ಲಾಭ ಸಿಗುವಂತಾಗಬೇಕು’ ಎಂದು ತಿಳಿಸಿದರು.

ಬೀದರ್‌ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಜವಾಬ್ದಾರಿ ನೀಡಿದ್ದು, ಅವುಗಳನ್ನು ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಮೇಲಿಂದ ಮೇಲೆ ಸಮಿತಿ ಸಭೆ ನಡೆಸಿ, ಯೋಜನೆಗಳ ಅನುಷ್ಠಾನಕ್ಕೆ ಕೆಲಸ ಮಾಡಲಿದೆ’ ಎಂದು ತಿಳಿಸಿದರು.

ಪೌರಾಡಳಿತ ಸಚಿವ ರಹೀಂ ಖಾನ್, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಬೀದರ್‌ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ., ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಸುರೇಖಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ್ ಸೇರಿದಂತೆ ವಿವಿಧ ಇಲಾಖೆಗಳ ಗ್ಯಾರಂಟಿ ಯೋಜನೆಗಳ ಅಧಿಕಾರಿಗಳು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪ್ರಾಧಿಕಾರದ ಸದಸ್ಯರು ಹಾಜರಿದ್ದರು.

‘ಗೃಹಲಕ್ಷ್ಮಿ’ ಸಹಾಯಧನ ಕಡಿತವಿಲ್ಲ

‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳಿಗೆ ಮಾಸಿಕವಾಗಿ ಸಿಗುವ ಸಹಾಯ ಧನವನ್ನು ಯಾವುದೇ ಬ್ಯಾಂಕ್‌ಗಳು ಕಡಿತಗೊಳಿಸುವಂತಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದರು. ‘ಒಂದುವೇಳೆ ಯಾವುದೇ ಮಹಿಳೆ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡರೆ ಅವರಿಗೆ ಬರುವ ಗೃಹಲಕ್ಷ್ಮಿ ಸಹಾಯಧನದಿಂದ ಅದನ್ನು ಕಡಿತಗೊಳಿಸುವಂತಿಲ್ಲ. ಅವರ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದು ಕಡಿತಗೊಳಿಸಬಹುದು. ಅವರಿಗೆ ಗೊತ್ತಿಲ್ಲದೆ ಮಾಡಿದರೆ ತಪ್ಪು. ಸರ್ಕಾರದ ಆದೇಶ ಇದೆ. ಯಾರೂ ಮೀರುವಂತಿಲ್ಲ’ ಎಂದರು.

ಯುವನಿಧಿ’ ಮಾಹಿತಿ ಸಿಗುತ್ತಿಲ್ಲ

‘ಯುವನಿಧಿ’ ಕುರಿತು ತಾಲ್ಲೂಕು ಕೇಂದ್ರಗಳಲ್ಲಿ ಮಾಹಿತಿ ಕೊಡುವ ಅಧಿಕಾರಿಗಳೇ ಇಲ್ಲ. ಏನಾದರೂ ಮಾಹಿತಿ ಪಡೆಯಬೇಕಾದರೆ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಿದೆ. ಇದರಿಂದ ಡಿಪ್ಲೊಮಾ ಹಾಗೂ ಪದವೀಧರರಿಗೆ ಸಮಸ್ಯೆಯಾಗುತ್ತಿದೆ. ಕಳೆದ ಕೆಲವು ತಿಂಗಳಿಂದ ಆನ್‌ಲೈನ್‌ನಲ್ಲಿ ಅರ್ಜಿ ತುಂಬಲು ಸಾಧ್ಯವಾಗುತ್ತಿಲ್ಲ. ಪ್ರತಿ ತಾಲ್ಲೂಕಿಗೆ ಒಬ್ಬ ಅಧಿಕಾರಿಯನ್ನು ನೇಮಿಸಬೇಕು ಎಂದು ಗ್ಯಾರಂಟಿ ಸಮಿತಿಯ ಲತಾ ಹಾರಕೂಡ ಸಭೆಯಲ್ಲಿ ಆಗ್ರಹಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಎಲ್ಲ ತಾಲ್ಲೂಕುಗಳಲ್ಲಿ ಯುವನಿಧಿಗೆ ಒಬ್ಬ ಅಧಿಕಾರಿಯನ್ನು ನೇಮಿಸಬೇಕು. ತಾಂತ್ರಿಕ ಸಮಸ್ಯೆ ಬಗೆಹರಿಸಬೇಕು. ‘ಶಕ್ತಿ’ ಯೋಜನೆಯಡಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸಬೇಕು. ವಿದ್ಯಾರ್ಥಿಗಳಿಗೆ ತೊಂದರೆ ಆಗದ ರೀತಿಯಲ್ಲಿ ಬಸ್‌ ಸೌಕರ್ಯ ಕಲ್ಪಿಸಬೇಕೆಂದು ಸೂಚಿಸಿದರು.

ಭತ್ಯೆ ಕಚೇರಿಗೆ ಆಗ್ರಹ

ಗ್ಯಾರಂಟಿ ಅನುಷ್ಠಾನ ಸಮಿತಿಯ ಮೊದಲ ಸಭೆಯಲ್ಲಿಯೇ ಕೆಲ ಸದಸ್ಯರು ಭತ್ಯೆ ಪ್ರಯಾಣಕ್ಕೆ ವಾಹನ ಸೌಲಭ್ಯ ಸಭೆ ನಡೆಸಲು ಕಚೇರಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಕೇಂದ್ರದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ತಾಲ್ಲೂಕು ಕೇಂದ್ರದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಮಿತಿಯಲ್ಲಿರುತ್ತಾರೆ. ಅವರ ನೇತೃತ್ವದಲ್ಲಿ ಸಭೆ ನಡೆಸಬೇಕು. ಅವರೇ ಜಾಗದ ವ್ಯವಸ್ಥೆ ಮಾಡುತ್ತಾರೆ. ಭತ್ಯೆಗೆ ಸಂಬಂಧಿಸಿದಂತೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷರ ಜನ್ಮದಿನ

ಬೀದರ್‌ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ ಅವರ ಜನ್ಮದಿನವನ್ನು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಚಿಮಕೋಡೆ ಅವರಿಗೆ ಶಾಲು ಹೊದಿಸಿ ಹೂಗುಚ್ಛ ಕೊಟ್ಟು ಅಭಿನಂದಿಸಿದರು. ಆನಂತರ ಪ್ರಾಧಿಕಾರದ ಸದಸ್ಯರು ಕಾಂಗ್ರೆಸ್‌ ಮುಖಂಡರು ಅವರಿಗೆ ಹೂಗುಚ್ಛ ಕೊಟ್ಟು ಅಭಿನಂದನೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT