ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತಿಂಗಳಿಗೊಮ್ಮೆ ಹಾಸ್ಟೆಲ್ ವಾಸ್ತವ್ಯ ಮಾಡಿ: ಅಧಿಕಾರಿಗಳಿಗೆ ಮಕ್ಕಳ ಆಯೋಗ ಸಲಹೆ

Published 27 ಜೂನ್ 2024, 16:16 IST
Last Updated 27 ಜೂನ್ 2024, 16:16 IST
ಅಕ್ಷರ ಗಾತ್ರ

ಬೀದರ್: ಹಾಸ್ಟೆಲ್ ಮಕ್ಕಳ ಸಮಸ್ಯೆ ಕೊನೆಗೊಳ್ಳಬೇಕಾದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಿಂಗಳಿಗೆ ಒಂದು ಸಲವಾದರೂ ಹಾಸ್ಟೆಲ್‌ನಲ್ಲಿ ವಾಸ್ತವ್ಯ ಮಾಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಹಾಗೂ ಸದಸ್ಯ ಶಶಿಧರ ಕೋಸಂಬೆ ಸಲಹೆ ಮಾಡಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳ ವಿಚಾರಣೆ ಸಭೆಯಲ್ಲಿ ಮಾತನಾಡಿ ಹಾಸ್ಟೆಲ್‌ಗಳ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ಕೆ. ನಾಗಣ್ಣಗೌಡ ಮಾತನಾಡಿ, ಹಾಸ್ಟೆಲ್ ಕಟ್ಟಡದ ಮೇಲೆ ಸೋಲಾರ್ ಫಲಕ ಕಾಣಿಸುತ್ತವೆ. ಆದರೆ, ಬೆಳಿಗ್ಗೆ ಸ್ನಾನಕ್ಕೆ ಬಿಸಿ ನೀರು ಸಿಗಲ್ಲ. ಸ್ನಾನ ಮಾಡದ ಕಾರಣಕ್ಕೆ ಎಷ್ಟೋ ಮಕ್ಕಳಲ್ಲಿ ಚರ್ಮ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಕೆಲ ಹಾಸ್ಟೆಲ್‌ಗಳಲ್ಲಿ ಸ್ಥಳೀಯ ಮಕ್ಕಳಿಗೆ ಪ್ರವೇಶ ಕೊಡಲಾಗುತ್ತದೆ. ಈ ಮಕ್ಕಳು ಹಾಸ್ಟೆಲ್‌ನಲ್ಲಿ ಊಟ, ತಿಂಡಿ ಮಾಡುತ್ತಾರೆ. ಆದರೆ, ವಾಸ್ತವ್ಯಕ್ಕೆ ಮನೆಗೆ ಮರಳುತ್ತಾರೆ. ಹಾಸ್ಟೆಲ್‌ನಲ್ಲಿ ಹಾಜರಾತಿ, ಮನೆಯಲ್ಲಿ ವಸತಿ ಎಂಬಂತಾಗಿದೆ. ಹಾಸ್ಟೆಲ್ ಸಿಬ್ಬಂದಿಯ ಈ ನಿರ್ಲಕ್ಷ್ಯದಿಂದ ಸರ್ಕಾರದ ಮೇಲೆ ಆರ್ಥಿಕ ಹೊರೆ ಬೀಳುತ್ತಿದೆ. ಸ್ಥಳೀಯರಿಗೆ ಹಾಸ್ಟೆಲ್‌ನಲ್ಲಿ ಪ್ರವೇಶ ಕೊಡಬಾರದು ಎಂಬ ನಿಯಮವನ್ನು ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಹಾಸ್ಟೆಲ್ ಕೋಣೆಯಲ್ಲಿ ಸಮರ್ಪಕ ಬೆಳಕು ಇರುವುದಿಲ್ಲ. ಫ್ಯಾನುಗಳೂ ಕೆಲಸ ಮಾಡುವುದಿಲ್ಲ. ಅಲ್ಲಿನ ಮಕ್ಕಳು ಅಭ್ಯಾಸ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳು, ಸಚಿವರು ಗ್ರಾಮ ವಾಸ್ತವ್ಯ ಮಾಡುವ ರೀತಿಯಲ್ಲಿ ಅಧಿಕಾರಿಗಳು ಹಾಸ್ಟೆಲ್‌ನಲ್ಲಿ ವಾಸ್ತವ್ಯ ಮಾಡಬೇಕು. ಇದರಿಂದ ಹಾಸ್ಟೆಲ್ ಮಕ್ಕಳನ್ನು ಕಾಡುತ್ತಿರುವ ಸಮಸ್ಯೆಗಳಾದರೂ ಕೊನೆಗೊಳ್ಳಬಹುದು ಎಂದು ಹೇಳಿದರು.

ಶಾಲೆಗಳಿಗೆ ಭೇಟಿ ಕೊಡಿ:

‘ಖಾಸಗಿ ಶಾಲಾ ವಾಹನಗಳು ಸುಸ್ಥಿತಿಯಲ್ಲಿರುವುದನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು. ಬಸ್ ಇರುವ ಎಲ್ಲ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಆಯೋಗದ ಸದಸ್ಯ ಶಶಿಧರ ಕೋಸಂಬೆ ಸೂಚಿಸಿದರು.

ಶಾಲಾ ಬಸ್‌ನಲ್ಲಿ ‘ಆಯಾ’ ಸಹ ಇರಬೇಕು ಎಂಬ ನಿಯಮ ಇದೆ. ಇದು ಪಾಲನೆಯಾಗಬೇಕು. ಸಾರಿಗೆ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಲೆಯ ಆರಂಭದ ದಿನವೇ ಪಠ್ಯ ಪುಸ್ತಕ ಪೂರೈಕೆಯಾಗಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ವಿಷಯದಲ್ಲಿ ಕಾಳಜಿ ವಹಿಸಬೇಕು ಎಂದರು.

ಕಪಲಾಪುರ ಗ್ರಾಮದ ವಸತಿ ಶಾಲೆಗೆ ಭೇಟಿ ನೀಡಿದಾಗ ಹಲವು ಸಮಸ್ಯೆ, ಕೊರತೆಗಳು ಕಂಡು ಬಂದವು. ಹೆಚ್ಚಿನ ಪ್ರಕರಣಗಳಲ್ಲಿ ಆಯೋಗದ ಸೂಚನೆಯ ನಂತರವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಬೇಕು. ಮಕ್ಕಳ ಅಪೌಷ್ಟಿಕತೆ, ಶಾಲೆ ಬಿಡುವ ಮಕ್ಕಳ ಸಮಸ್ಯೆ, ಬಾಲ ಕಾರ್ಮಿಕರ ಸಮಸ್ಯೆ, ಬಾಲ್ಯ ವಿವಾಹ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಶಿಕ್ಷಣ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.

‘ಅಧಿಕಾರಿಗಳ ಜವಾಬ್ದಾರಿ‘
‘ಮಕ್ಕಳ ವಿಷಯದಲ್ಲಿ ಪಾಲಕರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ನೆಪ ಹೇಳುವಂತಿಲ್ಲ. ಮಕ್ಕಳ ಹಕ್ಕುಗಳ ರಕ್ಷಣೆ ನಿಮ್ಮ ಜವಾಬ್ದಾರಿ’ ಎಂದು ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಅಧಿಕಾರಿಗಳಿಗೆ ತಿಳಿಸಿದರು. ಮಕ್ಕಳ ವಿಷಯದಲ್ಲಿ ಪಾಲಕರ ಜವಾಬ್ದಾರಿ ಹೆಚ್ಚು. ಕೆಲ ಪ್ರಕರಣಗಳಲ್ಲಿ ಪಾಲಕರೇ ನಿರ್ಲಕ್ಷ್ಯ ತೋರಿದ್ದಾರೆ. ಅಧಿಕಾರಿಗಳಾದರೂ ಏನು ಮಾಡಬೇಕು ಎಂಬ ಅಧಿಕಾರಿಯೊಬ್ಬರ ಮಾತಿಗೆ ಬೇಸರ ವ್ಯಕ್ತಪಡಿಸಿದ ಕೋಸಂಬೆ ಪಾಲನೆ ಪೋಷಣೆ ಬಯಸುವ ಮಕ್ಕಳಿಗೆ ನೆರವಾಗುವುದು ಅಧಿಕಾರಿಗಳ ಕರ್ತವ್ಯ. ಮಕ್ಕಳ ಹಕ್ಕುಗಳ ರಕ್ಷಣೆ ಕುರಿತಾದ ವಿಶ್ವಸಂಸ್ಥೆಯ ಒಡಂಬಡಿಕೆಗೆ ಭಾರತ ಸಹಿ ಮಾಡಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಸಂಬಂಧಿಸಿದ ಅಧಿಕಾರಿಗಳ ಜವಾಬ್ದಾರಿ. ಪಾಲಕರ ನಿರ್ಲಕ್ಷ್ಯದ ನೆಪ ಹೇಳುವಂತಿಲ್ಲ ಎಂದರು.
‘ತಾಯಂದಿರಾಗುತ್ತಿರುವ ಅಪ್ರಾಪ್ತೆಯರು’
‘ಸಾಮಾಜಿಕ ಜಾಲತಾಣಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತಿವೆ. ಅಪ್ರಾಪ್ತ ವಯಸ್ಸಿನ ಬಾಲಕಿಯರು ಗರ್ಭಿಣಿಯಾದ ಘಟನೆಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಭಾಗೀದಾರ ಇಲಾಖೆಗಳ ಜವಾಬ್ದಾರಿ ಹೆಚ್ಚಿದೆ. ಶಿಕ್ಷಣ ಪೊಲೀಸ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಸಮನ್ವಯ ಸಮಿತಿ ರಚಿಸಿಕೊಂಡು ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು’ ಎಂದು ಆಯೋಗದ ಅಧ್ಯಕ್ಷ ಕೆ. ನಾಗಣ್ಣಗೌಡ ಸೂಚಿಸಿದರು.
‘ಜಿಲ್ಲೆಯಲ್ಲಿ 50 ಮಕ್ಕಳು ಕಾಣೆ’
‘ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 50 ಮಕ್ಕಳು ಕಾಣೆಯಾಗಿದ್ದಾರೆ. 42 ಪ್ರಕರಣಗಳನ್ನು ಭೇದಿಸಲಾಗಿದ್ದು ಮಿಕ್ಕುಳಿದ ಎಂಟು ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ. ನಾಲ್ಕು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದ್ದಾರೆ. ನಗರದಲ್ಲಿ ಬುಧವಾರ ನಡೆದ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತ ಭಾಗೀದಾರ ಇಲಾಖೆಗಳ ಸಭೆಯಲ್ಲಿ ಮಕ್ಕಳ ಕಾಣೆಯಾದ ಪ್ರಕರಣಗಳ ಕುರಿತು ಚರ್ಚೆ ನಡೆದಿತ್ತು. 28 ಮಕ್ಕಳ ಕಾಣೆ ಪ್ರಕರಣಗಳು ಪತ್ತೆಯಾಗಿರುವುದಿಲ್ಲ ಎಂದು ಚರ್ಚೆ ನಡೆದಿರುವುದಕ್ಕೆ ಗುರುವಾರ ಈ ಸ್ಪಷ್ಟನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT