ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು | ಪ್ರೌಢಶಾಲಾ ಮಕ್ಕಳಿಗೆ ಮತದಾನ ಭಾಗ್ಯ!

ಶಾಲಾ ಸಂಸತ್ ರಚನೆ, ಮಕ್ಕಳಿಗೆ ಚುನಾವಣಾ ಪ್ರಜ್ಞೆ, ನಾಯಕತ್ವ ತರಬೇತಿ
ನಾ.ಮಂಜುನಾಥಸ್ವಾಮಿ
Published : 6 ಜುಲೈ 2024, 7:16 IST
Last Updated : 6 ಜುಲೈ 2024, 7:16 IST
ಫಾಲೋ ಮಾಡಿ
Comments

ಯಳಂದೂರು: ತಾಲ್ಲೂಕಿನ ಎಲ್ಲಾ ಫ್ರೌಢಶಾಲೆಗಳು ಚುನಾವಣಾ ಕಣವಾಗಿ ಬದಲಾಗಿವೆ. ಸ್ಪರ್ಧಿಗಳು ಸ್ವಂತ ಪ್ರಣಾಳಿಕೆ ಬಿಡುಗಡೆ ಮಾಡಿ ಸಹಪಾಠಿಗಳ ಮತವನ್ನು ಸೆಳೆಯುವ ಪ್ರಚಾರದಲ್ಲಿ ತೊಡಗಿದ್ದಾರೆ. ಎಳೆಯ ವಯಸ್ಸಿನಲ್ಲಿ ದೇಶದ ರಾಜಕೀಯ ವಿದ್ಯಮಾನದ ಸ್ವರೂಪ ಅರ್ಥ ಮಾಡಿಕೊಂಡು, ಪ್ರಜಾಸತಾತ್ಮಕ ವ್ಯವಸ್ಥೆಯ ಭಾಗೀದಾರರಾಗಲು ಮುನ್ನುಗ್ಗುತ್ತಿದ್ದಾರೆ. ನಾಮಪತ್ರ ಸಲ್ಲಿಸಿ, ಗೆಲುವಿನ ಮುನ್ನುಡಿ ಬರೆಯಲು ಸಿದ್ಧತೆ ಆರಂಭಿಸಿದ್ದಾರೆ.

ಚುನಾವಣಾ ಆಯೋಗ ಚುನಾವಣೆ ನಡೆಸುವ ಮಾದರಿಯಲ್ಲಿಯೇ ಪ್ರತಿ ಶಾಲೆಗಳು ಚುನಾವಣಾ ಪ್ರಕ್ರಿಯೆಗಳನ್ನು ಆರಂಭಿಸಬೇಕು. ವಿದ್ಯಾರ್ಥಿ ನಾಯಕರ ಆಯ್ಕೆ ನಿಟ್ಟಿನಲ್ಲಿ ಪ್ರಕಟಣೆ ಹೊರಡಿಸಬೇಕು. ಸಚಿವರ ನೇಮಕ, ಮೀಸಲಾತಿ ವಿವರ, ಮತದಾನ ದಿನ, ನೋಟ ಮಾಹಿತಿ ನೀಡಿ ಮತದಾನಕ್ಕೆ ಸಜ್ಜುಗೊಳಿಸಬೇಕು. ಇವಿಎಂ ಯಂತ್ರ ಇಲ್ಲವೇ ಮತ ಪೆಟ್ಟಿಗೆ ಬಳಸಿ ಮತ ಚಲಾಯಿಸಲು ವ್ಯವಸ್ಥೆ ಮಾಡಬೇಕು. ನಂತರ ಮತ ಪ್ರಚಾರ, ಮತದಾನ, ಫಲಿತಾಂಶ ಘೋಷಣೆಗಳನ್ನು ನಿಯಮ ಬದ್ಧವಾಗಿ ನಡೆಸಬೇಕು. ಆ ಮೂಲಕ ಮಕ್ಕಳಿಗೆ ಮತದಾನದ ನೈಜ ಅರಿವನ್ನು ಮೂಡಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಚುನಾವಣಾ ತಯಾರಿ ನಡೆಯುತ್ತಿವೆ.

ಮುಖ್ಯ ಶಿಕ್ಷಕ ಗುರುಮೂರ್ತಿ ಮಾತನಾಡಿ, ‘ಇಲಾಖೆ ನಿಯಮದಂತೆ ಸಂಸತ್ ರಚನೆ ನಡೆಯಲಿದೆ. ಸಂವಿಧಾನದ ಆಶಯದಂತೆ ಚುನಾವಣೆ ಹೇಗೆ ಮತ್ತು ಏಕೆ ನಡೆಯುತ್ತವೆ. ಆಯ್ಕೆಯಾದ ಸದಸ್ಯರು ಮಾಡಬೇಕಾದ ಕರ್ತವ್ಯ, ಹಕ್ಕು, ಬಾಧ್ಯತೆಗಳ ಬಗ್ಗೆ ಶಾಲೆಯಲ್ಲಿ ಜಾಗೃತಿ ಮೂಡಿಸಲಾಗುತ್ತದೆ. 18 ಸಂಪುಟ ದರ್ಜೆಯ ಮಂತ್ರಿಗಳನ್ನು ಆಯ್ಕೆ ಮಾಡಲಾಗುತ್ತದೆ’ ಎಂದರು.

ಎರಡು ದಿನಗಳಿಂದ ಚುನಾವಣೆ ಪೂರ್ವಭಾವಿ ಸಭೆಗಳು ನಡೆದವು. ಶಿಕ್ಷಕರ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಬೆಳವಣಿಗೆ ಮತ್ತು ಮಕ್ಕಳು ತಯಾರಿಸಿಕೊಂಡ ಅಜೆಂಡಾವನ್ನು ಮನವರಿಕೆ ಮಾಡಿಕೊಟ್ಟು ಮತ ನೀಡುವಂತೆ ಮಕ್ಕಳು ಸ್ನೇಹಿತರನ್ನು ಕೇಳಿಕೊಂಡರು. ಶಾಲಾ ಆವರಣದಲ್ಲಿ ಸರತಿ ಸಾಲಿನಲ್ಲಿ ನಿಂತು ಎಲೆಕ್ಟ್ರಾನಿಕ್ ಯಂತ್ರದ ಮೂಲಕ ಮತ ಚಲಾಯಿಯಿಸಿದರು ಎಂದು ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಶಾಲಿನಿ ಹೇಳಿದರು.

ಬಾಲಕ-ಬಾಲಕಿಯರು ತಮ್ಮ ಸ್ನೇಹಿತ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಮತಯಾಚಿಸಿದರು. ಹಣ ಸೇರಿದಂತೆ ಯಾವುದೇ ಆಮಿಷಕ್ಕೆ ಒಳಗಾಗುವುದು ಅಪರಾಧ ಎಂಬುದನ್ನು ತಿಳಿಸಿಕೊಟ್ಟರು. ಮಕ್ಕಳು ಸಡಗರ ಸಂಭ್ರಮದ ನಡುವೆ ಮತ ಎಣಿಕೆ ಕಾರ್ಯದಲ್ಲಿ ಭಾಗಿಯಾದರು. ವಿಜೇತರನ್ನು ಅಭಿನಂದಿಸಿದರು. ಮುಖ್ಯಮಂತ್ರಿ, ಶಿಕ್ಷಣ, ಸ್ವಚ್ಛತೆ, ನೀರಾವರಿ ಮಂತ್ರಿಗಳು ಆಯ್ಕೆಯಾದ ವಿವಿಧ ಮಜಲುಗಳನ್ನು ವೀಕ್ಷಿಸಿದರು.

‘ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ತಂದೆ-ತಾಯಿ, ನೆರೆಹೊರೆಯವರಿಗೆ ಮತದಾನ ನಮ್ಮ ಹಕ್ಕು ಎಂಬ ಬಗ್ಗೆ ಮಕ್ಕಳು ತಿಳಿಸಿಕೊಡಲಿದ್ದಾರೆ. ಮತದಾನ ನಿರ್ಲಕ್ಷಿಸದಂತೆ, ಇಷ್ಟವಿಲ್ಲದ ಸಂದರ್ಭದಲ್ಲಿ ‘ನೋಟ’ ಚಲಾಯಿಸುವ ಬಗ್ಗೆ ಅರಿವು ಮೂಡಿಸಲಿದ್ದಾರೆ. ಪ್ರಜಾತಂತ್ರದ ಹಬ್ಬ 5 ವರ್ಷಕ್ಕೆ ಒಮ್ಮೆ ಬರುತ್ತದೆ. ಮತದಾನ ಮಾಡಿ ಉತ್ತಮ ಪ್ರತಿನಿಧಿ ಆಯ್ಕೆ ಮಾಡಬಹುದು’ ಎಂಬ ವಿಷಯದ ಬಗ್ಗೆ ತಿಳಿಸಲು ಶಾಲಾ ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ ಎಂದು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ಹಿಸಿದ ಶಿಕ್ಷಕ ನಂಜುಂಡಸ್ವಾಮಿ ಹೇಳಿದರು.

ಯಳಂದೂರು ತಾಲ್ಲೂಕಿನ ಸರ್ಕಾರಿ ಆದರ್ಶಾ ವಿದ್ಯಾಲಯದಲ್ಲಿ ನಡೆದ ಶಾಲಾ ಸಂಸತ್ ಚುನಾವಣಾ ಪ್ರಕ್ರಿಯೆಯನ್ನು ಬಿಇಒ ಕೆ.ಕಾಂತರಾಜು,  ಜಿಲ್ಲಾ ಉಪ ಸಮನ್ವಯಾಧಿಕಾರಿ ನಾಗೇಂದ್ರ ಹಾಗೂ ಗುರುಮೂರ್ತಿ ವೀಕ್ಷಿಸಿದರು.

ಇಲಾಖೆ ನಿಯಮದಂತೆ ಸಂಸತ್ ರಚನೆ! ಶಿಕ್ಷಕರ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಬೆಳವಣಿಗೆ

ಶಾಲಾ ಆಡಳಿತದ ಭಾಗ: ಬಿಇಒ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರತಿ ವರ್ಷ ಶಾಲಾ ಸಂಸತ್ ಚುನಾವಣೆ ನಡೆಸುವಂತೆ ಸುತ್ತೋಲೆ ಹೊರಡಿಸುತ್ತದೆ. ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ಪ್ರಜಾಪ್ರಭುತ್ವ ಸರ್ಕಾರ ರಚನೆ ಪ್ರಕ್ರಿಯೆಗೆ ಮುಂದಾಗುತ್ತಾರೆ. 18 ವರ್ಷ ಪೂರೈಸುವ ಪ್ರಜೆಗಳು ಮತ ಚಲಾಯಿಸಲು ಮುಕ್ತ ಅವಕಾಶ ನೀಡಲಾಗುತ್ತದೆ. ನಂತರ ಪ್ರಥಮ ಪ್ರಾಶಸ್ತ್ಯದಲ್ಲಿ ಆಯ್ಕೆಯಾದವರು ಮಂತ್ರಿ ಮಂಡಲ ರಚಿಸುತ್ತಾರೆ. ಇವರಿಗೆ ಖಾತೆ ಹಂಚಿಕೆ  ಮಾಡಲಾಗುತ್ತದೆ. ಅವರು ಶಾಲಾ ಆಡಳಿತ ಮತ್ತು ಅಭಿವೃದ್ಧಿಯ ಭಾಗವಾಗಿ ಶಿಕ್ಷಕ ಪೋಷಕರ ಕೊಂಡಿಯಾಗಿ ಶ್ರಮಿಸುತ್ತಾರೆ ಎಂದು ಬಿಇಒ ಕೆ.ಕಾಂತರಾಜ್  ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT