ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಶುಕ್ರವಾರ ರಾತ್ರಿ ನಡೆದ ಚಿನ್ನದ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತಸ್ತೋಮ
ಚಾಮರಾಜನಗರದ ಗಾಳಿಪುರದ ಮಹದೇವು ಮತ್ತು ಕುಟುಂಬಸ್ಥರು ಮಲೆ ಮಹದೇಶ್ವರ ಸ್ವಾಮಿ ದೇವಾಲಯಕ್ಕೆ 5.967 ಕೆಜಿ ತೂಕದ ಬೆಳ್ಳಿಯ ಉತ್ಸವ ಮೂರ್ತಿಯನ್ನು ಕೊಡುಗೆಯಾಗಿ ನೀಡಿದರು
ಚಾಮರಾಜನಗರ ತಾಲ್ಲೂಕಿನ ಹೆಗ್ಗೋಠಾರ ಗ್ರಾಮಸ್ಥರು ಕಪಿಲಾ ನದಿಯಿಂದ ನೀರನ್ನು ತಲೆಯಲ್ಲಿ ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಗ್ರಾಮದತ್ತ ಸಾಗಿದರು
40 ಕಿ.ಮೀ. ದೂರದಿಂದ ಕಾಲ್ನಡಿಗೆಯಲ್ಲಿ ನೀರು ತಂದರು...
ಚಾಮರಾಜನಗರ: ಶಿವರಾತ್ರಿ ದಿನದಂದು ತಾಲ್ಲೂಕಿನ ಹೆಗ್ಗೋಠಾರದ ಆರು ಕುಟುಂಬದವರು ಗ್ರಾಮದ ಸಿದ್ದರಾಮೇಶ್ವರ ದೇವಾಲಯದಲ್ಲಿ ಸ್ವಾಮಿಯ ಅಭಿಷೇಕಕ್ಕಾಗಿ 40 ಕಿ.ಮೀ ದೂರದಿಂದ ಕಾಲ್ನಡಿಗೆಯಲ್ಲಿ ನೀರು ತರುವ ವಿಶಿಷ್ಟ ಆಚರಣೆ ಶುಕ್ರವಾರ ನಡೆಯಿತು. ಕಪಿಲಾ ನದಿಯಿಂದ ತಲೆ ಮೇಲೆ ಹೊತ್ತು ಬರಿಗಾಲಲ್ಲಿ ನಡೆದುಕೊಂಡು ಬಂದು ಶಿವನಿಗೆ ಅಭಿಷೇಕ ಮಾಡಲಾಗುತ್ತದೆ. ಈ ಬಾರಿ ರಾಜು ಕುಮಾರಸ್ವಾಮಿ ಕುಮಾರ ಮಹದೇವಸ್ವಾಮಿ ಮತ್ತು ಬೇಡರಪುರದ ಮತ್ತೊಬ್ಬರು ಶುಕ್ರವಾರ ಮುಂಜಾನೆಯೇ ಹೊರಟು ನಂಜನಗೂಡು ತಾಲ್ಲೂಕಿನ ನಗರ್ಲೆ ಬಳಿಯ ಕಪಿಲಾ ನದಿಯಿಂದ ನೀರನ್ನು ಹೊತ್ತು ಬರಿಗಾಲಿನಲ್ಲಿ 40 ಕಿ.ಮೀ ನಡೆದುಕೊಂಡು ಬಂದು ಶಿವನಿಗೆ ಅಭಿಷೇಕ ಮಾಡಿದರು. ಗ್ರಾಮದಲ್ಲಿ ಸುಮಾರು ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾಗಿರುವ ಸಿದ್ದರಾಮೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ಶಿವರಾತ್ರಿಯಂದು ಈ ವಿಶೇಷ ಆಚರಣೆ ನಡೆಯುತ್ತದೆ. ಕಪಿಲಾ ನದಿಯಿಂದ ನೀರು ತಂದು ಅಭಿಷೇಕ ನೆರವೇರಿಸುವ ಪದ್ಧತಿ ನೂರಾರು ವರ್ಷಗಳಿಂದ ಚಾಲ್ತಿಯಲ್ಲಿದೆ. ಈಗಲೂ ಗ್ರಾಮಸ್ಥರು ಅತ್ಯಂತ ಶ್ರದ್ಧೆ ಭಕ್ತಿಯಿಂದ ಈ ಪದ್ಧತಿಯನ್ನು ಪಾಲಿಸುತ್ತಿದ್ದಾರೆ.