ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಆಯುಧಪೂಜೆ: ಹೂವು, ಕುಂಬಳಕ್ಕೆ ಬೇಡಿಕೆ

ತರಕಾರಿ ಬೆಲೆ ಸ್ಥಿರ: ಬಾಳೆಹಣ್ಣು, ತೆಂಗು, ಕೋಳಿ ದರ ಹೆಚ್ಚಳ
Published : 10 ಅಕ್ಟೋಬರ್ 2024, 13:27 IST
Last Updated : 10 ಅಕ್ಟೋಬರ್ 2024, 13:27 IST
ಫಾಲೋ ಮಾಡಿ
Comments

ಯಳಂದೂರು: ಆಯುಧಪೂಜೆ, ಗ್ರಾಮ ದೇವತೆ ಹಬ್ಬಗಳಿಗಾಗಿ ಕಾಯಿಪಲ್ಲೆ, ಬೂದುಗುಂಬಳಕಾಯಿ ಹಾಗೂ ಹೂವು ಹಾರಗಳಿಗೆ ಬೇಡಿಕೆ ಹೆಚ್ಚಾಗಿದೆ. ಏಲಕ್ಕಿ ಬಾಳೆ, ತೆಂಗು ಹಾಗೂ ಕೋಳಿ ಧಾರಣೆ ಏರಿಕೆಯಾಗಿದೆ. ತುಂತುರು ಮಳೆ ನಡುವೆಯೂ ವ್ಯಾಪಾರಿಗಳು ರಸ್ತೆ ಬದಿ  ಗ್ರಾಹಕರ ನಿರೀಕ್ಷೆಯಲ್ಲಿ ಬೀಡು ಬಿಟ್ಟಿದ್ದಾರೆ.

ತಾಲ್ಲೂಕಿನಲ್ಲಿ ನವರಾತ್ರಿ ಕೊನೆಯ ದಿನ ಆಯುಧಪೂಜೆ ಕಳೆಗಟ್ಟುತ್ತದೆ. ಗ್ರಾಮ ಮತ್ತು ಪಟ್ಟಣ ಎನ್ನದೆ ಪ್ರತಿ ಮನೆ-ಮನಗಳಲ್ಲೂ ಭಕ್ತಿಯಿಂದ ಪೂಜಿಸುವ ಪರಂಪರೆ ಅನಾಚೂನವಾಗಿ ನಡೆದುಕೊಂಡು ಬಂದಿದೆ. ಹೊಲ ಗದ್ದೆಗಳಲ್ಲಿ ಬಳಸುವ ಉಳುಮೆ ಸಾಮಗ್ರಿ, ಟ್ರ್ಯಾಕ್ಟರ್, ಟಿಲ್ಲರ್, ಗೃಹೋಪಯೋಗಿ ವಸ್ತುಗಳು, ಪಂಪ್‌ಸೆಟ್, ಆಲೆಮನೆ, ಸ್ವಂತ ವಾಹನಗಳಿಗೆ ಪೂಜೆ ಸಲ್ಲಿಸುತ್ತಾರೆ.

ಪಟ್ಟಣಗಳಲ್ಲಿ ತಾಲ್ಲೂಕು ಕಚೇರಿ, ಸೆಸ್ಕ್ ಸಿಬ್ಬಂದಿ, ಹೋಟೆಲ್, ಅಂಗಡಿಗಳಲ್ಲೂ ಲಕ್ಷ್ಮಿ ಪೂಜೆ ಸಿದ್ಧತೆ ನಡೆಯಲಿದೆ. ಹಬ್ಬದ ಹಿಂದಿನ ದಿನ ಬಣ್ಣದ ಪೇಪರ್ ಹಾಗೂ ಬ್ರಿಂಗಗಳಿಂದ ಅಲಂಕರಿಸಲಾಗುತ್ತದೆ. ನಂತರ ಪೂಜೆ ನೆರವೇರಿಸುತ್ತಾರೆ. ದೇವರ ಪಟಗಳನ್ನು ಹೂವಿನ ಹಾರಗಳಿಂದ ಸಿಂಗರಿಸಿ, ಬೂದುಕುಂಬಳ ಕಾಯಿಗೆ ಅರಸಿನ, ಕುಂಕುಮ ಲೇಪಿಸಿ, ಕರ್ಪೂರ ಬೆಳಗಿ ವ್ಯಾಪಾರದ ಸ್ಥಳಗಳಲ್ಲಿ ಕಾಯಿ ಒಡೆಯುತ್ತಾರೆ.  ಸಿಹಿ ವಿತರಿಸಿ ಸಂಭ್ರಮಿಸುವ ವಾಡಿಕೆ ಇನ್ನೂ ಉಳಿದಿದೆ.

ಮಾರುಕಟ್ಟೆಯಲ್ಲಿ ಕುಂಬಳಕಾಯಿ 1 ಕೆ.ಜಿ.ಗೆ ₹ 30 ಇದೆ. ಬಿಡಿ ಚೆಂಡು ಹೂವು ಕೆ.ಜಿ.ಗೆ ₹70 ಹಾಗೂ ಒಂದು ಮಾರು ಹೂವಿಗೆ ₹40 ರಿಂದ ₹60ರ ವರೆಗೆ ಬೆಲೆ ಇದೆ. ಈ ಬಾರಿ ತೆಂಗು 1ಕ್ಕೆ ₹25 ಧಾರಣೆ ಇದ್ದರೆ, ನಿಂಬೆಹಣ್ಣು ದರವೂ ಹೆಚ್ಚಿದೆ. ವಾಹನಗಳಿಗೆ ರಕ್ತ ತರ್ಪಣ ನೀಡಲು ನಾಟಿ ಕೋಳಿ ಬಳಸಲಾಗುತ್ತದೆ. 1ಕ್ಕೆ ದರ ₹400 ರಿಂದ ₹600ರ ತನಕ ಮಾರಾಟವಾಗುತ್ತದೆ.

ಬೂದ ಕುಂಬಳ ಹಾಗೂ ಹೂವು ಹೊರ ಜಿಲ್ಲೆಗಳಿಂದ ತರಬೇಕು. ಹಬ್ಬದ ಸಂದರ್ಭ ಮಾತ್ರ ಇವುಗಳಿಗೆ ಬೇಡಿಕೆ ಇರುತ್ತದೆ. ಕುಂಬಳದ ಜೊತೆ ಮಾವಿನ ಚಿಗುರು, ಬಾಳೆ ಸಮೇತ ಮಾರಾಟ ಮಾಡುತ್ತೇವೆ. ಸ್ಥಳೀಯರು, ಬೇರೆ ರಾಜ್ಯಗಳ ಗ್ರಾಹಕರು ಕುಂಬಳ ಕೊಳ್ಳುತ್ತಾರೆ ಎಂದು ಪಟ್ಟಣದ ವ್ಯಾಪಾರಿ ಮಹದೇವ ಹೇಳಿದರು.

ಟೊಮೆಟೊ, ಬೆಳ್ಳುಳ್ಳಿ ಹೊರತುಪಡಿಸಿ ತರಕಾರಿ ಬೆಲೆ ಸಾಮಾನ್ಯವಾಗಿದೆ. ಸಿಹಿ ತಿಂಡಿಗಳಿಗೆ ಬೆಡಿಕೆಯೂ ಹೆಚ್ಚಿದೆ. ಜನರು ಹಬ್ಬದ ಖರೀದಿಯಲ್ಲಿ ತೊಡಗಿದ್ದರಿಂದ ದೊಡ್ಡ ಅಂಗಡಿ ಬೀದಿಗಳಲ್ಲಿ ಜನ ಜಂಗುಳಿ ಹೆಚ್ಚಾಗಿತ್ತು. ವಾಹನಗಳ ಅಬ್ಬರವೂ ಕಂಡುಬಂತು.

 ಪೂಜೆಗೆ ಸಿದ್ಧತೆ: ಪಟ್ಟಣದಲ್ಲಿ ವಾಹನ ಸ್ವಚ್ಛಗೊಳಿಸಲು ಬೈಕ್ ಸರ್ವಿಸ್‌ ಸೆಂಟರ್‌ಗಳ ಮುಂದೆ ಸವಾರರು ಕಾಯುತ್ತಿದ್ದ ದೃಶ್ಯ ಕಂಡುಬಂತು. ಚಾಲಕರು ಹೊಳೆ, ಕಾಲುವೆಗಳಲ್ಲಿ ಟ್ರ್ಯಾಕ್ಟರ್ ತೊಳೆದರೆ, ಮಹಿಳೆಯರು ಮನೆಗಳ ಶುದ್ಧತೆಗೆ ಒತ್ತು ನೀಡಿದರು.

‘ತುಂತುರು ಮಳೆ ಸುರಿಯುತ್ತದೆ. ಕೃಷಿ ಚಟುವಟಿಕೆಯೂ ಹೆಚ್ಚಿದೆ. ಸದ್ಯ ಪೇಟೆ ಗೆ ತೆರಳಿ ಸಮಯ ಕಳೆಯಲಾಗದು. ಹಾಗಾಗಿ, ಸ್ಥಳೀಯವಾಗಿ ಸಿಗುವ ಸಾಮಗ್ರಿಗಳನ್ನು ಕೊಂಡು ಹಬ್ಬ ನೆರವೇರಿಸುತ್ತೇವೆ. ಬೈಕ್, ಸೈಕಲ್‌ಗಳನ್ನು ಸರಳವಾಗಿ ಪೂಜಿಸಿ, ಸಿಹಿ ಹಂಚಿ ಕೃಷಿ ಚಟುವಟಿಕೆಯಲ್ಲಿ ತೊಡಗುತ್ತೇವೆ’ ಎನ್ನುತ್ತಾರೆ ಅಗರ ರೈತ ವೆಂಕಟೇಶ್.

ಯಳಂದೂರು ಪಟ್ಟಣದ ಸಂತೆ ಪೇಟೆಯಲ್ಲಿ ವ್ಯಾಪಾರಿಗಳು ಗುರುವಾರ ಬೂದುಕುಂಬಳ ಕಾಯಿ ಇಟ್ಟು ಗ್ರಾಹಕರ ನಿರೀಕ್ಷೆಯಲ್ಲಿ ಇದ್ದರು.
ಯಳಂದೂರು ಪಟ್ಟಣದ ಸಂತೆ ಪೇಟೆಯಲ್ಲಿ ವ್ಯಾಪಾರಿಗಳು ಗುರುವಾರ ಬೂದುಕುಂಬಳ ಕಾಯಿ ಇಟ್ಟು ಗ್ರಾಹಕರ ನಿರೀಕ್ಷೆಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT