ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಸಂಸದ ಸುಧಾಕರ್‌ಗಿಲ್ಲ ಆಹ್ವಾನ; ‘ನಂದಿ’ಯಲ್ಲಿ ಆಕ್ರೋಶ

ನಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ ಕಾರ್ಯಕ್ರಮ
Published : 5 ಅಕ್ಟೋಬರ್ 2024, 12:25 IST
Last Updated : 5 ಅಕ್ಟೋಬರ್ 2024, 12:25 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ಸಂಸದ ಡಾ.ಕೆ.ಸುಧಾಕರ್ ಅವರನ್ನು ಆಹ್ವಾನಿಸದಿರುವುದಕ್ಕೆ ಸಂಸದರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

‘ಶಿಷ್ಟಾಚಾರ’ ಉಲ್ಲಂಘನೆ ಆಗಿದೆ ಎಂದು ಅವರು ಆರೋಪಿಸಿದರು. ಶನಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಕಟ್ಟಡವನ್ನು ಉದ್ಘಾಟಿಸಲು ಬಂದಿದ್ದರು.

ಸಚಿವರು ಕಾರ್ಯಕ್ರಮದ ವೇದಿಕೆಗೆ ಬರುವ ಸ್ವಲ್ಪ ಸಮಯದಲ್ಲಿ ಸ್ಥಳಕ್ಕೆ ಬಂದ ಸಂಸದರ ಬೆಂಬಲಿಗರು. ‘ಡಾ.ಕೆ.ಸುಧಾಕರ್ ಆರೋಗ್ಯ ಸಚಿವರಾಗಿದ್ದ ವೇಳೆ ಆಸ್ಪತ್ರೆ ಕಟ್ಟಡ ಉನ್ನತೀಕರಣಕ್ಕೆ ಅನುದಾನ ನೀಡಿದ್ದರು. ನಂದಿ ಆರೋಗ್ಯ ಕೇಂದ್ರದ ಕಟ್ಟಡ ಮೇಲ್ದರ್ಜೆಗೇರಿದ್ದು ಅವರ ಕಾರಣದಿಂದಲೇ. ಅವರು ಅನುದಾನ ನೀಡಿದ ಕಾರಣಕ್ಕೆ ನೀವು ಟೇಪ್ ಕತ್ತರಿಸುತ್ತಿದ್ದೀರಿ. ಆದರೆ ಈಗ ಅವರನ್ನೇ ಕಾರ್ಯಕ್ರಮಕ್ಕೆ ಕರೆದಿಲ್ಲ’ ಎಂದು ಏರುಧ್ವನಿಯಲ್ಲಿ’ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಆಸ್ಪತ್ರೆಯ ಕಟ್ಟಡಕ್ಕೆ ಜಾಗ ನೀಡಿದ ದಾನಿಗಳ ಕುಟುಂಬ ಸದಸ್ಯರನ್ನೂ ಆಹ್ವಾನಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ‘ನಿಮ್ಮ ಅಹವಾಲು ಹೇಳಿಕೊಳ್ಳಿ. ಆದರೆ ಜೋರು ಧ್ವನಿಯಲ್ಲಿ ಬೇಡ. ಕಾರ್ಯಕ್ರಮವಿದೆ. ಗಲಾಟೆ ಮಾಡಬಾರದು’ ಎಂದು ಸಮಾಧಾನಪಡಿಸಿದರು.

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪದೇ ಪದೇ ‘ಶಿಷ್ಟಚಾರ’ ಉಲ್ಲಂಘನೆಯ ಮಾತುಗಳು ಕೇಳುತ್ತಿವೆ. 

ಕೃಷ್ಣಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರದ ವಿಚಾರವಾಗಿ ಸಂಸದ ಡಾ.ಕೆ. ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರ ನಡುವೆ ಜಟಾಪಟಿಯೇ ನಡೆದಿತ್ತು. ಕುಡುವತಿ ಗ್ರಾಮದಲ್ಲಿ ಶಾಲಾಕೊಠಡಿಗಳನ್ನು ಉದ್ಘಾಟನೆಗೆ ಸಂಸದರನ್ನು ಕರೆಯದಿರುವುದೂ ವಿವಾದಕ್ಕೆ ಕಾರಣವಾಗಿತ್ತು.

ಅ.2ರಂದು ನಡೆದ ಜಿಲ್ಲಾ ಮಟ್ಟದ ಗಾಂಧಿ ಜಯಂತಿ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಶಾಸಕ ಪ್ರದೀಪ್ ಈಶ್ವರ್ ಭಾವಚಿತ್ರವಿಲ್ಲ ಎಂದು ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಆಗ ಸಚಿವರ ಡಾ.ಎಂ.ಸಿ.ಸುಧಾಕರ್ ‘ಶಿಷ್ಟಾಚಾರದ ಪಾಠ’ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT