ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಾಣವಾದ್ರೂ ಬಿಡ್ತೇವೆ, ಜಮೀನು ಕೊಡಲ್ಲ: ಸಚಿವರ ವಿರುದ್ಧ ಸಿಡಿದ ರೈತರು

Published 1 ಆಗಸ್ಟ್ 2024, 13:57 IST
Last Updated 1 ಆಗಸ್ಟ್ 2024, 13:57 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಸ್ಥಳೀಯ ರೈತರಿಂದ ಪ್ರಬಲ ವಿರೋಧ ವ್ಯಕ್ತವಾಗುತ್ತಿದೆ.

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪವಿರುವ ತಾಲ್ಲೂಕಿನ ಜಂಗಮಕೋಟೆ ಸುತ್ತಮುತ್ತಲಿನ ಪ್ರದೇಶದಲ್ಲಿ 2,283 ಎಕರೆ ಪ್ರದೇಶದಲ್ಲಿ ಕೈಗಾರಿಕೆಗಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದ್ದು ಇದನ್ನು ಸ್ಥಳೀಯ ರೈತರು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಸರ್ಕಾರದ ಕ್ರಮವನ್ನು ವಿರೋಧಿಸಿ ಈಗಾಗಲೇ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಜೊತೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಈ ಮಧ್ಯೆ ಶಿಡ್ಲಘಟ್ಟ ತಾಲ್ಲೂಕಿನ ನಡಿಪಿನಾಯಕನಹಳ್ಳಿ ಗ್ರಾಮದ ರೈತರು ತಮ್ಮ ತೋಟಗಳಿಗೆ ಮಾಧ್ಯಮದವರನ್ನು ಆಹ್ವಾನಿಸಿ, ‘ಇದು ಫಲವತ್ತಾದ ಭೂಮಿ, ಮರುಭೂಮಿಯಲ್ಲ, ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿಗೆ ಭೇಟಿ ನೀಡಿ ವಾಸ್ತವಾಂಶ ತಿಳಿದು ರೈತರ ಪರವಾಗಿ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ನಾವು ನಮ್ಮ ಪಿತ್ರಾರ್ಜಿತ ಆಸ್ತಿಯನ್ನು ಹೊಂದಿ ಅನುಭವದಲ್ಲಿದ್ದೇವೆ. ಯಾವುದೇ ರೀತಿಯ ಸರ್ಕಾರದಿಂದ ಸಾಗುವಳಿ ಚೀಟಿ ಅಥವಾ ಜಮೀನು ಮಂಜೂರಾತಿ ಮಾಡಿಕೊಂಡಿಲ್ಲ. ಕಂದಾಯ ದಾಖಲೆಗಳನ್ನು ಪರಿಶೀಲಿಸಲಿ. ನಮಗೆ ಇರುವುದೊಂದೆ ಆಸರೆ. ಇದನ್ನು ಕಿತ್ತುಕೊಳ್ಳುವ ನಿರ್ಧಾರವನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ರಾಜ್ಯ ಸರ್ಕಾರ ರೈತರಿಗೆ ಸಹಕಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ಜಂಗಮಕೋಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕವಾಗಿ ರೇಷ್ಮೆ ಕೃಷಿಯನ್ನು ನೆಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಈ ಭಾಗದಲ್ಲಿ ಕೈಗಾರಿಕೆಗಾಗಿ ಭೂಸ್ವಾಧೀನ ಮಾಡಿಕೊಂಡರೆ ರೇಷ್ಮೆ ಕೃಷಿ ನೆಲಕಚ್ಚುತ್ತದೆ’ ಎಂದು ಕಿಡಿಕಾರಿದರು.

‘ರಾಜ್ಯ ಸರ್ಕಾರ ರೈತರ ಜಮೀನು ಸ್ವಾಧೀನ ಮಾಡಿಕೊಂಡು ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡುತ್ತಿದ್ದಾರೆ. ನಮ್ಮ ಪ್ರಾಣವನ್ನಾದರೂ ಬಿಡುತ್ತೇವೆ, ಯಾವುದೇ ಕಾರಣಕ್ಕೂ ಫಲವತ್ತಾದ ಕೃಷಿ ಭೂಮಿಯನ್ನು ನೀಡುವುದಿಲ್ಲ. ನಮ್ಮ ಭೂಮಿಯಲ್ಲಿ ಚಿನ್ನದಂತಹ ಬೆಳೆ ಬೆಳೆದು ಸರ್ಕಾರಕ್ಕೆ ನೀಡುತ್ತೇವೆ. ಜೊತೆಗೆ ಉದ್ಯೋಗ ಸಹ ನಾವೇ ಸೃಷ್ಟಿಸುತ್ತವೆ’ ಎಂದು ಸವಾಲೆಸೆದರು.

ರೈತ ಎನ್.ಎಂ.ಅಜಿತ್‌ಕುಮಾರ್, ದೇವರಾಜ್, ಬೈರೇಗೌಡ, ಶಾಂತಕುಮಾರ್, ಪಿಳ್ಳೇಗೌಡ, ನಾಗರಾಜ್, ಅಶ್ವತ್ಥಪ್ಪ, ಸೋಮಣ್ಣ, ರಮೇಶ್, ಮುನಿರೆಡ್ಡಿ, ಕೆಂಪರೆಡ್ಡಿ, ಮಂಜುನಾಥ್, ಅಮರನಾಥ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT