ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ: ವರ್ಷದಿಂದ ಕಸಾಪ ಕಾರ್ಯಚಟುವಟಿಕೆ ಬಂದ್‌

3 ಸಾವಿರ ಸದಸ್ಯರು: ಮತ್ತೆ ನಿಷ್ಕ್ರಿಯ ಸ್ಥಿತಿಗೆ ತಲುಪಿದ ಕಸಾಪ
Published 15 ಜುಲೈ 2024, 7:31 IST
Last Updated 15 ಜುಲೈ 2024, 7:31 IST
ಅಕ್ಷರ ಗಾತ್ರ

ಚಿಂತಾಮಣಿ: ಆಂಧ್ರಪ್ರದೇಶದ ಗಡಿಭಾಗಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಯಾವುದೇ ಕಾರ್ಯಚಟುವಟಿಕೆ ನಡೆಸದೆ ಸಂಪೂರ್ಣ ನಿಷ್ಕ್ರಿಯವಾಗಿದೆ.

ಗಡಿಭಾಗದಲ್ಲಿರುವುದರಿಂದ ಹೆಚ್ಚಿನ ವ್ಯವಹಾರ ತೆಲುಗುಮಯವಾಗಿದ್ದರೂ ತಾಲ್ಲೂಕಿನಲ್ಲಿ ಸಾಹಿತ್ಯಾಸಕ್ತರು ಹಾಗೂ ಕಲಾಭಿಮಾನಿಗಳಿಗೆ ಕೊರತೆ ಇಲ್ಲ. ಇತ್ತೀಚಿನ ವರ್ಷಗಳಲ್ಲಿ ಕನ್ನಡಮಯ ವಾತಾವರಣ ಹೆಚ್ಚಾಗಿದೆ. ಆದರೆ ಕಾರ್ಯಚಟುವಟಿಕೆ ನಡೆಯುತ್ತಿಲ್ಲ ಎಂದು ಸಾಹಿತ್ಯಾಸಕ್ತರು ಅಸಮಧಾನ ವ್ಯಕ್ತಪಡಿಸುತ್ತಾರೆ.

ಒಂದು ವರ್ಷದಿಂದ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಒಂದೇ ಒಂದು ಕಾರ್ಯಕ್ರಮ ನಡೆಸಿಲ್ಲ. ಕನ್ನಡ ರಾಜ್ಯೋತ್ಸವ, ಸಾಹಿತ್ಯಪರಿಷತ್‌ನ ಸಂಸ್ಥಾಪನಾ ದಿನವನ್ನೂ ಆಚರಿಸದಿರುವುದು ಸೋಜಿಗದ ಸಂಗತಿ. 10-12 ವರ್ಷಗಳಿಂದ ಜೀವ ಪಡೆದುಕೊಂಡಿದ್ದ ಸಾಹಿತ್ಯ ಪರಿಷತ್ ಕಳೆದ ಒಂದು ವರ್ಷದಿಂದ ಮತ್ತೆ ನಿಷ್ಕ್ರಿಯ ಸ್ಥಿತಿಗೆ ತಲುಪಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ತಾಲ್ಲೂಕು ಸಾಹಿತ್ಯ ಸಮ್ಮೇಳನ ಹಾಗೂ ಅದಕ್ಕೆ ಪೂರಕವಾದ ಕಾರ್ಯಕ್ರಮ ಆಯೋಜಿಸುವಲ್ಲಿ ವಿಫಲವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ನಿರಾಸೆ ಮೂಡಿಸಿದೆ. ಸಾಹಿತ್ಯ ಪರಿಷತ್ತನ್ನು ಹುಡುಕಿಕೊಡಿ ಎಂದು ಅಪಹಾಸ್ಯದ ಮಾತು ಕೇಳಿಬರುತ್ತಿವೆ.

ಕವಿಗೋಷ್ಠಿ, ಸಂವಾದ, ಉಪನ್ಯಾಸ, ಮತ್ತಿತರ ಸಾಹಿತ್ಯಿಕ ಕಾರ್ಯಕ್ರಮಗಳಾಗಲಿ, ಮಹಾಪುರುಷರ ಜಯಂತಿಯನ್ನಾಗಲೀ ನಡೆಸುತ್ತಿಲ್ಲ. ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಇದೇಯೇ ಎಂದು ಕೇಳುವ ಸ್ಥಿತಿ ಎದುರಾಗಿದೆ.

ತಾಲ್ಲೂಕಿನ ಉದಯೋನ್ಮುಖ ಬರಹಗಾರರಿಗೆ, ಕವಿಗಳಿಗೆ, ಸಾಹಿತಿಗಳಿಗೆ ಅವಕಾಶ ಸ್ಥಗಿತಗೊಂಡಿವೆ. ಪರಿಷತ್ ಘಟಕದ ಗುಂಪುಗಾರಿಕೆ ಮತ್ತು ರಾಜಕೀಯಕ್ಕೆ ಸೀಮಿತವಾಗಿದೆ ಎನ್ನುವ ಅಸಮಧಾನ ಸಾಹಿತ್ಯ ವಲಯದಲ್ಲಿ ಕೇಳಿಬರುತ್ತಿದೆ.

ಶಿಕ್ಷಕ ದೇವತಾದೇವರಾಜ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತಕ್ಕ ಮಟ್ಟಿಗೆ ಕಾರ್ಯಕ್ರಮ ನಡೆಯುತ್ತಿದ್ದವು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ, ಕುವೆಂಪು ಜಯಂತಿ ಸೇರಿದಂತೆ ಮಹನೀಯರ ಜಯಂತಿ, ಕನ್ನಡ ರಾಜ್ಯೋತ್ಸವ, ಮನೆಗೊಂದು, ಸಂಗೀತ ಸ್ಪರ್ಧೆ, ನಾಡು-ನುಡಿಯ ಕುರಿತ ಕಾರ್ಯಕ್ರಮ ನಡೆಯುತ್ತಿದ್ದವು. 2022ನೇ ಸಾಲಿನ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು 2023ರ ಮಾರ್ಚ್‌ನಲ್ಲಿ ನಡೆಸಿದ್ದರು.

ದೇವತಾದೇವರಾಜ್ ಅವರನ್ನು ಬದಲಾವಣೆ ಮಾಡಿ ಸಿಆರ್‌ಪಿ ಎಂ.ಎ ಪ್ರಕಾಶ್ ಅಧ್ಯಕ್ಷರಾದರು. ಅವರ ಅವಧಿಯಲ್ಲಿ ಸುಮಾರು 15 ತಿಂಗಳುಗಳಿಂದ ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಹೆಸರೇ ನಾಪತ್ತೆಯಾಗಿದೆ. ಚಿಂತಾಮಣಿಯಲ್ಲಿ ಎರಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರಗಳಿವೆ. ಜತೆಗೆ 5 ಖಾಸಗಿ ಕಾಲೇಜು, ಸುಮಾರು 30 ಪಿ.ಯು ಕಾಲೇಜುಗಳು ಹಾಗೂ ತಾಲ್ಲೂಕಿನಲ್ಲಿ ನೂರಾರು ಶಾಲೆಗಳಿವೆ.

ತಾಲ್ಲೂಕಿನಲ್ಲಿ ಸುಮಾರು 3 ಸಾವಿರ ಜನ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಿದ್ದಾರೆ. ನಗರದಲ್ಲಿ ಸಾಹಿತ್ಯ ವೇದಿಕೆ, ಸಾಹಿತ್ಯ ಬಳಗ, ಸಾಹಿತ್ಯಕೂಟ ಮುಂತಾದ ಸಂಸ್ಥೆ ಹಲವು ಕನ್ನಡ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿವೆ. ಸಾಹಿತ್ಯ ವೇದಿಕೆ ಪ್ರತಿ ತಿಂಗಳು ಮನೆಗೊಂದು ಕವಿಗೋಷ್ಠಿ, ಸಾಹಿತ್ಯ ಬಳಗ ತಿಂಗಳ ಕವಿ ನೆನಪು ಕಾರ್ಯಕ್ರಮ ನಡೆಸುತ್ತಿದೆ.

ರಾಷ್ಟ್ರ ಪ್ರಶಸ್ತಿ ವಿಜೇತ ವೈ.ಎಸ್.ಗುಂಡಪ್ಪ ಸ್ಥಾಪಿಸಿರುವ ಸಾಹಿತ್ಯಕೂಟ ಪ್ರತಿ ಶನಿವಾರ ನಿರಂತರವಾಗಿ ವಿವಿಧ ಕಾರ್ಯಕ್ರಮ ನಡೆಸುತ್ತಿವೆ. ಜುಲೈ 13ರಂದು 3520ನೇ ಕಾರ್ಯಕ್ರಮ ನಡೆಸಿದೆ. ಇಷ್ಟೆಲ್ಲ ಸಾಹಿತ್ಯಾಭಿರುಚಿಯ ಕಾರ್ಯಕ್ರಮ ನಡೆಯುತ್ತಿದ್ದರೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾತ್ರ ಯಾವ ಚಟುವಟಿಕೆ, ಕಾರ್ಯಕ್ರಮ ಹಮ್ಮಿಕೊಳ್ಳದೆ ಮೂಲೆಗುಂಪಾಗಿದೆ.

ತಾಲ್ಲೂಕು ಘಟಕದ ಅಧ್ಯಕ್ಷರ ನೇಮಕಕ್ಕೆ ಯಾವುದೇ ಮಾನದಂಡಗಳಿಲ್ಲ. ಯಾವುದೇ ನೀತಿ, ನಿಯಮಗಳಿಲ್ಲದೆ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತದೆ. ಹಾಗೆಯೇ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗುತ್ತದೆ ಎಂಬು ಮಾತುಗಳು ಕೇಳಿಬರುತ್ತಿವೆ. ಜಿಲ್ಲಾ ಘಟಕದಂತೆ ತಾಲ್ಲೂಕು ಘಟಕಕ್ಕೂ ಚುನಾವಣೆ ಮೂಲಕವೇ ನೇಮಕ ಮಾಡಬೇಕು ಎಂದು ಸದಸ್ಯರು ಅಭಿಪ್ರಾಯಪಡುತ್ತಾರೆ.

ಜಿಲ್ಲಾ ಮತ್ತು ರಾಜ್ಯ ಘಟಕ ತಾಲ್ಲೂಕು ಘಟಕದ ಬಗ್ಗೆ ಗಮನಹರಿಸಿ ಕ್ರಮಬದ್ಧ ಕಾರ್ಯಚಟುವಟಿಕೆ ಕೈಗೊಳ್ಳುವಂತೆ ಪ್ರೋತ್ಸಾಹ ನೀಡಬೇಕು. ಕಾರ್ಯಕ್ರಮ ಕೈಗೊಳ್ಳದಿದ್ದಾಗ ಸೂಕ್ತ ಬದಲಾವಣೆ ಕೈಗೊಳ್ಳಬೇಕು ಎಂದು ಸಾಹಿತ್ಯಾಭಿಮಾನಿಗಳು ಒತ್ತಾಯಿಸುತ್ತಾರೆ.

2012, 2013 ಮತ್ತು 2014ರಲ್ಲಿ ಪ್ರತಿವರ್ಷ ಸತತವಾಗಿ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿದ್ದವು. 2012ರಲ್ಲಿ ಜನಪದ ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, 2013 ರಲ್ಲಿ ಕೋಟಗಲ್ ನಾಗಸುಬ್ರಮಣ್ಯಂ, 2014 ರಲ್ಲಿ ಸಿ.ಬಿ.ಹನುಮಂತಪ್ಪ ಸಮ್ಮೇಳನಾಧ್ಯಕ್ಷರಾಗಿದ್ದರು. 2015 ಮತ್ತು 2016ರಲ್ಲಿ ಸಮ್ಮೇಳನ ನಡೆದಿರಲಿಲ್ಲ. 2017ರಲ್ಲಿ ನಡೆದ 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರವಚನಕಾರ ತಳಗವಾರ ಆನಂದ್ ಅಧ್ಯಕ್ಷರಾಗಿದ್ದರು. 2018 ರಿಂದ 2022ರವರೆಗೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿರಲಿಲ್ಲ. 2022ರ ತಾಲ್ಲೂಕು ಮಟ್ಟದ ಸಮ್ಮೇಳನ 2023ರಲ್ಲಿ ನಡೆದಿತ್ತು. ಸಾಹಿತಿ ಕಾಗತಿ ವೆಂಕಟರತ್ನಂ ಅಧ್ಯಕ್ಷರಾಗಿದ್ದರು.

ಚಿಂತಾಮಣಿ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಕಾರ್ಯಾಲಯ
ಚಿಂತಾಮಣಿ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಕಾರ್ಯಾಲಯ
ಸಾಹಿತ್ಯ ಪರಿಷತ್ ಸಂಪೂರ್ಣ ನಿಷ್ಕ್ರಿಯವಾಗಿದೆ. ಪದಾಧಿಕಾರಿಗಳ ಜತೆಗೆ ಸಾಹಿತ್ಯ ಪರಿಷತ್ತಿನ ಸದಸ್ಯರಿಗೂ ಜವಾಬ್ದಾರಿ ಇದೆ. ತಾಲ್ಲೂಕಿನಲ್ಲಿ ಸುಮಾರು 3 ಸಾವಿರ ಸದಸ್ಯರಿದ್ದರೂ ಯಾರು ಈ ಬಗ್ಗೆ ಚಕಾರ ಎತ್ತದಿರುವುದು ವಿಷಾದನೀಯ
ಕೆ.ಎಸ್.ನೂರುಲ್ಲಾ ಲೇಖಕ
ವೈಯಕ್ತಿಕ ಕಾರಣಗಳಿಂದ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಈಗಾಗಲೇ ರಾಜೀನಾಮೆ ನೀಡಿದ್ದೇನೆ
ಎಂ.ಎ.ಪ್ರಕಾಶ್ ತಾ.ಕ.ಸಾ.ಪರಿಷತ್ ಮಾಜಿ ಅಧ್ಯಕ್ಷ
ಇಚ್ಛಾಶಕ್ತಿ ಸಂಘಟನೆ ಕೊರತೆ
ಕನ್ನಡ ಸಾಹಿತ್ಯ ಪರಿಷತ್ ಸಂಪೂರ್ಣ ನಿಷ್ಕ್ರಿಯವಾಗಿರುವುದು ನೋವು ತಂದಿದೆ. ಗಡಿಭಾಗದಲ್ಲಿ ಕನ್ನಡದ ಕಹಳೆ ಮೊಳಗಿಸುವ ಅನಿವಾರ್ಯತೆ ಇತ್ತು. ನನ್ನ ಅವಧಿಯಲ್ಲಿ ಎಲ್ಲ ತಾಲ್ಲೂಕುಗಳಲ್ಲಿ ಕಚೇರಿಗಳ ವ್ಯವಸ್ಥೆ ಮಾಡಿದ್ದೆ. ನಾಡು-ನುಡಿಯ ಬಗ್ಗೆ ಮನೆಯಂಗಳದಲ್ಲಿ ನುಡಿಸಿರಿ ಶಾಲೆಯಂಗಳದಲ್ಲಿ ನುಡಿಸಿರಿ ಕಸಾಪ ನಡೆ ಸಾಧಕರ ಕಡೆ ತತ್ವಾಮೃತ ವನಸಿರಿ-ನುಡಿಸಿರಿ ಸಿರಿ ಹುಣ್ಣಿಮೆ ಮುಂತಾದ ಕಾರ್ಯಕ್ರಮ ರೂಪಿಸಿದ್ದೆ. ಇಚ್ಛಾಶಕ್ತಿ ಮತ್ತು ಸಂಘಟನೆ ಕೊರತೆಯಿಂದ ಚಟುವಟಿಕೆ ಸ್ಥಗಿತಗೊಂಡಿವೆ. ಕನ್ನಡ ಸೇವೆ ವೃತ್ತಿಯಲ್ಲ ಪ್ರವೃತ್ತಿ ಎಂಬ ಅಧ್ಯಕ್ಷರ ಧೋರಣೆ ಕಾರಣವಾಗಿದೆ. ಕೈವಾರ ಶ್ರೀನಿವಾಸ್ ಕಸಾಪ ನಿಕಟಪೂರ್ವ ಜಿಲ್ಲಾ ಅಧ್ಯಕ್ಷ ಹಲವಾರು ಕಾರ್ಯಕ್ರಮ ನನ್ನ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕುವೆಂಪು ಜಯಂತಿ ಸೇರಿದಂತೆ ಮಹನೀಯರ ಜಯಂತಿ ಕನ್ನಡ ರಾಜ್ಯೋತ್ಸವ ಮನೆಗೊಂದು ಸಂಗೀತ ಸ್ಪರ್ಧೆ ನಾಡು-ನುಡಿಯ ಕುರಿತು ನಡೆಯುತ್ತಿದ್ದವು. 2022ನೇ ಸಾಲಿನ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ್ದೇನೆ. ದೇವತಾದೇವರಾಜ್ ಕಸಾಪ ನಿಕಟಪೂರ್ವ ಅಧ್ಯಕ್ಷ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT