ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್‌ಟಿಪಿಯಲ್ಲಿ ಭೂಮಿ ಸಮತಟ್ಟು: ‘ನಂದಿ’ ರೋಪ್ ವೇ ಕಾಮಗಾರಿಗೆ ಚಾಲನೆ

ನಂದಿಗಿರಿಧಾಮದಲ್ಲಿ ರೋಪ್ ವೇ ಕಾಮಗಾರಿಗೆ ದೊರೆಯಿತು ಚಾಲನೆ
Published : 6 ಅಕ್ಟೋಬರ್ 2024, 6:06 IST
Last Updated : 6 ಅಕ್ಟೋಬರ್ 2024, 6:06 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ರಾಜ್ಯದ ಮೊದಲ ‘ರೋಪ್ ವೇ’ ಎನ್ನುವ ಹೆಗ್ಗಳಿಕೆ ಪಡೆಯಲು ನಂದಿಗಿರಿಧಾಮವು ಸಜ್ಜಾಗಿದೆ. ಈ ಭಾಗವಾಗಿ ಬಹು ನಿರೀಕ್ಷಿತ ನಂದಿ ಗಿರಿಧಾಮದ ರೋಪ್ ವೇ ಕಾಮಗಾರಿಗೆ ಚಾಲನೆ ದೊರೆತಿದೆ. 

ಗಿರಿಧಾಮದ ಕೆಳ ಮಾರ್ಗಾಂತ್ಯ ಸ್ಥಳದಲ್ಲಿ (ಲೋಯರ್ ಟರ್ಮಿನಲ್‌ ಪಾಯಿಂಟ್‌–ಎಲ್‌ಟಿಪಿ) ಭೂಮಿ ಸಮತಟ್ಟು, ಬೇಲಿ ನಿರ್ಮಾಣ, ಯಾವ ಕೆಲಸಗಳು ಎಲ್ಲಿ ನಡೆಯಬೇಕು ಎಂದು ಗುರುತು ಹಾಕುವ ಕೆಲಸಗಳಿಗೆ ಚಾಲನೆ ದೊರೆತಿದೆ.

ಬಹಳ ವರ್ಷಗಳಿಂದ ರೋಪ್ ವೇ ಕಾಮಗಾರಿಯ ಬಗ್ಗೆ ನಿರೀಕ್ಷೆ ಹೊಂದಿದ್ದ ಪ್ರವಾಸಿಗರು ಮತ್ತು ಸ್ಥಳೀಯರಿಗೆ ಈ ಆರಂಭಿಕ ಕಾಮಗಾರಿಗಳು ಅಪಾರ ನಿರೀಕ್ಷೆ ಹುಟ್ಟಿಸಿವೆ. 

ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ರೋಪ್ ವೇ ಕಾಮಗಾರಿ ನಡೆಯಲಿದೆ. ಡೈನಮಿಕ್ಸ್ ರೋಪ್‌ ವೇ ಸಂಸ್ಥೆಯು ಕಾಮಗಾರಿ ನಡೆಸಲಿದೆ. 

ಗಿರಿಧಾಮದ ಕೆಳ ಮಾರ್ಗಾಂತ್ಯ ಸ್ಥಳದಲ್ಲಿ ರೋಪ್ ವೇ ಕಾಮಗಾರಿಗೆ ಒಟ್ಟು 7 ಎಕರೆ ಜಾಗ ಅಗತ್ಯವಿದೆ. ಈ ಪೈಕಿ 5.20 ಎಕರೆಯನ್ನು ಕಾಮಗಾರಿಗಾಗಿ ಸಂಸ್ಥೆಗೆ ನೀಡಲಾಗಿದೆ. ಈ 5.20 ಎಕರೆಯಲ್ಲಿಯೇ ಈಗ ಕಾಮಗಾರಿಗಳು ಆರಂಭವಾಗಿವೆ. 

ದೊಡ್ಡಬಳ್ಳಾಪುರ ತಾಲ್ಲೂಕಿಗೆ ಸೇರಿದ 1.20 ಎಕರೆ ಜಮೀನಿನ ವಿವಾದ ನ್ಯಾಯಾಲಯದಲ್ಲಿದೆ. ಈ ಸಮಸ್ಯೆ ಒಂದೂವರೆಯಿಂದ ಎರಡು ತಿಂಗಳಲ್ಲಿ ಪರಿಹಾರವಾಗುವ ವಿಶ್ವಾಸವು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳದ್ದು. ಈ ಸಮಸ್ಯೆ ಪರಿಹಾರವಾದರೆ ಈ ಜಮೀನು ಸಹ ಎಲ್‌ಟಿಪಿಯಲ್ಲಿ ಕಾಮಗಾರಿಗಳಿಗೆ ಬಳಕೆ ಆಗಲಿದೆ.

5.20 ಎಕರೆಯನ್ನು ಸಮತಟ್ಟು ಮಾಡಲಾಗಿದೆ. ಸುತ್ತಲೂ ಬೇಲಿ ನಿರ್ಮಾಣ ಮತ್ತು ರೋಪ್ ವೇ ಕಾಮಗಾರಿಗೆ ಸಂಬಂಧಿಸಿದಂತೆ ಗುರುತುಗಳನ್ನು ಹಾಕುವ ಕೆಲಸವು ನಡೆದಿದೆ. ಹೀಗೆ ರೋಪ್‌ ವೇಗೆ ಸಂಬಂಧಿಸಿದಂತೆ ಮೊದಲ ಹೆಜ್ಜೆ ಮುಂದಿರಿಸಲಾಗಿದೆ.

2 ಎಕರೆ ದೊರೆತ ತಕ್ಷಣ ಯುಟಿಪಿನಲ್ಲಿ ಕೆಲಸ: ನಂದಿ ಬೆಟ್ಟಕ್ಕೆ ರೋಪ್‌ ವೇ ನಿರ್ಮಾಣಕ್ಕೆ ಮೇಲು ಮಾರ್ಗಾಂತ್ಯ ಸ್ಥಳದಲ್ಲಿ (ಅಪ್ಪರ್ ಟರ್ಮಿನಲ್ ಪಾಯಿಂಟ್‌–ಯುಟಿಪಿ) ಎರಡು ಎಕರೆಯನ್ನು ನೀಡುವ ಸಂಬಂಧ ಜುಲೈ 25ರಂದು ಸರ್ಕಾರವು ‘ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ತಿದ್ದುಪಡಿ ಮಸೂದೆ– 2024’ ಅನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಸಹ ಪಡೆದಿದೆ. 

30 ವರ್ಷಗಳ ಅವಧಿಗಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ನಂದಿ ಬೆಟ್ಟದಲ್ಲಿ ರೋಪ್‌ ವೇ ನಿರ್ಮಿಸಲು ಮೇಲು ಮಾರ್ಗಾಂತ್ಯ ಸ್ಥಳದಲ್ಲಿ ಅಭಿವೃದ್ಧಿಯ ಉದ್ದೇಶಕ್ಕಾಗಿ ಎರಡು ಎಕರೆ ಬಳಸಿಕೊಳ್ಳಲು ಅನುವಾಗುವಂತೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ಉತ್ತರದಲ್ಲಿ ವಾಹನ ನಿಲುಗಡೆ ಇರುವ, ದಕ್ಷಿಣದಲ್ಲಿ ಅರ್ಕಾವತಿ ನದಿಯ ಉಗಮ ಸ್ಥಳದಲ್ಲಿರುವ ಬೆಟ್ಟದ ಇಳಿಜಾರು, ಪೂರ್ವದಲ್ಲಿ ಎರಡನೇ ಕೋಟೆ ಗೋಡೆ, ಪಶ್ಚಿಮದಲ್ಲಿ ಮೊದಲನೇ ಕೋಟೆ ಗೋಡೆಯ ಚಕ್ಕುಬಂದಿ ಹೊಂದಿರುವ ನಂದಿ ಬೆಟ್ಟದ ಸರ್ವೆ ನಂ.3ರಲ್ಲಿನ ಎರಡು ಎಕರೆ ಪ್ರದೇಶವನ್ನು ‘ಮಾರ್ಗಾಂತ್ಯ ಸ್ಥಳ’ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಮಸೂದೆ ಅವಕಾಶ ಕಲ್ಪಿಸಲಿದೆ.

ಈ ಜಾಗವನ್ನು ನೀಡುವ ಸಂಬಂಧ ಗೆಜೆಟ್ ಪ್ರಕಟಣೆಯನ್ನು ಹೊರಡಿಸಲಾಗಿದೆ. ಆದರೆ ಇನ್ನೂ ಪ್ರವಾಸೋದ್ಯಮ ಇಲಾಖೆಯ ವಶಕ್ಕೆ ಜಮೀನು ಬಂದಿಲ್ಲ. ಈ ಜಮೀನು ವಶಕ್ಕೆ ಬಂದ ತಕ್ಷಣವೇ ಮೇಲು ಮಾರ್ಗಾಂತ್ಯ ಸ್ಥಳ (ಯುಟಿಪಿ)ದಲ್ಲಿ ಕಾಮಗಾರಿಗಳು ಆರಂಭವಾಗಲಿವೆ ಎಂದು ಪ್ರವಾಸೋದ್ಯಮ ಇಲಾಖೆ ಮೂಲಗಳು ತಿಳಿಸುತ್ತವೆ.

ಆರಂಭದಲ್ಲಿಯೇ ವಾಹನ ನಿಲುಗಡೆ

ವ್ಯವಸ್ಥೆ ಗಿರಿಧಾಮದ ಯುಟಿಪಿ ಮತ್ತು ಎಲ್‌ಟಿಪಿಯಲ್ಲಿ ಕಾಮಗಾರಿಗಳು ಆರಂಭವಾದರೂ ಪ್ರವಾಸಿಗರ ಪ್ರವೇಶಕ್ಕೆ ಅನನುಕೂಲ ಆಗಬಾರದು. ಈ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯು ಗಿರಿಧಾಮದ ಪ್ರವೇಶದಲ್ಲಿಯೇ ಅಂದರೆ ಪೊಲೀಸ್ ಚೌಕಿ ಸಮೀಪ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಲು ತೀರ್ಮಾನಿಸಿದೆ. ಇಲ್ಲಿ ವಾಹನಗಳನ್ನು ನಿಲುಗಡೆ ಮಾಡಿ ಬಸ್‌ಗಳ ಮೂಲಕ ಪ್ರವಾಸಿಗರನ್ನು ಗಿರಿಧಾಮಕ್ಕೆ ಕರೆದೊಯ್ಯಲಾಗುತ್ತದೆ. ಇದರಿಂದ ರೋಪ್ ವೇ ಕಾಮಗಾರಿಗಳಿಗೆ ಯಾವುದೇ ಅಡ್ಡಿ ಆಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT