ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಹುಲ್ ಗಾಂಧಿ ಬಗ್ಗೆ ಬಿಜೆಪಿಯಿಂದ ಅಪಪ್ರಚಾರ: ಬಿ.ಕೆ.ಹರಿಪ್ರಸಾದ್

Published : 14 ಸೆಪ್ಟೆಂಬರ್ 2024, 16:03 IST
Last Updated : 14 ಸೆಪ್ಟೆಂಬರ್ 2024, 16:03 IST
ಫಾಲೋ ಮಾಡಿ
Comments

ನರಸಿಂಹರಾಜಪುರ: ರಾಹುಲ್ ಗಾಂಧಿ ಅವರು ಮೀಸಲಾತಿಯ ಬಗ್ಗೆ ನೀಡಿರುವ ಹೇಳಿಕೆಯನ್ನು ಬಿಜೆಪಿ ತದ್ವಿರುದ್ಧವಾಗಿ ಅಪಪ್ರಚಾರ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಮತ್ತು ಸಂಘ ಪರಿವಾರದವರು ಹಿಂದುತ್ವದ ರಾಜಕಾರಣದಲ್ಲಿ ನಂಬಿಕೆ ಇಟ್ಟುಕೊಂಡವರು. ಹಿಂದುತ್ವದ ರಾಜಕಾರಣವು ಬಹುತ್ವದಲ್ಲಿ ನಂಬಿಕೆ ಇಲ್ಲದ್ದು’ ಎಂದರು.

‘ಬಿಜೆಪಿಯ ಕೆಲವರು ನೆಹರೂ ಅವರು ಮೀಸಲಾತಿ ವಿರೋಧಿಸಿದ್ದರು ಎಂಬ ಬಾಲಿಷ ಹೇಳಿಕೆ ನೀಡುತ್ತಿದ್ದಾರೆ. ಸಂಸತ್ತಿನ ಮೊದಲ ಅಧಿವೇಶನದಲ್ಲಿ ಸಂವಿಧಾನಕ್ಕೆ ಮೊದಲನೇ ತಿದ್ದುಪಡಿ ತರಲಾಗಿದೆ. ಅದು ದಲಿತರೊಂದಿಗೆ ಹಿಂದುಳಿದವರಿಗೂ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಮಾನ ಅವಕಾಶ ಕಲ್ಪಿಸಲು. ನೆಹರೂ ಯಾರು ಎಂಬುದನ್ನು ಇತಿಹಾಸ ಗೊತ್ತಿಲ್ಲದವರು ತಿಳಿದುಕೊಳ್ಳಬೇಕು’ ಎಂದರು.

‘ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾದ ನಂತರ ಮಹಿಳೆಯರಿಗೆ ವಿಧಾನಸಭೆ, ಲೋಕಸಭೆಯಲ್ಲಿ ಶೇ 33ರಷ್ಟು ಮೀಸಲಾತಿಯನ್ನು ಘೋಷಿಸಿ 2010 ರಾಜ್ಯಸಭೆಯಲ್ಲಿ ಮಸೂದೆಗೆ ಒಪ್ಪಿಗೆ ಸಿಗುವಂತೆ ಮಾಡಿದರು. ರಾಜ್ಯಸಭೆಯಲ್ಲಿ ಆಗ ನಾನು ಸದಸ್ಯನಾಗಿದ್ದೆ’ ಎಂದು ತಿಳಿಸಿದರು.

ರಾಹುಲ್ ಗಾಂಧಿ ಅವರು ಭಾರತ್ ಜೋಡೊ ಯಾತ್ರೆಯಲ್ಲಿ 10 ಸಾವಿರ ಕಿಲೋ ಮೀಟರ್ ಪಾದಯಾತ್ರೆ ನಡೆಸಿ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಮೀಸಲಾತಿಯನ್ನು ಶೇ 50ರಿಂದ ಶೇ 75ಕ್ಕೆ ಹೆಚ್ಚಿಸುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಎಂದರು.

ಮೀಸಲಾತಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದ ಬಿಜೆಪಿಯ ರಾಮ ಜೋಯಿಸ್ ಅವರು ಮೀಸಲಾತಿ ಪ್ರಮಾಣವನ್ನು ಶೇ 48ರಿಂದ ಶೇ 32ಕ್ಕೆ ಕಡಿಮೆ ಮಾಡಿಸಿದರು. ಮೀಸಲಾತಿ ಕಡಿತ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ತಿರುಗೇಟು ನೀಡಿದರು.

1999ರಲ್ಲಿ ಪ್ರಧಾನಮಂತ್ರಿ ಆಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಸಂವಿಧಾನ ಬದಲಾವಣೆ ಮಾಡಬೇಕು ಎಂದು ಹೇಳಿದ್ದರು. ಬಿಜೆಪಿ ಮತ್ತು ಆರ್‌ಎಸ್ಎಸ್ ಮಾತ್ರ ಮೀಸಲಾತಿ ವಿರೋಧಿಯಾಗಿವೆ. ಅವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಜರಿದರು.  

ರಾಹುಲ್ ಗಾಂಧಿ ಅವರ ಬಗ್ಗೆ ಅಪಪ್ರಚಾರ ನಿಲ್ಲಿಸದಿದ್ದರೆ ಬಿಜೆಪಿಯ ಮುಖವಾಡವನ್ನು ಇನ್ನಷ್ಟು ಬಯಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಖಾಸಗಿಯಾಗಿ ಪೂಜೆ ಮಾಡಲು ಎಲ್ಲರಿಗೂ ಅವಕಾಶವಿದೆ. ಪ್ರಧಾನ ಮಂತ್ರಿ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಮನೆಗೆ ಹೋಗಿ ಗಣೇಶ ಪೂಜೆ ಮಾಡಿ ಮಾಧ್ಯಮ, ಟಿವಿಗಳಲ್ಲಿ ಪ್ರಚಾರ ಗಿಟ್ಟಿಸಿದ್ದಾರೆ. ಗಣಪತಿ ಮೇಲಿನ ಭಕ್ತಿಯಿಂದ ಪೂಜೆಗೆ ಹೋಗದೆ ಮಹಾರಾಷ್ಟ್ರದಲ್ಲಿ ಶೀಘ್ರದಲ್ಲಿಯೇ ಚುನಾವಣೆ ನಡೆಯುವುದರಿಂದ ಅವರ ಮನೆಗೆ ಹೋಗಿದ್ದಾರೆ. 

‘ಹಿಂದುತ್ವ ರಾಜಕೀಯ ವಿಚಾರ ಎಂಬ ಬಗ್ಗೆ ಸಾರ್ವಕರ್ ಬರೆದಿರುವ ಪುಸ್ತಕವನ್ನು ಪ್ರಹ್ಲಾದ್ ಜೋಷಿ ಓದಿದ್ದರೆ ಬಾಲಿಷ ಹೇಳಿಕೆ ನೀಡುತ್ತಿರಲಿಲ್ಲ. ಈ ಹಿಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಪುರಿ ದೇವಾಲಯದ ಒಳಗೆ, ರಾಷ್ಟ್ರಪತಿ ದ್ರೌಪದಿ ಮುರ್ಮ ಅವರನ್ನು ದೇವಸ್ಥಾನದೊಳಗೆ ಬಿಡದವರಿಂದ ಹಿಂದು ಧರ್ಮದ ಪಾಠ ಕಲಿಯುವ ಅವಶ್ಯಕತೆಯಿಲ್ಲ’ ಎಂದರು.

ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಪಿ.ಅಂಶುಮಂತ್, ಮುಖಂಡರಾದ ಆರ್.ಸದಾಶಿವ, ನಾಗರತ್ನಾ, ಶಂಕರ್, ಎಚ್.ಎಂ.ಶಿವಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT