ವಿದ್ಯುತ್ ತಂತಿ ತಗುಲಿ ಆಲ್ದೂರು ಸಮೀಪ ಇತ್ತೀಚೆಗೆ ಮೃತಪಟ್ಟ ಕಾಡಾನೆ
ಆನೆಗಳಿಗೆ ಜೋತು ಬಿದ್ದ ವಿದ್ಯುತ್ ತಂತಿ ಕಂಟಕ
ಜಿಲ್ಲೆಯಲ್ಲಿ ವಿದ್ಯುತ್ ತಂತಿ ತಗುಲಿ 2008ರಿಂದ 2022ರವರೆಗೆ 17 ಕಾಡಾನೆಗಳು ಮೃತಪಟ್ಟಿದ್ದವು. ಕಳೆದ ಒಂದೂವರೆ ವರ್ಷದಲ್ಲಿ 5 ಆನೆಗಳು ಮೃತಪಟ್ಟಿವೆ. ಚಿಕ್ಕಮಗಳೂರು ವಿಭಾಗ ವ್ಯಾಪ್ತಿಯಲ್ಲೇ ಒಂದು ವರ್ಷದ ಅವಧಿಯಲ್ಲಿ ಮೂರು ಕಾಡಾನೆಗಳು ವಿದ್ಯುತ್ ತಂತಿಗೆ ಬಲಿಯಾದವು. ಭದ್ರಾ ವನ್ಯಜೀವಿ ವಲಯದಿಂದ ಕಾಡಂಚಿನ ಗ್ರಾಮಗಳಿಗೆ ಬರುವ ಆನೆಗಳು ಕೂಡ ತರೀಕೆರೆ ವಲಯ ವ್ಯಾಪ್ತಿಯಲ್ಲಿ ಬಲಿಯಾಗುತ್ತಿವೆ. ವಿದ್ಯುತ್ ತಂತಿ ಜೋತು ಬಿದ್ದರೂ ಅವುಗಳನ್ನು ಸರಿಪಡಿಸದಿರುವುದು ಈ ದುರಂತಗಳಿಗೆ ಕಾರಣ. ಆಲ್ದೂರು ಸಮೀಪ ಜೋತು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಇತ್ತೀಚೆಗೆ ಕಾಡಾನೆಯೊಂದು ಮೃತಪಟ್ಟಿತು. ಮೆಸ್ಕಾಂ ಮೂವರು ಎಂಜಿನಿಯರ್‌ಗಳ ವಿರುದ್ಧ ಪ್ರಕರಣವೂ ದಾಖಲಾಯಿತು. ಜೋತು ಬಿದ್ದ ವಿದ್ಯುತ್ ತಂತಿಗಳು ಕಂಟಕವಾಗಿ ಕಾಡುತ್ತಿದ್ದು ಸರಿಪಡಿಸದ ಮೆಸ್ಕಾಂ ವಿರುದ್ಧ ಕಠಿಣ ಕ್ರಮ ಆಗಬೇಕು ಎಂಬುದು ಜನರ ಒತ್ತಾಯ.
ಹಾನಿಗೆ ನೀಡಿದ ಪರಿಹಾರ ಎಷ್ಟು
ಚಿಕ್ಕಮಗಳೂರು ವಿಭಾಗದಲ್ಲಿ ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ₹9.37 ಕೋಟಿ ಮೌಲ್ಯದ ಬೆಳೆಹಾನಿ ಸೇರಿ ಒಟ್ಟು ₹11.80 ಕೋಟಿ ಪರಿಹಾರ ವಿತರಣೆಯಾಗಿದೆ. ಪ್ರಸಕ್ತ ಸಾಲಿನಲ್ಲೂ ₹1.56 ಕೋಟಿ ಪರಿಹಾರ ವಿತರಿಸಿದೆ. ಕೊಪ್ಪ ವಿಭಾಗದಲ್ಲಿ ಐದು ವರ್ಷಗಳ ಅವಧಿಯಲ್ಲಿ ₹2.42 ಕೋಟಿ ಪರಿಹಾರ ವಿತರಣೆಯಾಗಿದ್ದರೆ ತರೀಕೆರೆ ವಲಯ ವ್ಯಾಪ್ತಿಯಲ್ಲಿ ₹70.20 ಲಕ್ಷ ಪರಿಹಾರ ನೀಡಲಾಗಿದೆ. ಇದರಲ್ಲಿ ಬಹುತೇಕ ಪರಿಹಾರ ಮೊತ್ತ ಬೆಳೆಹಾನಿಗೆ ಸಂಬಂಧಿಸಿದೆ. ಕಾಡಿನಿಂದ ನಾಡಿಗೆ ಬರುವ ಆನೆಗಳಿಂದ ಆಗುವ ಬೆಳೆಹಾನಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅರಣ್ಯ ಇಲಾಖೆಗೆ ಇದು ದುಬಾರಿ ಎನಿಸುತ್ತಿದೆ. ಆದರೆ ರೈತರಿಗೆ ಆಗುತ್ತಿರುವ ನಷ್ಟ ಗಮನಿಸಿದರೆ ದೊರಕುವ ಬೆಳೆ ಪರಿಹಾರಕ್ಕಿಂತ ನಾಲ್ಕು ಪಟ್ಟು ಹೆಚ್ಚು. ‘ಮೂಡಿಗೆರೆ ತಾಲ್ಲೂಕಿನ ಹಲವೆಡೆ ರೈತರು ಬೆಳೆ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಇದಕ್ಕೆ ಸರ್ಕಾರ ಎಷ್ಟು ಪರಿಹಾರ ಕೊಡಬೇಕು ಪ್ರಾಣಹಾನಿಗೆ ಬೆಲೆ ಕಟ್ಟಲು ಸಾಧ್ಯವೇ’ ಎಂಬುದು ರೈತರ ಪ್ರಶ್ನೆ.