ಗುರುವಾರ, 26 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಡೂರು–ಮೂಡಿಗೆರೆ ಅಕ್ರಮ ಭೂಮಂಜೂರಾತಿ: ಸಾಗುವಳಿ ಚೀಟಿ ಬೇಕಾಬಿಟ್ಟಿ ಹಂಚಿಕೆ!

ಭೂಸಕ್ರಮೀಕರಣ ಸಮಿತಿ ಮುಂದೆ ಮಂಡನೆ ಮಾಡದೆಯೇ ಭೂಮಿ ಮಂಜೂರು
Published : 25 ಸೆಪ್ಟೆಂಬರ್ 2024, 21:06 IST
Last Updated : 25 ಸೆಪ್ಟೆಂಬರ್ 2024, 21:06 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ಕಡೂರು–ಮೂಡಿಗೆರೆ ಅಕ್ರಮ ಭೂಮಂಜೂರಾತಿ ಪ್ರಕರಣದಲ್ಲಿ ಭೂಸಕ್ರಮೀಕರಣ ಸಮಿತಿ ಮುಂದೆ ಕಡತಗಳನ್ನು ಮಂಡಿಸದೆ ಕಚೇರಿ ಸಿಬ್ಬಂದಿಯೇ ಸಾಗುವಳಿ ಚೀಟಿ ಮುದ್ರಿಸಿ ಮನಸೋಇಚ್ಛೆ ಹಂಚಿಕೆ ಮಾಡಿರುವುದು ತನಿಖೆಯಿಂದ ಬಹಿರಂಗವಾಗಿದೆ.

ಎರಡೂ ತಾಲ್ಲೂಕಿನಲ್ಲಿ ಅಕ್ರಮ ಭೂಮಂಜೂರಾತಿ ಬಗ್ಗೆ ತನಿಖೆ ನಡೆಸಲು 2023ರ ಆಗಸ್ಟ್‌ನಲ್ಲಿ 13 ತಹಶೀಲ್ದಾರ್‌ಗಳ ತಂಡವನ್ನು ಸರ್ಕಾರ ರಚನೆ ಮಾಡಿತ್ತು. ತನಿಖೆ ನಡೆಸಿರುವ ತಂಡ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆಯಾ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಭೂಸಕ್ರಮೀಕರಣ ಸಮಿತಿಗಳು ಇರುತ್ತವೆ. ತಹಶೀಲ್ದಾರ್ ಸದಸ್ಯ ಕಾರ್ಯದರ್ಶಿಯಾಗಿದ್ದರೆ, ಅಧಿಕಾರಿಗಳ ಹೊರತಾದ ಸದಸ್ಯರೂ ಸಮಿತಿಯಲ್ಲಿ ಇರುತ್ತಾರೆ.

ನಮೂನೆ 50, 53 ಮತ್ತು 57 ಅಡಿಯಲ್ಲಿ ಬಗರ್ ಹುಕುಂ ಸಾಗುಳಿದಾರರು ಸಲ್ಲಿಸುವ ಅರ್ಜಿಗಳನ್ನು ಈ ಸಮಿತಿ ಮುಂದೆ ಮಂಡಿಸುವುದು ಕಡ್ಡಾಯ. ಅದರೆ, ಈ ಸಮಿತಿಯ ಮುಂದೆ ಮಂಡನೆಯನ್ನೇ ಮಾಡದ 1,159 ಪ್ರಕರಣಗಳನ್ನು ತನಿಖಾ ತಂಡ ಗುರುತಿಸಿದೆ. ಮೂಡಿಗೆರೆ ತಾಲ್ಲೂಕಿನಲ್ಲಿ 1,004 ಪ್ರಕರಣ, ಕಡೂರು ತಾಲ್ಲೂಕಿನಲ್ಲಿ 155 ಪ್ರಕರಣಗಳಿವೆ. ಅಧಿಕಾರಿ ಮತ್ತು ಕಚೇರಿ ಸಿಬ್ಬಂದಿಯೇ ತಮಗೆ ಬೇಕಾದವರಿಗೆ ಸಾಗುವಳಿ ಚೀಟಿ ಮುದ್ರಿಸಿ ಕೊಟ್ಟಿರುವುದನ್ನು ತನಿಖಾ ತಂಡ ಪತ್ತೆ ಮಾಡಿದೆ.

ಇದಲ್ಲದೇ ಶಾಸಕರ ಅಧ್ಯಕ್ಷತೆಯ ಸಮಿತಿಯು ಸಭೆ ನಡೆಸಿ ಸಿದ್ಧಪಡಿಸಿರುವ ನಡಾವಳಿಗಳನ್ನು ತಿದ್ದಿರುವ ಪ್ರಕರಣಗಳನ್ನೂ ತನಿಖಾ ತಂಡ ಪತ್ತೆ ಮಾಡಿದೆ. ಕಡೂರು ತಾಲ್ಲೂಕಿನಲ್ಲಿ ಈ ರೀತಿಯ 156 ಪ್ರಕರಣಗಳಿದ್ದರೆ, ಮೂಡಿಗೆರೆ ತಾಲ್ಲೂಕಿನಲ್ಲಿ ನಡಾವಳಿ ತಿದ್ದಿರುವ ಪ್ರಕರಣ ಇಲ್ಲ.

ಇನ್ನು ಸಮಿತಿಯಲ್ಲಿ ನಿರ್ಧಾರ ಮಾಡಿರುವ ವಿಸ್ತೀರ್ಣಕ್ಕಿಂತ ಹೆಚ್ಚು ಭೂಮಿಯನ್ನು ಮಂಜೂರು ಮಾಡಿರುವ ಪ್ರಕರಣಗಳೂ ಇವೆ. ಕಡೂರು ತಾಲ್ಲೂಕಿನಲ್ಲಿ 46 ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ 5 ಪ್ರಕರಣಗಳಿವೆ. ಭೂಸಕ್ರಮೀಕರಣ ಸಮಿತಿಯಲ್ಲಿ ಅರ್ಜಿಗಳನ್ನು ವಜಾ ಮಾಡಿದ್ದರೂ ಅವುಗಳಿಗೂ ಹಕ್ಕುಪತ್ರ ನೀಡಿರುವ 11 ಪ್ರಕರಣಗಳಿವೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕಡೂರು ತಾಲ್ಲೂಕಿನ ಅಮೃತ ಮಹಲ್ ಕಾವಲಿನಲ್ಲೂ ಮಂಜೂರಾತಿ ನೀಡಿರುವ 197 ಪ್ರಕರಣಗಳಿವೆ. ಪಶುಸಂಗೋಪನಾ ಇಲಾಖೆಯ ಅಭಿಪ್ರಾಯವನ್ನೇ ಪಡೆಯದೆ ಭೂಮಂಜೂರಾತಿ ನೀಡಲಾಗಿದೆ ಎಂದೂ ತನಿಖಾ ತಂಡ ಅಭಿಪ್ರಾಯಪಟ್ಟಿದೆ.

‌ಸಾಗುವಳಿ ಚೀಟಿ ಮುದ್ರಿಸಿ ಮನಸೋಇಚ್ಛೆ ಹಂಚಿಕೆ ಮಾಡಿರುವ ಬಗ್ಗೆ 2023ರ ಆಗಸ್ಟ್‌ 10ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ತನಿಖಾ ತಂಡ ಸಲ್ಲಿಕೆ ಮಾಡಿರುವ ವರದಿಯಲ್ಲೂ ಇದೇ ಅಂಶಗಳು ಉಲ್ಲೇಖವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT