ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭದ್ರಾ ಹುಲಿ ಕಾಡಾದ ಜಾಗರ ಕಣಿವೆ

Published : 4 ಅಕ್ಟೋಬರ್ 2024, 5:06 IST
Last Updated : 4 ಅಕ್ಟೋಬರ್ 2024, 5:06 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ಎತ್ತ ನೋಡಿದರೂ ಕಾಡು, ಮುಗಿಲಿಗೆ ಮುತ್ತಿಕ್ಕುವಂತೆ ಕಾಣಿಸುವ ಶಿಖರಗಳು, ಪಕ್ಷಿಗಳ ಇಂಚರ, ಆನೆ–ಹುಲಿಗಳ ಗಾಂಭಿರ್ಯ, ಜಿಂಕೆ–ಚಿರತೆಗಳ ಚೆಲ್ಲಾಟ, ಜಲಚರಗಳ ಕಲರವ... ಇವೆಲ್ಲವನ್ನೂ ಒಂದೆಡೆಯೇ ಹುದುಗಿಸಿಕೊಂಡಿರುವುದು ಭದ್ರಾ ಹುಲಿ ಸಂರಕ್ಷಿತ ಪ್ರದೇಶ.

ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿರುವ ಹುಲಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಹುಲಿಗಳ ಬೀಡಾಗಿರುವ ಈ ಅಭಯಾರಣ್ಯಕ್ಕೆ ಈಗ 25 ವರ್ಷಗಳ ಸಂಭ್ರಮದಲ್ಲಿದೆ.

1915ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲೇ ಮೀಸಲು ಅರಣ್ಯ ಎಂದು ಘೋಷಣೆಯಾಗಿತ್ತು. ಬಳಿಕ 1951ರಲ್ಲಿ ಮೈಸೂರು ರಾಜ್ಯವಾಗಿದ್ದ ಕಾಲದಲ್ಲಿ ಪಶ್ಚಿಮ ಘಟ್ಟಗಳ 124.63 ಚದರ ಕಿಲೋ ಮೀಟರ್ ಅರಣ್ಯ ಪ್ರದೇಶವನ್ನು ಜಾಗರ ಕಣಿವೆ ವನ್ಯಜೀವಿ ಅಭಯಾರಣ್ಯ ಎಂದು ಹೆಸರಿನೊಂದಿಗೆ ಘೋಷಣೆಯಾಯಿತು.

ಚಿಕ್ಕಮಗಳೂರು ಜಿಲ್ಲೆಯ ಅತ್ಯಂತ ವೈವಿಧ್ಯಮಯ ಈ ಪರಿಸರ ತಾಣವನ್ನು 1974ರಲ್ಲಿ 492.46 ಚದರ ಕಿಲೋ ಮೀಟರ್‌ಗೆ ವಿಸ್ತರಿಸಲಾಯಿತು. ಬಳಿಕ ಭದ್ರಾ ವನ್ಯಜೀವಿ ಅಭಯಾರಣ್ಯ ಎಂದು ಮರುನಾಮಕರಣ ಮಾಡಲಾಯಿತು. ಒಂದೆಡೆ ಮುಳ್ಳಯ್ಯನಗಿರಿ, ಹೆಬ್ಬೆಗಿರಿ, ಗಂಗೆಗಿರಿ, ಬಾಬಾ ಬುಡನ್‌ಗಿರಿಯ ರಮಣಿಯ ಬೆಟ್ಟಗಳು ಮತ್ತು ಇಳಿಜಾರು ಪ್ರದೇಶಗಳಿಂದ ಈ ವನ್ಯಜೀವಿ ತಾಣ ಆವೃತಗೊಂಡಿದೆ.

ಈ ಪ್ರದೇಶವನ್ನು 1998ರಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶ(ಬಿಟಿಆರ್‌) ಎಂದು ಘೋಷಣೆ ಮಾಡಲಾಯಿತು. ಭಾರತದ 25ನೇ ಮತ್ತು ಕರ್ನಾಟಕದ ಎರಡನೇ ಹುಲಿ ಸಂರಕ್ಷಿತ ಪ್ರದೇಶ ಎಂಬ ಹೆಗ್ಗಳಿಕೆ ಪಾತ್ರವಾಯಿತು. ಇದರ ನಡುವೆಯೇ ಉಳಿದಿದ್ದ ಊರುಗಳಲ್ಲಿದ್ದ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ 2000ನೇ ಇಸವಿಯಿಂದ ಆರಂಭವಾಯಿತು. ಅಭಯಾರಣ್ಯದ ಪ್ರಮುಖ ಪ್ರದೇಶಗಳಲ್ಲಿನ 16 ಗ್ರಾಮಗಳ 736ಕ್ಕೂ ಹೆಚ್ಚು ಕುಟುಂಬಗಳನ್ನು ತರೀಕೆರೆ ತಾಲೂಕಿನ ಮಳಲಿ ಚನ್ನೇನಹಳ್ಳಿ ಮತ್ತು ಮೂಡಿಗೆರೆ ತಾಲ್ಲೂಕಿನ ಕೆಳಗೂರಿಗೆ ಸ್ಥಳಾಂತರ  ಮಾಡಲಾಯಿತು. 2002ರಿಂದ ಅಷ್ಟೂ ಪ್ರದೇಶ ಜನವಸತಿಗಳಿಂದ ಮುಕ್ತವಾಯಿತು. ಬಳಿಕ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ವೃದ್ಧಿಯಾಗತೊಡಗಿತು.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ 2023ರಲ್ಲಿ ನಡೆಸಿರುವ ಹುಲಿ ಅಂದಾಜು ವರದಿಯ ಪ್ರಕಾರ 500.16 ಚದರ ಕಿಲೋ ಮೀಟರ್ ಹುಲಿ ಆವಾಸಸ್ಥಾನವಾದರೆ,  571.84 ಚದರ ಕಿಲೋ ಮೀಟರ್ ಬಫರ್ ಪ್ರದೇಶವನ್ನು ಹೊಂದಿದೆ. ಇಲ್ಲಿ 35ಕ್ಕೂ ಹೆಚ್ಚು ಹುಲಿಗಳು, 116 ಚಿರತೆಗಳು, 445 ಆನೆಗಳಿವೆ. 

ಭದ್ರಾ ಅಭಯಾರಣ್ಯವು ವೈವಿಧ್ಯಮಯದಿಂದ ಕೂಡಿದೆ. ಇದಕ್ಕೆ ಹೊಂದಿಕೊಂಡಂತೆ ಇರುವ ಭದ್ರಾ ಹಿನ್ನೀರು, ವರ್ಷವಿಡೀ ಹಿರಿಯವ ಸೋಮವಾಹಿನಿ ನದಿಯು ಈ ಜೀವ ವೈವಿದ್ಯತೆಯನ್ನು ಹಿಡಿದಿಟ್ಟುಕೊಂಡಿವೆ. 40 ಸಸ್ತನಿಗಳು, 250ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು, 30ಕ್ಕೂ ಹೆಚ್ಚು ಸರೀಸೃಪ ಪ್ರಭೇದಗಳು, 20 ಜಾತಿಯ ಉಭಯಚರಗಳು, 40ಕ್ಕೂ ಹೆಚ್ಚು ರೀತಿಯ ಮೀನುಗಳು, 250 ವಿಧದ ಚಿಟ್ಟೆಗಳಿಗೆ ನೆಲೆಯಾಗಿದೆ.

ಸಂರಕ್ಷಿತ ಪ್ರದೇಶದಲ್ಲಿ 120ಕ್ಕೂ ಹೆಚ್ಚು ವಿಧದ ಮರಗಳಿವೆ ಎಂದು ಅಂದಾಜಿಸಲಾಗಿದೆ. ಅವುಗಳಲ್ಲಿ ಪ್ರಮುಖ ಆಕರ್ಷಣೆಯೆಂದರೆ 350 ವರ್ಷಗಳಷ್ಟು ಹಳೆಯದಾದ ತೇಗದ ಮರ. ಇದು 32 ಮೀಟರ್ ಎತ್ತರ ಮತ್ತು 5.1 ಮೀಟರ್ ಸುತ್ತಳತೆ ಹೊಂದಿರುವ ಮರ ಇದಾಗಿದೆ. ಮುತ್ತೋಡಿ ವಲಯದಲ್ಲಿ ಸಫಾರಿ ಹೋಗುವ ಜನರಿಗೂ ಈ ಜೀವಂತ ದೈತ್ಯ ದರ್ಶನವಾಗುತ್ತದೆ.

ಹುಲಿ ಬೆಕ್ಕು, ಕೆನ್ನಾಯಿ, ಕೆಂದಳಿಲು, ನರಿ, ಕರಡಿ, ಕಾಡು ಕುರಿ, ಕಾಡು ಹಂದಿ, ಕಡವೆ, ಮುಸೆಯಾ, ಕಾಡು ಪಾಪ, ಹಾರುವ ಓತಿ, ಮುಳ್ಳು ಹಂದಿ, ನೀರು ನಾಯಿ, ಪುನುಗಿನ ಬೆಕ್ಕು, ಮೊಸಳೆ ಸೇರಿ ಅಪಾರ ಪ್ರಮಾಣದ ವನ್ಯಜೀವಿ ಸಂಪತ್ತಿದೆ. 25 ವರ್ಷಗಳ ಹಿಂದೆ ಮೂರರಿಂದ ನಾಲ್ಕು ಮಾತ್ರ ಉಳಿದಿದ್ದ ಕಾಟಿಗಳ ಸಂಖ್ಯೆ ಅಚ್ಚರಿಗೊಳ್ಳುವಷ್ಟು ಜಾಸ್ತಿಯಾಗಿವೆ. ಲಕ್ಕವಳ್ಳಿ ವಲಯದ ಸಫಾರಿ ಮತ್ತು ಮುತ್ತೋಡಿ ವಲಯದ ಸಫಾರಿ ವೇಳೆ ಹೇರಳವಾಗಿ ಕಾಣಿಸಿಕೊಳ್ಳುತ್ತವೆ. ಅಲ್ಲದೇ ಎಲ್ಲಾ ವಯಸ್ಸಿನ ಕಾಟಿಗಳು ಇರುವುದು ವಿಶೇಷ ಎನ್ನುತ್ತಾರೆ ಭದ್ರಾ ವನ್ಯಜೀವಿ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ.

ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶಲ್ಲಿ ಜಿಂಕೆಗಳ ಹಿಂಡು
ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶಲ್ಲಿ ಜಿಂಕೆಗಳ ಹಿಂಡು

Cut-off box - ಬೇಸಿಗೆಯಲ್ಲಿ ಪಕ್ಷಿಧಾಮ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಭದ್ರಾ ಜಲಾಶಯದ ಹಿನ್ನೀರು ಬೇಸಿಗೆಯಲ್ಲಿ ಪಕ್ಷಿಧಾಮವಾಗಿಯೂ ಮಾರ್ಪಡುತ್ತದೆ. ಸಾವಿರಾರು ಸಂಖ್ಯೆಯಲ್ಲಿ ವಲಸೆ ಬರುವ ರಿವರ್ ಟರ್ನ್ ಪಕ್ಷಿಗಳು ಹಿನ್ನೀರಿನಲ್ಲಿ ಬೇಸಿಗೆಯಲ್ಲಿ ತೆರೆದುಕೊಳ್ಳುವ ಎರಡು ದ್ವೀಪಗಳಲ್ಲಿ ಬೀಡು ಬಿಡುತ್ತವೆ. ಮೊಟ್ಟೆ ಇಟ್ಟು ವಂಶವೃದ್ಧಿ ಮಾಡಿಕೊಂಡು ಮತ್ತೆ ಮಳೆಗಾಲದ ವೇಳೆಗೆ ಪ್ರಯಾಣ ಬೆಳೆಸುತ್ತವೆ. 

Cut-off box - ವನ್ಯಜೀವಿ ಪ್ರಿಯರ ನೆಚ್ಚಿನ ತಾಣ ವನ್ಯಜೀವಿ ಪ್ರಿಯ ಪ್ರವಾಸಿಗರಿಗೆ ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ಅಚ್ಚುಮೆಚ್ಚಿನ ತಾಣ. ಲಕ್ಕವಳ್ಳಿ ವಲಯ ಮತ್ತು ಮುತ್ತೋಡಿ ವಲಯದಲ್ಲಿ ಎರಡೂ ಕಡೆ ಕಾಡಿನೊಳಗೆ ಕರೆದೊಯ್ದು ಪ್ರಾಣಿಗಳನ್ನು ವೀಕ್ಷಿಸುವ  ಸಫಾರಿ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಮಾಡಿದೆ. ಲಕ್ಕವಳ್ಳಿಯಲ್ಲಿ ಭದ್ರಾ ಹಿನ್ನೀರಿನಲ್ಲಿ ಬೋಟ್ ಸಫಾರಿ ಕೂಡ ಇದೆ. ಮೂರು ಕಡೆಯಿಂದಲೂ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಪ್ರವಾಸಿಗರಿಗೆ ಇದೆ.

Cut-off box - ರಜತ ಮಹೋತ್ಸವ ಇಂದು ಭದ್ರಾ ಹುಲಿ ಸಂರಕ್ಷಿತ ಪ್ರದೇಶ 25 ವರ್ಷಗಳನ್ನು ಸವೆಸಿದೆ. ಈ ವನ್ಯಜೀವಿ ತಾಣ ಇಷ್ಟೊಂದು ಸಂಪದ್ಭರಿತವಾಗಲು ಹಲವರ ಶ್ರಮ ಇದೆ ಎಂದು ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉಪೇಂದ್ರ ಪ್ರತಾಪ ಸಿಂಗ್ ಹೇಳುತ್ತಾರೆ. ಇದಕ್ಕೆ ಕೊಡುಗೆ ನೀಡಿದ ಹಲವರನ್ನು ಗೌರವಿಸ ಕೆಲಸ ಮಾಡಲಾಗುತ್ತಿದೆ. ರಜತ ಮಹೋತ್ಸವ ಕಾರ್ಯಕ್ರಮ ಅ.4ರಂದು ಆಯೋಜಿಸಲಾಗಿದೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT