ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ಖಾಸಗಿ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಜಿಲ್ಲಾಧಿಕಾರಿ

ಕೆಪಿಎಂಇ ಕಾಯ್ದೆ ಅನುಷ್ಠಾನ, ನೋಂದಣಿ ಸಮಿತಿ ಸಭೆ; ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಎಚ್ಚರಿಕೆ
Published 25 ಜುಲೈ 2024, 14:20 IST
Last Updated 25 ಜುಲೈ 2024, 14:20 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮದ (ಕೆಪಿಎಂಇ) ಅನ್ವಯ ನಿಯಮ ಉಲ್ಲಂಘಿಸುವ ಯಾವುದೇ ಖಾಸಗಿ ಕ್ಲಿನಿಕ್, ಆಸ್ಪತ್ರೆ, ನರ್ಸಿಂಗ್ ಹೋಂ, ಪ್ರಯೋಗಶಾಲೆ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನೋಂದಣಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು.

‘ಖಾಸಗಿ ಆಸ್ಪತ್ರೆಗಳನ್ನು ನಿಯಮಾನುಸಾರ ನೋಂದಣಿ ಮಾಡಿಸಿ ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ನೋಂದಣಿ ಇಲ್ಲದೆ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಆಯುಷ್ ಕ್ಲಿನಿಕ್‌ಗೆ ಪರವಾನಗಿ ಪಡೆದು, ಆಲೋಪತಿ ಚಿಕಿತ್ಸೆ ನೀಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ನೋಂದಣಿಯಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಆಸ್ಪತ್ರೆ ಹಾಗೂ ಕ್ಲಿನಿಕ್‌ಗಳನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಆರಂಭಿಸಬೇಕು. ಕೂಡಲೇ ಅಂತಹ ಕ್ಲಿನಿಕ್‌ಗಳನ್ನು ಮುಚ್ಚಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕ್ರಮ ವಹಿಸಬೇಕು. ನಕಲಿ ವೈದ್ಯರ ಸಂಖ್ಯೆ ಹೆಚ್ಚಳವಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದರು.

ದರಪಟ್ಟಿ ಪ್ರದರ್ಶನ ಕಡ್ಡಾಯ:

‘ಪರವಾನಗಿ ಪತ್ರ, ಚಿಕಿತ್ಸಾ ದರಪಟ್ಟಿ ಪ್ರದರ್ಶನ ಕಡ್ಡಾಯವಾಗಿ ಮಾಡಬೇಕು. ಖಾಸಗಿ ಆಸ್ಪತ್ರೆ, ಕ್ಲಿನಿಕ್, ಲ್ಯಾಬೋರೇಟರಿ, ರಕ್ತ ನಿಧಿ ಕೇಂದ್ರಗಳ ಮುಂದೆ ಕೆಪಿಎಂಇ ಪರವಾನಗಿಯನ್ನು ಪ್ರದರ್ಶಿಸಬೇಕು. ಅಲೋಪತಿ ನೋಂದಣಿ ಪರವಾನಗಿ ಫಲಕವು ಆಕಾಶ ನೀಲಿ ಬಣ್ಣದಲ್ಲಿರಬೇಕು. ಆರ್ಯುವೇದ ನೋಂದಣಿ ಪರವಾನಗಿ ಫಲಕವನ್ನು ತಿಳಿ ಹಸಿರು ಬಣ್ಣದಲ್ಲಿಯೇ ಹಾಕಬೇಕು’ ಎಂದು ಸೂಚಿಸಿದರು.

‘ಖಾಸಗಿ ವೈದ್ಯಕೀಯ ಸಂಸ್ಥೆಗಳ ಪ್ರವೇಶ, ಪರಿಶೀಲನೆಗಾಗಿ ನೇಮಿಸಲಾದ ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು. ಕಾಯ್ದೆ ಅನುಷ್ಠಾನದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳ 200 ಮೀಟರ್ ಅಂತರದಲ್ಲಿ ಖಾಸಗಿ ಚಿಕಿತ್ಸಾ ಪ್ರಯೋಗಾಲಯಗಳಿಗೆ ಅನುಮತಿ ನೀಡುವಂತಿಲ್ಲ. ಈ ವಿಷಯದಲ್ಲಿ ನಿಯಮ ಪಾಲನೆಯಾಗುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು’ ಎಂದು ಸೂಚಿಸಿದರು.

ಡೆಂಗಿ ಪರೀಕ್ಷೆ ಪರಿಷ್ಕೃತ ದರ ನಿಗದಿ: ‘ಡೆಂಗಿ ಜ್ವರ ಪತ್ತೆ ಹಚ್ಚುವ ಡ್ಯೆಂಡಿ ಎಲಿಸಾ ಎನ್.ಎಸ್ – 1 ಹಾಗೂ ಐಜಿಎಂ ಪರೀಕ್ಷೆಗಳಿಗೆ ₹ 300 ದರ ನಿಗದಿ ಮಾಡಲಾಗಿದೆ. ರ‍್ಯಾಪಿಡ್ ಕಾರ್ಡ್ ಪರೀಕ್ಷೆಗೆ ₹ 250 ದರ ನಿಗದಿ ಮಾಡಿ ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ. ಖಾಸಗಿ ಆಸ್ಪತ್ರೆ, ಪ್ರಯೋಗಾಲಯ ಹಾಗೂ ಡಯಾಗ್ನೋಸ್ಟಿಕ್ ಕೇಂದ್ರಗಳು ಈ ದರದಲ್ಲಿಯೇ ಡೆಂಗಿ ಪರೀಕ್ಷೆ ನಡೆಸಬೇಕು. ರೋಗಿಗಳಿಂದ ಹೆಚ್ಚಿನ ಹಣ ಪಡೆಯುವಂತಿಲ್ಲ’ ಎಂದು ಹೇಳಿದರು.

‘ಖಾಸಗಿ ಪ್ರಯೋಗಾಲಯಗಳಲ್ಲಿ ಹೆಚ್ಚಿನ ಹಣ ಪಡೆಯುತ್ತಿದ್ದರೆ ಅವುಗಳ ವಿರುದ್ಧ ಪ್ರಕರಣ ದಾಖಲು ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ನಿಯಮ ಉಲ್ಲಂಘನೆ ಮಾಡದಂತೆ ಅಧಿಕಾರಿಗಳು ಪ್ರಯೋಗಾಲಯಗಳಿಗೆ ತೆರಳಿ ಪರಿಶೀಲನೆ ಮಾಡಬೇಕು. ಆಗಾಗ ಡಯಾಗ್ನೋಸ್ಟಿಕ್‌ ಕೇಂದ್ರಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಬೇಕು’ ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿ ಎಂ.ಕಾರ್ತಿಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರೇಣುಪ್ರಸಾದ್, ಭಾರತೀಯ ವೈದ್ಯಕೀಐ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಪಿ.ಟಿ.ವಿಜಯ್‌ಕುಮಾರ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ಎನ್‌ಜಿಒ ಪ್ರತಿನಿಧಿ ಕೆ.ಪಿ.ಮೀನಾಕ್ಷಿ, ಪೂಜಾರ್‌ ಎಚ್‌.ಬಿ. ಇದ್ದರು.

ಆಯುರ್ವೇದ ಅನುಮತಿಗೆ ಅಲೋಪತಿ ಚಿಕಿತ್ಸೆ ಇಲ್ಲ ನಿಯಮ ಉಲ್ಲಂಘನೆ ಪತ್ತೆ ಹಚ್ಚುವಂತೆ ಸೂಚನೆ ದರಪಟ್ಟಿ, ನೋಂದಣಿ ಪ್ರತಿ ಪ್ರದರ್ಶನ ಕಡ್ಡಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT