ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊಳಕಾಲ್ಮುರು | ಬಡಾವಣೆಗಳಿಗೆ ಇಲ್ಲ ‘ಸ್ವಚ್ಛತಾ ಭಾಗ್ಯ’; ರೋಗಭೀತಿ

ಸೊಳ್ಳೆ, ನೊಣಗಳ ಹಾವಳಿ ತೀವ್ರ, ಅನಾರೋಗ್ಯಕ್ಕೆ ಒಳಗಾಗುತ್ತಿರುವ ಜನ
Published 20 ಜುಲೈ 2024, 7:27 IST
Last Updated 20 ಜುಲೈ 2024, 7:27 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಪಟ್ಟಣದಲ್ಲಿ ಸ್ವಚ್ಛತೆ ಕೊರತೆ ಹೆಚ್ಚುತ್ತಿರುವ ಪರಿಣಾಮ ಸೊಳ್ಳೆ, ನೊಣಗಳ ಹಾವಳಿ ತೀವ್ರವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಎದುರಾಗಿದೆ.

ಹಲವು ವರ್ಷಗಳಿಂದಲೂ ರಾಯದುರ್ಗ ರಸ್ತೆಯಲ್ಲಿರುವ ಬನ್ನಿ ಮಹಾಂಕಾಳಿ ಬಡಾವಣೆ, ಪಲ್ಲಳ್ಳಿ ತಿಮ್ಮಪ್ಪ ಬಡಾವಣೆ, ಕೋಟೆ ಬಡಾವಣೆ, ಅಂಬೇಡ್ಕರ್‌ ಬಡಾವಣೆ, ಮುಬಾಕರ್‌ ಮೊಹಲ್ಲಾ, ಸರ್ಕಾರಿ ಆಸ್ಪತ್ರೆ ರಸ್ತೆ, ಶ್ರೀನಿವಾಸನಾಯಕ ಬಡಾವಣೆಯಲ್ಲಿ ಸ್ವಚ್ಛತೆ ಕೊರತೆ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದೆ. 

ಇಲ್ಲಿಯ ವ್ಯವಸ್ಥೆ ಸರಿಪಡಿಸುವಂತೆ ಹಲವು ಬಾರಿ ಜನರು ಪ್ರತಿಭಟನೆ ಮಾಡಿದ್ದಾರೆ. ಆದರೂ ಸಮಸ್ಯೆ ಯಥಾ ರೀತಿಯಲ್ಲಿ ಇದೆ ಎನ್ನುವುದು ನಿವಾಸಿಗಳ ಆರೋಪ. ಎನ್‌ಎಂಎಸ್‌ ಬಡಾವಣೆಯಲ್ಲಿ ರಸ್ತೆಗಳು ಸರಿಯಿಲ್ಲ. ಚರಂಡಿಗಳನ್ನು ನೆಲಮಟ್ಟಕ್ಕಿಂತ ಕೆಳಗೆ ಅವೈಜ್ಞಾನಿಕವಾಗಿ ಮತ್ತು ಕಿರಿದಾಗಿ ನಿರ್ಮಿಸಲಾಗಿದೆ.

ಈ ಚರಂಡಿಗಳು ನೀರು ಹರಿಯದೇ ಹೂಳು ತುಂಬಿಕೊಂಡು ಸೊಳ್ಳೆ ಉತ್ಪತ್ತಿ ತಾಣವಾಗಿ ಪರಿಣಮಿಸಿ, ಹಂದಿಗಳು, ನಾಯಿಗಳು, ಬಿಡಾಡಿ ದನಗಳ ಆಶ್ರಯ ತಾಣವಾಗಿವೆ. ಇದರಿಂದ ಸೊಳ್ಳೆ ಸಂಖ್ಯೆ ಹೆಚ್ಚಳವಾಗಿ ಜನರು ಪದೇಪದೇ ಅನಾರೋಗ್ಯಕ್ಕೆ ಈಡಾಗುವಂತಾಗಿದೆ ಎಂಬುದು ನಿವಾಸಿ ಶ್ರೀನಿವಾಸ್‌ ದೂರು.

ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಸ್ವಚ್ಛತೆ ಮಾಡುತ್ತಿಲ್ಲ, ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದು ಹೊಸಬರ ನೇಮಕವಾಗಿಲ್ಲ. ಇದು ಸಹ ಕೆಲವು ತಾಂತ್ರಿಕ ಸಮಸ್ಯೆಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಅವರು ಹೇಳಿದರು.

ಸಾರ್ವಜನಿಕ ಆಸ್ಪತ್ರೆ ಪಕ್ಕದಲ್ಲಿರುವ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ರಸ್ತೆಯಲ್ಲಿ ಸಾಕಷ್ಟು ಮಳೆ ನೀರು ನಿಲ್ಲುತ್ತದೆ. ಪಟ್ಟಣ ಪಂಚಾಯಿತಿ ಮುಂಭಾಗದ ಮತ್ತು ಪಕ್ಕದಲ್ಲಿರುವ ಕ್ಷೇತ್ರ ಮಾದರಿ ಶಾಲಾ ಆವರಣದಲ್ಲಿ ಸಾಕಷ್ಟು ತ್ಯಾಜ್ಯ ಬಿದ್ದಿರುವ ಜತೆಗೆ ಹಂದಿಗಳ ತಾಣವಾಗಿದ್ದರೂ ಹೊಣೆ ಹೊತ್ತವರು ಸುಮ್ಮನಿದ್ದಾರೆ. ಮೇಲ್ನೋಟಕ್ಕೆ ಬ್ಲೀಚಿಂಗ್‌ ಪುಡಿ
ಸಿಂಪರಣೆ ಮಾಡಿ ಕೈತೊಳೆದುಕೊಳ್ಳಲಾಗುತ್ತಿದೆ ಎಂಬ ದೂರುಗಳಿವೆ.

ಎನ್‌ಎಂಎಸ್‌ ಬಡಾವಣೆ ಹಾಗೂ ಪಲ್ಲಳ್ಳಿ ತಿಮ್ಮಪ್ಪ ಬಡಾವಣೆಗಳ ಸುತ್ತಮುತ್ತ ಜಮೀನುಗಳು, ಖಾಲಿ ನಿವೇಶನಗಳು ಹೆಚ್ಚಾಗಿರುವ ಕಾರಣ ಜಾಲಿಗಿಡಗಳು ಬೆಳೆದುಕೊಂಡಿವೆ. ಇದು ಸೊಳ್ಳೆ ಕಾಟ ಹೆಚ್ಚಲು ಕಾರಣವಾಗಿದೆ. ಫಾಗಿಂಗ್‌ ಮಾಡಿಸಿದಲ್ಲಿ ಉಸಿರಾಟ ಸಮಸ್ಯೆ ಆಗುತ್ತದೆ ಎಂಬ ದೂರಿನ ಕಾರಣ ಫಾಗಿಂಗ್‌ ಮಾಡಿಸಿಲ್ಲ ಎಂದು ಸದಸ್ಯರೊಬ್ಬರು ಹೇಳಿದರು.

‘ಪಟ್ಟಣ ಪಂಚಾಯಿತಿಯ ಫಾಗಿಂಗ್‌ ಯಂತ್ರ ಕೆಟ್ಟು ಹೋಗಿದೆ. ಒಂದೆರೆಡು ದಿನದಲ್ಲಿ ಫಾಗಿಂಗ್‌ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು‘ ಎಂದು ಪ.ಪಂ. ಸದಸ್ಯ ಎಸ್‌.ಖಾದರ್‌ ತಿಳಿಸಿದರು.

‘ನಾಳೆಯೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಭೆ ಕರೆದು ಸಾಂಕ್ರಾಮಿಕ ರೋಗ ತಡೆಯಲು ಸ್ವಚ್ಛತೆ, ಮುಂಜಾಗ್ರತಾ ಕ್ರಮಗಳ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು‘ ಎಂದು ತಹಶೀಲ್ದಾರ್‌ ಟಿ.ಜಗದೀಶ್‌ ಹೇಳಿದರು. 

ಬಾಲಕ ಸಾವು; ಡೆಂಗಿ ಶಂಕೆ ಎನ್‌ಎಂಎಸ್‌ ಬಡಾವಣೆಯಲ್ ನಿವಾಸಿ ಬಾಲಕ ಶಾಹಿದ್‌ (5)  ಜ್ವರದಿಂದ ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟಿದ್ದಾನೆ. ಶಂಕಿತ ಡೆಂಗಿಯಿಂದ ಸಾವು ಸಂಭವಿಸಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ‘ಡೆಂಗೆ ಬಗ್ಗೆ ಖಚಿತವಾಗಿಲ್ಲ‌‘ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಮಧುಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT