ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

LS Polls | ‘ಕೈ’ ಮತಬುಟ್ಟಿ ಹಿಗ್ಗಿಸಿದ ‘ಗ್ಯಾರಂಟಿ’: ಬಿ.ಎನ್‌.ಚಂದ್ರಪ್ಪ

Published : 19 ಏಪ್ರಿಲ್ 2024, 5:02 IST
Last Updated : 19 ಏಪ್ರಿಲ್ 2024, 5:02 IST
ಫಾಲೋ ಮಾಡಿ
Comments
ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ ಅವರು ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಸ್ಪರ್ಧಿಸಿದ್ದಾರೆ. ಚುನಾವಣೆ ಎದುರಿಸುತ್ತಿರುವ ರೀತಿ ಕ್ಷೇತ್ರ ಅಭಿವೃದ್ಧಿಯ ಕನಸು ಸಂಸದರಾಗಿದ್ದಾಗ ಮಾಡಿದ ಕಾರ್ಯಗಳ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.
ಪ್ರ

ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಕಣಕ್ಕೆ ಇಳಿದಿದ್ದೀರಿ. ಮತದಾರರು ನಿಮ್ಮನ್ನು ಏಕೆ ಆಯ್ಕೆ ಮಾಡಬೇಕು?

ಹತ್ತು ವರ್ಷಗಳಿಂದ ಚಿತ್ರದುರ್ಗ ಕ್ಷೇತ್ರದ ಜನರ ಜೊತೆಗಿದ್ದೇನೆ. ಸಂಸದನಾಗಿ ಕೆಲಸ ಮಾಡಿ ಬದ್ಧತೆ ತೋರಿಸಿದ್ದೇನೆ. ಪರಾಭವಗೊಂಡ ಬಳಿಕವೂ ಜನರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಪಕ್ಷಕ್ಕೆ ದುಡಿದಿದ್ದೇನೆ. ಇನ್ನಷ್ಟು ಸೇವೆ ಮಾಡಲು ಜನರು ಅವಕಾಶ ಮಾಡಿಕೊಡಬೇಕು ಎಂದು ಅಪೇಕ್ಷಿಸಿದ್ದೇನೆ.

ಪ್ರ

ಮಾಜಿ ಸಂಸದರೂ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿದ್ದ ನೀವು ಪಕ್ಷದ ಟಿಕೆಟ್‌ ಪಡೆಯಲು ಕಷ್ಟವಾಯಿತು ಅನಿಸಲಿಲ್ಲವೇ?

ಟಿಕೆಟ್‌ ವಿಚಾರದಲ್ಲಿ ಯಾವುದೇ ತೊಂದರೆಯಾಗಿಲ್ಲ. ನಾನು ಯಾರ ಬಳಿಯೂ ಲಾಬಿ ಮಾಡಲಿಲ್ಲ. ಅರ್ಹತೆ ಇದ್ದರೆ ಪಕ್ಷ ಗುರುತ್ತಿಸುತ್ತದೆ ಎಂಬ ವಿಶ್ವಾಸವಿತ್ತು. ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ವದಂತಿಗಳನ್ನು ಹರಡಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಿದರು. ಆದರೆ, ಇದು ಪ್ರಯೋಜನವಾಗಲಿಲ್ಲ. ಸ್ಪರ್ಧೆಯ ಅವಕಾಶ ಬಯಸಿ ಹಲವು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದರೂ ಪಕ್ಷಕ್ಕೆ ನನ್ನ ಮೇಲೆ ಒಲವಿತ್ತು. ಕೆಪಿಸಿಸಿ ಕೂಡ ಒಂದೇ ಹೆಸರನ್ನು ದೆಹಲಿ ವರಿಷ್ಠರಿಗೆ ಶಿಫಾರಸು ಮಾಡಿತ್ತು.

ಪ್ರ

ನೀವು ಕ್ಷೇತ್ರದ ಹೊರಗಿನವರು ಎಂಬ ಆರೋಪ ಇದೆ. ‘ಸ್ಥಳೀಯ ಅಭ್ಯರ್ಥಿ’ಗೆ ಅವಕಾಶ ಸಿಗಲಿಲ್ಲವೆಂಬ ಅಸಮಾಧಾನ ಕೆಲ ನಾಯಕರಲ್ಲಿದೆ. ಈ ಬಂಡಾಯ ಸರಿಹೋದಂತೆ ಕಾಣುತ್ತಿಲ್ಲವಲ್ಲಾ?

ಬಂಡಾಯ ಮತ್ತು ಅಸಮಾಧಾನ ಎಲ್ಲಿದೆ? ಕುತಂತ್ರ ಮಾಡಿದವರ ಬಗ್ಗೆ ಜನರಿಗೆ ಗೊತ್ತಾಗಿದೆ. ಈ ಬಗ್ಗೆ ಮಾತನಾಡುವುದು ಈಗ ಅಪ್ರಸ್ತುತ.

ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ದಾಟಿದರೆ ನನ್ನೂರು. ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿಯ ಭದ್ರಾ ಜಲಾಶಯದ ಮಡಿಲಲ್ಲಿ ಬೆಳೆದವನು ನಾನು. ಕೆಲವು ಶಕ್ತಿಗಳು ‘ಮೂಡಿಗೆರೆ ಚಂದ್ರಪ್ಪ’ ಎಂಬ ಅಪಪ್ರಚಾರ ಮಾಡಿವೆ. ನಾನು ಕೂಡ ಸ್ಥಳೀಯ, ಹೊರಗಿನವನಲ್ಲ.

ಪ್ರ

ಚುನಾವಣೆ ಸಮೀಪಿಸಿದಾಗ ನಿಮ್ಮ ಜಾತಿಯ ವಿಚಾರ ಚರ್ಚೆಗೆ ಬರುತ್ತದೆ. ನೀವು ನಿಜವಾಗಿಯೂ ಮಾದಿಗ ಸಮುದಾಯಕ್ಕೆ ಸೇರಿದವರಲ್ಲವೇ?

ಮಾದಿಗ ಸಮುದಾಯಕ್ಕೆ ಸೇರದವರು ಈ ಆರೋಪ ಮಾಡುತ್ತಿರುವುದು ದುರ್ದೈವ. ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿರುವ ಕಾರಣಕ್ಕೆ ಇಂತಹ ಆರೋಪಗಳಿಗೆ ಕಿವಿಗೊಟ್ಟಿರಲಿಲ್ಲ. ಆದರೆ, ಜಾತಿ ಪ್ರಮಾಣ ಪತ್ರ, ಶಾಲಾ ದಾಖಲಾತಿ ತಿದ್ದಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದೇನೆ. ಈಗ ಜನರಿಗೆ ಎಲ್ಲವೂ ಅರ್ಥವಾಗಿದೆ.

ಸ್ವಂತಿಕೆ ಇಲ್ಲದವರು ಜಾತಿ ಹೆಸರು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಾರೆ. ಅಪ್ಪಟ ಮಾದಿಗ ಸಮಾಜದಲ್ಲಿ ಹುಟ್ಟಿದ್ದೇನೆ. ಆದರೆ, ಕುವೆಂಪು, ಬಸವಣ್ಣ, ಕನಕದಾಸರು, ನಾರಾಯಣಗುರುಗಳಂತಹ ದಾರ್ಶನಿಕರ ಪ್ರಭಾವಕ್ಕೆ ಒಳಗಾಗಿ ಅವರ ಹಾದಿಯಲ್ಲಿ ನಡೆಯಬೇಕು ಎಂದು ಬಯಸಿದವನು ನಾನು. ಜಾತಿ ಮುಂದಿಟ್ಟುಕೊಂಡು ರಾಜಕಾರಣ ಮಾಡಬಾರದು ಎಂದು ನಿರ್ಧರಿಸಿದ್ದೇನೆ.

ಪ್ರ

2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆಗಿದ್ದ ಜೆಡಿಎಸ್‌ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಬಿಜೆಪಿ–ಜೆಡಿಎಸ್‌ ಮೈತ್ರಿಯನ್ನು ಹೇಗೆ ಎದುರಿಸುತ್ತೀರಿ?

ಇದೊಂದು ಅಪವಿತ್ರ ಮೈತ್ರಿ. ‘ಜಾತ್ಯತೀತ’ ಎಂದು ಹೇಳಿಕೊಂಡು ಮನುವಾದಿಗಳೊಂದಿಗೆ ಕೈಜೋಡಿಸಿದ ಜೆಡಿಎಸ್‌ ನಿಲುವು ಆ ಪಕ್ಷದ ಸದಸ್ಯರಿಗೆ ಇಷ್ಟವಾಗಿಲ್ಲ. ಜಾತ್ಯತೀತ ನಿಲುವು ಹೊಂದಿದ ಮುಖಂಡರು, ಸದಸ್ಯರು ಕಾಂಗ್ರೆಸ್‌ ಜೊತೆಗೆ ಗುರುತಿಸಿಕೊಳ್ಳುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ನಮ್ಮೊಂದಿಗಿದ್ದ ಜೆಡಿಎಸ್‌, ಈ ಚುನಾವಣೆಯಲ್ಲಿ ಬಿಜೆಪಿ ಜೊತೆಗಿದೆ. ಜಿಲ್ಲಾ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಯಾರ ಜೊತೆಗೆ ಇರುತ್ತಾರೋ ಗೊತ್ತಿಲ್ಲ. ಕ್ಷೇತ್ರದ ಮತದಾರರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಚುನಾವಣೆಯ ಫಲಿತಾಂಶದ ಮೇಲೆ ಮೈತ್ರಿ ಪ್ರಭಾವ ಬೀರುವುದಿಲ್ಲ.

ಪ್ರ

ಲೋಕಸಭಾ ಚುನಾವಣೆಗೂ ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ನಂಬಿಕೊಂಡಿದ್ದೀರಿ. ಗ್ಯಾರಂಟಿಗಳು ಮತ ತಂದುಕೊಡುವ ವಿಶ್ವಾಸವಿದೆಯೇ?

ವಿಧಾನಸಭಾ ಚುನಾವಣೆಯಲ್ಲಿ ‘ಗ್ಯಾರಂಟಿ’ ಭರವಸೆ ನೀಡಿದ್ದೇವು. ಕಾಂಗ್ರೆಸ್‌ ವಿತರಿಸಿದ ಕಾರ್ಡ್‌ ಮೇಲೆ ಭರವಸೆ ಇಟ್ಟು ಜನರು ಮತ ನೀಡಿದರು. ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿರುವುದರಿಂದ ಕಾಂಗ್ರೆಸ್‌ ಮೇಲೆ ಜನರಿಗೆ ವಿಶ್ವಾಸ ಮೂಡಿದೆ. ನುಡಿದಂತೆ ನಡೆದ ಪರಿಣಾಮವಾಗಿ ವಿಧಾನಸಭಾ ಚುನಾವಣೆಯಂತೆ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‌ ಮತಬುಟ್ಟಿ ಹಿಗ್ಗಲಿದೆ.

ಪ್ರ

ಚುನಾವಣಾ ಕಣದಲ್ಲಿ ನರೇಂದ್ರ ಮೋದಿ ಪ್ರಭಾವವನ್ನು ಹೇಗೆ ಎದುರಿಸುತ್ತಿದ್ದೀರಿ?

ಪ್ರಧಾನಿ ನರೇಂದ್ರ ಮೋದಿ ಪ್ರಭಾವ ಚಿತ್ರದುರ್ಗ ಕ್ಷೇತ್ರದಲ್ಲಿ ಕಾಣುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಸುಳ್ಳು ಆಶ್ವಾಸನೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸಿದ್ದಾರೆ. ದೇಶದ ಯಾವುದೇ ಕುಟುಂಬಕ್ಕೆ ಇವರಿಂದ ಸಹಾಯವಾಗಿಲ್ಲ. ಮೋದಿ ಮುಳುಗುವ ಹೊತ್ತು ಸಮೀಪಿಸುತ್ತಿದೆ.

ಪ್ರ

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಅನುದಾನ ನೀಡುತ್ತಿಲ್ಲವೆಂದು ಕಾಂಗ್ರೆಸ್ ಮುಗಿಬಿದ್ದಿದೆ. ಯೋಜನೆಯನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್ ನಿರ್ಲಕ್ಷ್ಯ ತೋರಿದೆ ಎಂಬ ಆರೋಪ ಇದೆಯಲ್ಲ?

ಆರೋಪ ಮಾಡುವುದರಲ್ಲಿ ಬಿಜೆಪಿ ನಾಯಕರು ನಿಸ್ಸೀಮರು. ನೀರಘಂಟಿಯ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ನಾನು ಸಂಸದನಾಗಿದ್ದ ಅವಧಿಯಲ್ಲಿಯೇ ‘ಭದ್ರಾ ತಾಯಿ’ ವಾಣಿವಿಲಾಸ ಜಲಾಶಯ ತಲುಪಿದಳು. ಈ ಸಂದರ್ಭದಲ್ಲಿ ಬಿಜೆಪಿ ಗಲಾಟೆ ಮಾಡಿತ್ತು. ಭದ್ರಾ ನೀರು ಜಿಲ್ಲೆಗೆ ಬರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಶ್ರಮವಿದೆ. ₹ 5300 ಕೋಟಿ ಅನುದಾನವನ್ನು ಕೇಂದ್ರದಿಂದ ಮೊದಲು ತನ್ನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT