ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾಮಿಗಳು ರಾಜಕೀಯ ಮಾಡಬಾರದು

‘ವಚನ ಕಮ್ಮಟ’ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
Published : 3 ಜುಲೈ 2024, 15:58 IST
Last Updated : 3 ಜುಲೈ 2024, 15:58 IST
ಫಾಲೋ ಮಾಡಿ
Comments

ಹೊಸದುರ್ಗ: ‘ಸ್ವಾಮಿಗಳಾದವರು ಮಾರ್ಗದರ್ಶನ ಮಾಡಬೇಕೇ ಹೊರತು ರಾಜಕೀಯ ಮಾಡಬಾರದು. ಮಠಾಧೀಶರಿಗೆ ಮಾಡಬೇಕಾದ ಕೆಲಸಗಳು ಬೇಕಾದಷ್ಟಿವೆ. ಅವುಗಳನ್ನು ಮಾಡುವುದು ಬಿಟ್ಟು ಅನ್ಯ ಕೆಲಸಗಳಿಗೆ ಕೈಹಾಕಿದರೆ ತಪ್ಪು ದಾರಿ ತುಳಿಯಲಿಕ್ಕೆ ದಾರಿಯಾಗುತ್ತದೆ. ಆದ್ದರಿಂದ ಗುರುವಾದವರು ಮೈಯೆಲ್ಲಾ ಕಣ್ಣಾಗಿರಬೇಕು’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿಯಲ್ಲಿನ ಶಾಮನೂರು ಶಿವಶಂಕರಪ್ಪ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ‘ವಚನ ಕಮ್ಮಟ’ ಮೂರನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾನವನ ಮೂಲ ಅಗತ್ಯಗಳನ್ನು ಪೂರೈಸಿದರೆ ಆದರ್ಶ ಪಥದತ್ತ ಸಾಗಲು ಸಾಧ್ಯ. ಬಸವಣ್ಣನವರು ನಡೆ, ನುಡಿ, ಉಡುವುದನ್ನು ಕಲಿಸಿದರು. ಬಸವತತ್ವದ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದ್ದು ಲಿಂಗಾಯತ ಧರ್ಮ. ಬಸವಣ್ಣನವರ ತತ್ವ ಸಿದ್ಧಾಂತಗಳು ಲಿಂಗಾಯತ ಧರ್ಮ ಹುಟ್ಟಿಗೆ ಕಾರಣವಾದವು’ ಎಂದು ಪ್ರತಿಪಾದಿಸಿದರು.

‘ಕಾವಿ ಧರಿಸಿದವರ ಬದುಕು ಹೇಗಿದೆ ಎನ್ನುವುದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಪ್ರತಿಯೊಬ್ಬರು ಅಂತರಂಗದ ಶುದ್ಧಿಗೆ ಹೆಚ್ಚು ಒತ್ತು ಕೊಡಬೇಕು. ಬಹಳಷ್ಟು ಜನ ಅರಿಷಡ್ವರ್ಗಗಳನ್ನು ತುಂಬಿಕೊಂಡು ತಮ್ಮ ದೇಹವನ್ನು ಚರಂಡಿ ಮಾಡಿಕೊಂಡಿದ್ದಾರೆ. ಬಹಿರಂಗವಾಗಿ ಕಾವಿ ಹಾಕಿಕೊಳ್ಳುವುದು ಮುಖ್ಯವಲ್ಲ. ತಮ್ಮ ಕಾಮನೆಗಳಿಗೆ ಕಾವಿಹಾಕಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಲಿಂಗಾಯತ ಸ್ವಾಮಿಗಳಾದವರು ಜಿತೇಂದ್ರಿಯಗಳ ಮೇಲೆ ಹಿಡಿತವನ್ನು ಸಾಧಿಸಬೇಕು. ಕಾವಿಧಾರಿಗಳು ಕಾಮನೆಗಳ ಹಿಂದೆ ಓಡಬಾರದು. ತಮ್ಮ ಕಾಮನೆಗಳನ್ನು ತಾವೇ ನಿಯಂತ್ರಣ ಮಾಡಿಕೊಳ್ಳಬೇಕು. ಮನೋನಿಯಂತ್ರಣ ಇದ್ದರೆ ಏಕಾಂತ ಶ್ರೇಷ್ಠ. ಮನೋನಿಯಂತ್ರಣ ದಾರಿತಪ್ಪಿದರೆ ಏಕಾಂತ ಕನಿಷ್ಠ. ಆದ್ದರಿಂದ ಮನಸ್ಸಿನ ಮೇಲೆ ಹಿಡಿತ ಸಾಧಿಸಬೇಕು. ಪರಸ್ತ್ರೀಯನ್ನು ಕಣ್ಣೆತ್ತಿಯೂ ನೋಡಬಾರದು ಎನ್ನುವ ಗುರುಶ್ರೇಷ್ಠತೆಯನ್ನು ಕಾಪಾಡಿಕೊಳ್ಳಬೇಕು’ ಎಂದು ಹೇಳಿದರು.

‘ವೈದಿಕ ಆಚರಣೆಗಳು ತುಂಬಾ ಆಳವಾಗಿ ನಮ್ಮನ್ನು ಆಳುತ್ತಾ ಇವೆ. ಇದರಿಂದ ಮುಕ್ತರಾಗಬೇಕೆಂದರೆ ಬಸವತತ್ವಗಳಿಗೆ ಹೆಚ್ಚು ಹೆಚ್ಚು ಅಂಟಿಕೊಳ್ಳಬೇಕು. ಕಾವಿಧಾರಿಗಳು ಪಾರದರ್ಶಕತನ ರೂಢಿಸಿಕೊಳ್ಳಬೇಕು. ಬಸವಣ್ಣನವರ ಏಳು ಸೂತ್ರಗಳನ್ನು ನಾವು  ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಲಿಂಗಾಯತ ಧರ್ಮದಲ್ಲಿ ಮಠಾಧಿಪತಿಗಳ ಪಾತ್ರವಿಲ್ಲ. ಕಾಯಕಜೀವಿಗಳ, ತಳವರ್ಗದವರ ಪಾತ್ರ ತುಂಬಾ ಇದೆ. ಕಾವಿಧಾರಿಗಳಾದ ನಾವು ನಮ್ಮ ಜವಾಬ್ದಾರಿಗಳೇನು ಎನ್ನುವುದು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕು. ಭಕ್ತರ ಮನೆಗಳೆಲ್ಲಾ ಮಠಗಳಾಗಬೇಕೆಂಬುದು ಶರಣರ ಆಶಯವಾಗಿತ್ತು. ಕಾವಿಧಾರಿಗಳು ಕಾಲಿಗೆ ಬೀಳಿಸಿಕೊಳ್ಳುವ ಯೋಗ್ಯತೆ ನನ್ನಲ್ಲಿ ಇದೆಯಾ ಎಂದು ಆಲೋಚನೆ ಮಾಡಿ ಕಾಲಿಗೆ ಬೀಳಿಸಿಕೊಳ್ಳಬೇಕು. ಈಗಲೂ ವೈದಿಕ ಪರಂಪರೆಯ ವಾರಸುದಾರರ ಹಾಗೆ ಮಠಾಧಿಪತಿಗಳು ಇದ್ದಾರೆ. ಯಾವುದೇ ಆಚರಣೆಗಳನ್ನು ವಚನ ಸಾಹಿತ್ಯದ ಹಿನ್ನೆಲೆಯಲ್ಲಿ ಜಾರಿಗೆ ತರಬೇಕು. ಇತ್ತೀಚಿಗೆ ಗದ್ದುಗೆಯ ಪವಾಡಗಳು ಹೆಚ್ಚಾಗುತ್ತಿವೆ’ ಎಂದು ಹೇಳಿದರು.

‘ಆತ್ಮ ನಿವೇದನೆ’ ಕೃತಿ ಕುರಿತು ಸಾಹಿತಿ ಲೋಕೇಶ್ ಅಗಸನಕಟ್ಟೆ ಮಾತನಾಡಿ, ‘ಕನ್ನಡ ಸಾಹಿತ್ಯದಲ್ಲಿ ‘ಆತ್ಮನಿವೇದನೆ’ಯ ರೀತಿಯಲ್ಲಿ ಯಾವ ಸಾಹಿತ್ಯವೂ ಬಂದಿಲ್ಲ, ಇದೊಂದು ಅಪರೂಪದ ಕೃತಿ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ಜನರನ್ನು ಪ್ರೀತಿಸಿದಷ್ಟು ಬೇರೆ ಇನ್ಯಾವ ಮಠಾಧೀಶರು ಇಲ್ಲ. ಯೋಗ್ಯತೆ ಇದ್ದವರು ಬಹಳಷ್ಟು ಜನ ಇರಬಹುದು. ಆದರೆ, ಯೋಗ್ಯತೆಯನ್ನು ಸಾಧಿಸಿದವರು ಕೆಲವರು. ಅಂಥವರಲ್ಲಿ ಶಿವಕುಮಾರ ಶ್ರೀಗಳು ಒಬ್ಬರು. ಇಂದು ಮನುಷ್ಯನ ಮನಸ್ಸು ವಿಷಮಗೊಂಡಿದೆ. ಬಸವಣ್ಣನವರು ಎಲ್ಲರನ್ನೂ ಒಂದುಗೂಡಿಸಿದರು. ಆದರೆ ಇಂದು ಜಾತಿಗೊಂದು ಮಠ ನಿರ್ಮಾಣ ಮಾಡಿಕೊಂಡಿದ್ದು ಬಸವಣ್ಣನವರಿಗೆ ಮಾಡಿದ ಅಪಮಾನ’ ಎಂದು ಹೇಳಿದರು.

ಮೈಸೂರಿನ ಶರಶ್ಚಂದ್ರ ಸ್ವಾಮೀಜಿ ‘ಕರಣ ಹಸಿಗೆ’ ಕೃತಿ ಕುರಿತು ಮಾತನಾಡಿದರು. ‘ವಚನಕಾರರ ನೆಲೆಯಲ್ಲಿ ಪಾಪ– ಪುಣ್ಯ, ಸ್ವರ್ಗ– ನರಕ’ ವಿಷಯ ಕುರಿತಂತೆ ಚಿಂತಕಿ ಎಂ.ಎಸ್.ಆಶಾದೇವಿ ಮಾತನಾಡಿದರು.

ಸಾಹಿತಿ ಬಸವರಾಜ ಸಾದರ ಕಾರ್ಯಕ್ರಮ ನಡೆಸಿಕೊಟ್ಟರು. ಬೆಳಿಗ್ಗೆ ಜಡೆ ಮಠದ ಮಹಾಂತ ಸ್ವಾಮೀಜಿ ನೇತೃತ್ವದಲ್ಲಿ ಯೋಗಾಭ್ಯಾಸ ನಡೆಯಿತು. ನಂತರ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಪ್ರಸಾದ ವ್ಯವಸ್ಥೆ ನಡೆಯಿತು. ಶಿವಸಂಚಾರದ ಕಲಾವಿದರು ವಚನಗೀತೆಗಳನ್ನು ಹಾಡಿದರು.

ವಚನ ಕಮ್ಮಟದಲ್ಲಿ ಇಂದು

ಗೋಷ್ಠಿ 14: ಕರ್ಮ ಸಿದ್ಧಾಂತ ಶಿವಮೊಗ್ಗದ ಬಸವ ಮರುಳಸಿದ್ದ ಸ್ವಾಮೀಜಿ ಅವರಿಂದ ಸಮಯ: ಬೆಳಿಗ್ಗೆ 9.30ರಿಂದ 11.30 ಗೋಷ್ಠಿ 15: ವಚನ ಕ್ರಾಂತಿಯಲ್ಲಿ ಮಹಿಳೆಯರ ಸಹಭಾಗಿತ್ವ ಉಪನ್ಯಾಸಕರಾದ ವಿನಯ ಒಕ್ಕುಂದ ಅವರಿಂದ ಬೆಳಿಗ್ಗೆ 11.30ರಿಂದ 12.30 ಗೋಷ್ಠಿ 16: ಲಿಂಗಾಯತ– ವೀರಶೈವ ಕುರಿತಂತೆ ಶಿಬಿರಾರ್ಥಿಗಳಿಂದ ಮುಕ್ತ ಅಭಿಪ್ರಾಯ. ಸಾನ್ನಿಧ್ಯ: ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಸಮಯ: ಮಧ್ಯಾಹ್ನ 12.30ರಿಂದ 2 ಗೋಷ್ಠಿ 17: ಶೂನ್ಯ ಸಂಪಾದನೆಯ ಪರಿಚಯ ಮರಬದ ಮಲ್ಲಿಕಾರ್ಜುನ ಅವರಿಂದ ಮಧ್ಯಾಹ್ನ 3ರಿಂದ 5 ಇಷ್ಟಲಿಂಗದ ವೈಜ್ಞಾನಿಕತೆ (ಪ್ರಾತ್ಯಕ್ಷಿಕೆ) ಬೆಳಗಾವಿ ಅವಿನಾಶ ಕವಿ ಅವರಿಂದ ನಾಟಕ ಪ್ರದರ್ಶನ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಚನೆಯ ‘ಕ್ರಾಂತಿ ಗಂಗೋತ್ರಿ ಅಕ್ಕಿ ನಾಗಲಾಂಬಿಕೆ’ (ಏಕವ್ಯಕ್ತಿ ಪ್ರದರ್ಶನ) ಸ್ಥಳ: ಶಾಮನೂರು ಶಿವಶಂಕರಪ್ಪ ರಂಗಮಂದಿರ ಹೊಸದುರ್ಗ ಸಮಯ: ಸಂಜೆ 7ಕ್ಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT