ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಬುಧಾಬಿಗೆ ವಿಮಾನ ಹೆಚ್ಚಳ: ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಿದ್ಧತೆ

Published 17 ಜೂನ್ 2024, 13:54 IST
Last Updated 17 ಜೂನ್ 2024, 13:54 IST
ಅಕ್ಷರ ಗಾತ್ರ

ಮಂಗಳೂರು: ಬಜಪೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಹಾರಾಟ ನಡೆಸುವ ವಿಮಾನಗಳ ಸಂಖ್ಯೆಯನ್ನು ಜುಲೈ 22ರಿಂದ ಹೆಚ್ಚಿಸಲು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆಯು ಸಿದ್ಧತೆ ನಡೆಸಿದೆ.

ಸದ್ಯಕ್ಕೆ ಮಂಗಳವಾರ, ಗುರುವಾರ, ಶನಿವಾರ ಹಾಗೂ ಭಾನುವಾರ ಸಂಸ್ಥೆಯ 4 ವಿಮಾನಗಳು ಯುಎಇಯ ರಾಜಧಾನಿ ಅಬುಧಾಬಿ ಮತ್ತು ಮಂಗಳೂರು ನಡುವೆ ಹಾರಾಟ ನಡೆಸುತ್ತಿವೆ.

ಈ ಸೇವೆಯ ಜೊತೆಗೆ, ಬೆಂಗಳೂರು– ಮಂಗಳೂರು ನಡುವೆ ನಿತ್ಯ ಹಾರಾಟ ನಡೆಸುವ ವಿಮಾನಗಳ ಸಂಖ್ಯೆ  8ಕ್ಕೆ ಹೆಚ್ಚಳವಾಗಲಿದೆ. ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಮತ್ತು ಇಂಡಿಗೊ ಸಂಸ್ಥೆಗಳು ಈ ಮಾರ್ಗದಲ್ಲಿ ಸಂಚರಿಸುವ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸುತ್ತಿರುವುದು ಹಾಗೂ ಅಬುಧಾಬಿಗೆ ವಿಮಾನ ಹಾರಾಟ ಹೆಚ್ಚಿಸುವುದಕ್ಕಾಗಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕೆಲವು ವಿಮಾನಗಳನ್ನು ಬೆಂಗಳೂರಿನ ಮೂಲಕ ಹಾರಾಟ ನಡೆಸಲಿರುವುದು ಇದಕ್ಕೆ ಕಾರಣ.

ಪ್ರಸ್ತುತ ಇಂಡಿಗೊ (4) ಹಾಗೂ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆಯ ಒಂದು ವಿಮಾನ ಸೇರಿ ನಿತ್ಯ ಐದು ವಿಮಾನಗಳು ಬೆಂಗಳೂರು–‌ ಮಂಗಳೂರು ನಡುವೆ ಸಂಚಾರ ನಡೆಸುತ್ತಿವೆ. ಏರ್‌ ಇಂಡಿಯಾ ಎಕ್ಸ್‌ಪ್ರೆಸ್ ಈ ಮಾರ್ಗದಲ್ಲಿ ದಿನದ ಎರಡನೇ ವಿಮಾನ ಹಾರಾಟವನ್ನು ಜುಲೈ 8ರಿಂದ ಪುನರಾರಂಭಿಸುತ್ತಿದೆ. ಹಾಗಾಗಿ ಬೆಂಗಳೂರು– ಮಂಗಳೂರು ನಡುವೆ ಹಾರಾಟ ನಡೆಸುವ ವಿಮಾನಗಳ ಸಂಖ್ಯೆ 6ಕ್ಕೆ ಹೆಚ್ಚಳವಾಗಲಿದೆ. ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಅಬುಧಾಬಿಗೆ ವಿಮಾನಗಳ ಹಾರಾಟ ಹೆಚ್ಚಿಸುತ್ತಿರುವುದರಿಂದ ಜುಲೈ 22ರ ಬಳಿಕ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಬೆಂಗಳೂರು– ಮಂಗಳೂರು ಮಾರ್ಗದಲ್ಲಿ ವಿಮಾನಗಳ ಸಂಖ್ಯೆ 7ಕ್ಕೆ ಹೆಚ್ಚಲಿದೆ. ಬೆಂಗಳೂರು– ಮಂಗಳೂರು ಮಾರ್ಗದ ಈ ಕಾರ್ಯಾಚರಣೆಯು ಸಂಪೂರ್ಣ ದೇಶಿ ವಿಮಾನಯಾನ ಸೇವೆಯಾಗಿರಲಿದೆ. ಅಬುಧಾಬಿಗೆ ತೆರಳುವ ಪ್ರಯಾಣಿಕರೂ ಮಂಗಳೂರಿನಲ್ಲೇ ವಿಮಾನ ಹತ್ತಲಿದ್ದಾರೆ.

ಆ.1ರಿಂದ ಮಂಗಳೂರು– ಬೆಂಗಳೂರು ನಡುವೆ ಹಾರಾಟ ನಡೆಸುವ ವಿಮಾನಗಳ ಸಂಖ್ಯೆ ವಾರದಲ್ಲಿ ಮೂರುದಿನಗಳಲ್ಲಿ (ಸೋಮವಾರ, ಬುಧವಾರ ಮತ್ತು ಶುಕ್ರವಾರ) 8ಕ್ಕೆ ಹೆಚ್ಚಲಿದೆ. ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಂಸ್ಥೆಯ ದಿನದ ಮೂರನೇ ವಿಮಾನವು ಈ ದಿನಗಳಲ್ಲಿ ಹಾರಾಟ ನಡೆಸಲಿದೆ.  ಇಂಡಿಗೊ ಸಂಸ್ಥೆಯು ಈ ಮಾರ್ಗದಲ್ಲಿ ದಿನದಲ್ಲಿ ಐದು ವಿಮಾನಗಳನ್ನು ಹಾರಾಟ ನಡೆಸಲಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚು ಇರುವುದರಿಂದ ಈ ಕಾರ್ಯಾಚರಣೆಗೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಬೋಯಿಂಗ್ 737 ವಿಮಾನವನ್ನು ಹಾಗೂ ಇಂಡಿಗೊ ಏರ್‌ ಬಸ್‌ ಸರಣಿಯ ವಿಮಾನವನ್ನು ಬಳಸಲಿದೆ. 

ಮುಂಬೈ– ಮಂಗಳೂರು ಮಾರ್ಗದಲ್ಲಿ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಜುಲೈ 16ರ ಬಳಿಕ ಮಧ್ಯಾಹ್ನವೂ ವಿಮಾನ ಹಾರಾಟ ನಡೆಸಲಿದೆ. ಪ್ರಸ್ತುತ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿತ್ಯ ಐದು ವಿಮಾನಗಳು ಮುಂಬೈ ಹಾಗೂ ಬೆಂಗಳೂರಿಗೆ ಸೇವೆ ಒದಗಿಸುತ್ತಿವೆ. ಚೆನ್ನೈ ಮತ್ತು ಹೈದರಾಬಾದ್‌ಗೆ ನಿತ್ಯ ಎರಡು ವಿಮಾನಗಳು ಹಾರಾಟ ನಡೆಸುತ್ತಿವೆ. ದೆಹಲಿಗೆ ನಿತ್ಯ ಒಂದು ವಿಮಾನ ಹಾಗೂ ಪುಣೆಗೆ ವಾರದಲ್ಲಿ ಮೂರು ವಿಮಾನಗಳು ಹಾರಾಟ ನಡೆಸುತ್ತಿವೆ.

ಅಂತರರಾಷ್ಟ್ರೀಯ ಕಾರ್ಯಾಚರಣೆಯಲ್ಲಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ಎರಡು ವಿಮಾನಗಳು ದುಬೈಗೆ ನಿತ್ಯ ಹಾರಾಟ ನಡೆಸುತ್ತಿವೆ, ಇಂಡಿಗೊ ಸಂಸ್ಥೆಯ ನಾಲ್ಕು ವಿಮಾನಗಳು ವಾರದಲ್ಲಿ ಒಮ್ಮೆ ದುಬೈಗೆ ಹಾರಾಟ ನಡೆಸುತ್ತಿವೆ. ದಮಾಮ್‌ಗೆ ವಾರದಲ್ಲಿ ನಾಲ್ಕು, ಮಸ್ಕತ್‌ಗೆ ವಾರದಲ್ಲಿ ಮೂರು ವಿಮಾನಗಳು, ದೋಹಾ ಮತ್ತು ಬಹ‌ರೇನ್‌ಗೆ ವಾರದಲ್ಲಿ ತಲಾ ಎರಡು ವಿಮಾನಗಳು,  ಕುವೈತ್‌, ಜೆದ್ದಾಕ್ಕೆ ವಾರದಲ್ಲಿ ಒಂದು ವಿಮಾನ ಹಾರಾಟ ನಡೆಸುತ್ತಿದೆ. ಇವೆಲ್ಲವೂ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನ ವಿಮಾನಗಳು. ಈ ಸಂಸ್ಥೆಯು ತಿರುಚಿರಾಪಳ್ಳಿಗೂ ವಾರದಲ್ಲಿ ಒಂದು ದಿನ ವಿಮಾನ ಹಾರಾಟ ನಡೆಸುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT