ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಎರಡೂ ಪಕ್ಷಗಳ ಜನಪ್ರತಿನಿಧಿಗಳು, ಮುಖಂಡರು ಭಾಗಿ
Published : 3 ಅಕ್ಟೋಬರ್ 2024, 14:05 IST
Last Updated : 3 ಅಕ್ಟೋಬರ್ 2024, 14:05 IST
ಫಾಲೋ ಮಾಡಿ
Comments

ಮಂಗಳೂರು: ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಗುರುವಾರ ಬಿಜೆಪಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಅವರು ಸಂಸದ ಕ್ಯಾ. ಬ್ರಿಜೇಶ್ ಚೌಟ, ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಕಿಶೋರ್ ಕುಮಾರ್, ಮುಖಂಡರಾದ ಪ್ರಮೋದ ಮಧ್ವರಾಜ್ ಜೊತೆ ತೆರಳಿ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಪೂರ್ವ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅಭ್ಯರ್ಥಿ ಕಿಶೋರ್ ಕುಮಾರ್, ‘ನನ್ನಂತಹ ಸಾಮಾನ್ಯ ಕಾರ್ಯಕರ್ತನಿಗೆ ಇಂತಹ ಅವಕಾಶ ಸಿಗುವುದು ಬಿಜೆಪಿಯಲ್ಲಿ ಮಾತ್ರ ಸಾಧ್ಯ.  ಪಕ್ಷಕ್ಕೆ ಕಪ್ಪುಚುಕ್ಕಿ ಬರದಂತೆ ಜವಾಬ್ದಾರಿ ನಿರ್ವಹಿಸುತ್ತೇನೆ. ನನ್ನ ತಂದೆ ರಾಮಯ್ಯ ಭಂಡಾರಿ ಜನಸಂಘದಲ್ಲಿ ಕೆಲಸ ಮಾಡಿದವರು. ಚಿಕ್ಕಪ್ಪ ಸೇರಿದಂತೆ ಕುಟುಂಬದ ಅನೇಕರು ಆರ್‌ಎಸ್‌ಎಸ್ ಕಾರ್ಯಕರ್ತರಾಗಿ ದುಡಿದವರು’ ಎಂದರು.

ಸಂಸದ ಬ್ರಿಜೇಶ್ ಚೌಟ ಮಾತನಾಡಿ,‘ಪ್ರತಿಯೊಬ್ಬ ಕಾರ್ಯಕರ್ತರು ತಾವೇ ಅಭ್ಯರ್ಥಿ ಎಂದು ಭಾವಿಸಿ ಕೆಲಸ ಮಾಡಬೇಕು. ಸಣ್ಣ ಸಮುದಾಯವಾಗಿರುವ ಸವಿತಾ ಸಮಾಜದ ವ್ಯಕ್ತಿಯೊಬ್ಬರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ವಿಭಿನ್ನ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ’ ಎಂದರು.

‘ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಕಿಶೋರ್ ಗೆಲುವು ಕಠಿಣವಲ್ಲ, ಆದರೆ, ಮತಗಳ ಅಂತರವನ್ನು ಇನ್ನಷ್ಟು ಹೆಚ್ಚಿಸಬೇಕು’ ಎಂದು ಸತೀಶ್ ಕುಂಪಲ ಹೇಳಿದರು.

ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಕಿಶೋರ್ ಕುಮಾರ್ ಮಾತನಾಡಿ, ‘ಪ್ರತಿ ಮಹಾಶಕ್ತಿ ಕೇಂದ್ರದಲ್ಲಿ ಸಭೆ ನಡೆಸುವ ಮೂಲಕ ಪ್ರತಿಯೊಬ್ಬ ಮತದಾರನನ್ನು ಭೇಟಿ ಮಾಡಲು ಯೋಜನೆ ರೂಪಿಸಲಾಗಿದೆ’ ಎಂದರು.

ಶಾಸಕರಾದ ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಭಾಗೀರಥಿ ಮುರುಳ್ಯ, ಯಶ್‌ಪಾಲ್ ಸುವರ್ಣ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಜೆಡಿಎಸ್ ಮುಖಂಡ ಅಕ್ಷಿತ್ ಸುವರ್ಣ ಇದ್ದರು.

ನಾಮಪತ್ರ ಸಲ್ಲಿಕೆಗೆ ತೆರಳುವ ಪೂರ್ವದಲ್ಲಿ ಪಕ್ಷದ ಕಚೇರಿ ಎದುರು ಕಾರ್ಯಕರ್ತರು ಹಾರ ಹಾಕಿ ಅಭ್ಯರ್ಥಿಯನ್ನು ಅಭಿನಂದಿಸಿದರು.‌ ಚೆಂಡೆ ವಾದ್ಯ, ಕಾರ್ಯಕರ್ತರ ಜಯಘೋಷ ಮೊಳಗಿದವು.

ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ ನಾಮಪತ್ರ ಸಲ್ಲಿಕೆಗೆ ತೆರಳುವ ಪೂರ್ವದಲ್ಲಿ ಕಾಂಗ್ರೆಸ್ ಮುಖಂಡ ರಮಾನಾಥ ರೈ ಆಶೀರ್ವಾದ ಪಡೆದರು. ಜಯಪ್ರಕಾಶ್ ಹೆಗ್ಡೆ ಐವನ್ ಡಿಸೋಜ ಮಂಜುನಾಥ್ ಭಂಡಾರಿ ಹರೀಶ್ ಕುಮಾರ್ ಹಾಜರಿದ್ದರು  : ಪ್ರಜಾವಾಣಿ ಚಿತ್ರ
ಕಾಂಗ್ರೆಸ್‌ ಅಭ್ಯರ್ಥಿ ರಾಜು ಪೂಜಾರಿ ನಾಮಪತ್ರ ಸಲ್ಲಿಕೆಗೆ ತೆರಳುವ ಪೂರ್ವದಲ್ಲಿ ಕಾಂಗ್ರೆಸ್ ಮುಖಂಡ ರಮಾನಾಥ ರೈ ಆಶೀರ್ವಾದ ಪಡೆದರು. ಜಯಪ್ರಕಾಶ್ ಹೆಗ್ಡೆ ಐವನ್ ಡಿಸೋಜ ಮಂಜುನಾಥ್ ಭಂಡಾರಿ ಹರೀಶ್ ಕುಮಾರ್ ಹಾಜರಿದ್ದರು  : ಪ್ರಜಾವಾಣಿ ಚಿತ್ರ

‘ಮತದಾರರು ಬೆಂಬಲಿಸುವ ಭರವಸೆ’

ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಡು‍ಪಿ ಜಿಲ್ಲೆ ಬೈಂದೂರಿನ ರಾಜು ಪೂಜಾರಿ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 12.30ರ ವೇಳೆಗೆ ಕಾಂಗ್ರೆಸ್ ಕಚೇರಿಯಿಂದ ನೇರವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದ ರಾಜು ಪೂಜಾರಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ‘ಗ್ರಾಮ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡಿರುವ ಅನುಭವ ಇದೆ. ಸ್ಥಳೀಯ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಅರಿವಿದೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ನನ್ನ ಕಾರ್ಯವೈಖರಿ ಬಗ್ಗೆ ಪಂಚಾಯತ್ ರಾಜ್ ವ್ಯವಸ್ಥೆಯ ಕುರಿತು ನನಗಿರುವ ಜ್ಞಾನದ ಬಗ್ಗೆ ಗೊತ್ತಿದೆ. ಹೀಗಾಗಿ ಮತದಾರರು ನನ್ನನ್ನು ಬೆಂಬಲಿಸುವ ವಿಶ್ವಾಸ ಇದೆ’ ಎಂದರು. ‘30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ‌ ವಿವಿಧ ಜವಾಬ್ದಾರಿ ನಿರ್ವಹಿಸಿದ್ದೇನೆ. ಪಕ್ಷ ನಿಷ್ಠೆಯನ್ನು ಗುರುತಿಸಿ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಿದೆ’ ಎಂದು ಹೇಳಿದರು. ‘ಪರಿಷತ್ ಸದಸ್ಯನಾಗಿ ಆಯ್ಕೆಯಾದರೆ ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳ ಬಗ್ಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೇನೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಬಾಡಿಗೆ ಕಟ್ಟಡದಲ್ಲಿತ್ತು. ನನ್ನ ಅವಧಿಯಲ್ಲಿ ಅದಕ್ಕೆ ಸ್ವಂತ ಕಟ್ಟಡ ದೊರೆಯುವಲ್ಲಿ ಶ್ರಮಿಸಿದ್ದೇನೆ. ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಕಂಪ್ಯೂಟರೀಕರಣ ನನ್ನ ಅವಧಿಯಲ್ಲಿ ಆಗಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್ ಉಡುಪಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಉದಯಕುಮಾರ್ ಶೆಟ್ಟಿ ಮುನಿಯಾಲು ಇದ್ದರು. ನಾಮಪತ್ರ ಸಲ್ಲಿಕೆಯ ವೇಳೆ ವಿಧಾನ‌ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಐವನ್ ಡಿಸೋಜ ಕಾಂಗ್ರೆಸ್ ಮುಖಂಡರಾದ ರಮಾನಾಥ ರೈ ಜಯಪ್ರಕಾಶ್ ಹೆಗ್ಡೆ ಜೊತೆಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT