ಸೋಮವಾರ, 1 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಿಂದೂ ಬಹುಸಂಖ್ಯಾತರಿದ್ದರೆ ಮಾತ್ರ ಪ್ರಜಾಪ್ರಭುತ್ವ

‘ತುರ್ತು ಪರಿಸ್ಥಿತಿ- ಸಂವಿಧಾನಕ್ಕೆ ಮಾಡಿದ ಅಪಚಾರ' ಕಾರ್ಯಕ್ರಮದಲ್ಲಿ ಪ್ರತಾಪ ಸಿಂಹ
Published 26 ಜೂನ್ 2024, 5:29 IST
Last Updated 26 ಜೂನ್ 2024, 5:29 IST
ಅಕ್ಷರ ಗಾತ್ರ

ಮಂಗಳೂರು: ‘ಹಿಂದೂಗಳು ಬಹುಸಂಖ್ಯಾತರಾಗಿರುವವರೆಗೆ ಮಾತ್ರ ಈ ದೇಶದಲ್ಲಿ ಪ್ರಜಾಪ್ರಭುತ್ವ ಇರುತ್ತದೆ’ ಎಂದು ಬಿಜೆಪಿ ಮುಖಂಡ ಪ್ರತಾಪ ಸಿಂಹ ಹೇಳಿದರು.

ಸಾಮಾಜಿಕ‌ ನ್ಯಾಯಕ್ಕಾಗಿ‌ ನಾಗರಿಕರು ಸಂಘಟನೆಯ ಅಶ್ರಯದಲ್ಲಿ ಇಲ್ಲಿ ಮಂಗಳವಾರ ಎರ್ಪಡಿಸಿದ್ದ 'ತುರ್ತು ಪರಿಸ್ಥಿತಿ- ಸಂವಿಧಾನಕ್ಕೆ ಮಾಡಿದ ಅಪಚಾರ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಎಷ್ಟು ಇಸ್ಲಾಮಿಕ್ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಕ್ರೈಸ್ತರ ರಾಷ್ಟ್ರಗಳಲ್ಲಿ ಕ್ರೈಸ್ತೇತರರು ಸಮಾನ ಹಕ್ಕು ಕೇಳಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದರು. 

‘ದೇಶದ ಪ್ರಜಾಪ್ರಭುತ್ವವನ್ನು ಕರಿ ನೆರಳಾಗಿ ಕಾಡಿದ ತುರ್ತು ಪರಿಸ್ಥಿತಿಗೆ 2025ರ ಜೂನ್‌ನಲ್ಲಿ 50 ವರ್ಷ ತುಂಬಲಿದೆ. ಆರ್‌ಎಸ್‌ಎಸ್‌ ಸ್ಥಾಪನೆಯಾಗಿಯೂ ಮುಂದಿನ ವರ್ಷ 100 ವರ್ಷ ತುಂಬಲಿದೆ. ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ ಕಾಪಾಡಿದ್ದು ನಾವು ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಕಾಲ ಸನ್ನಿಹಿತವಾಗಿದೆ’ ಎಂದರು.

‘ಬಾಬಾ ಸಾಹೇಬ್ ಅಂಬೇಡ್ಕರ್‌ ರಚಿಸಿರುವ ಸಂವಿಧಾನವನ್ನು ಉಳಿಸಲು 1975ರಲ್ಲಿ ಆರಂಭವಾದ ಹೋರಾಟ 21 ತಿಂಗಳು ಮುಂದುವರಿಯಿತು. 22 ಮಂದಿಯ ಬಲಿದಾನ ಪಡೆದ ಹೋರಾಟದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ (3,254 ) ಜೈಲು ಸೇರಿದ್ದು ಆರ್‌ಎಸ್‌ಎಸ್‌ ಸ್ವಯಂಸೇವಕರು. ಕಾಂಗ್ರೆಸ್‌ನವರು ಒಬ್ಬರೂ ಜೈಲು ಸೇರಿಲ್ಲ’ ಎಂದರು.

‘ನೆಹರೂ ಕುಟುಂಬದ ಆಳ್ವಿಕೆಯ ಅವಧಿಯಲ್ಲಿ ಸಂವಿಧಾನವನ್ನು 58 ಸಲ ತಿದ್ದುಪಡಿ ಮಾಡಲಾಗಿದೆ. ನೆಹರೂ ಆಳ್ವಿಕೆಯಲ್ಲಿ 16, ಇಂದಿರಾ ಗಾಂಧಿ 32 ಹಾಗೂ ರಾಜೀವ ಗಾಂಧಿ 10, ಲಾಲ್‌ಬಹದ್ದೂರ್ ಶಾಸ್ತ್ರಿ ಒಮ್ಮೆ, ನರಸಿಂಹರಾವ್‌ 10, ಮನಮೋಹನ್ ಸಿಂಗ್‌ 6 ಸಲ, ಮೊರಾರ್ಜಿ ದೇಸಾಯಿ ಎರಡು , ಚಂದ್ರಶೇಖರ್‌ ಒಮ್ಮೆ, ವಾಜಪೇಯಿ 14 ಹಾಗೂ ನರೇಂದ್ರ ಮೋದಿ 8 ಸಲ ತಿದ್ದುಪಡಿ ತಂದಿದ್ದಾರೆ. ಇಂದಿರಾ ಗಾಂಧಿ ಅಧಿಕಾರ ಉಳಿಸಿಕೊಳ್ಳಲು ತಿದ್ದುಪಡಿ ತಂದರು. ಅಂಬೇಡ್ಕರ್‌ ರೂಪಿಸಿದ ಸಂವಿಧಾನದಲ್ಲಿ ಇಲ್ಲದ ಜಾತ್ಯತೀತ ಪದವನ್ನು ಸೇರಿಸಿದರು’ ಎಂದರು.  

ಸಕಲೇಶಪುರದ ಶಾಸಕ ಸಿಮೆಂಟ್ ಮಂಜು, ‘ಸಂವಿಧಾನ ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್‌ ಹುಯಿಲೆಬ್ಬಿಸುತ್ತಿದೆ. ಆದರೆ, ಅಂಬೇಡ್ಕರ್ ಆಶಯ ಮಣ್ಣುಪಾಲು ಮಾಡಿದ್ದು ಅದೇ ಪಕ್ಷ’ ಎಂದರು.

ಉದ್ಯಮಿ ಮಹಾಬಲ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಸುಧೀರ್‌ ಶೆಟ್ಟಿ ಕಣ್ಣೂರು ಸ್ವಾಗತಿಸಿದರು. ‌ತುರ್ತು ಪರಿಸ್ಥಿತಿ  ಹೋರಾಟದಲ್ಲಿ ಭಾಗಿಯಾಗಿದ್ದ ಮಟ್ಟಾರು ವಿಠಲ ಕಿಣಿ, ಪ್ರಭಾ ಕಾಮತ್ ಎಚ್‌., ಅರುಣಾ ನಾಗರಾಜ್ ಮೊದಲಾದವರನ್ನು ಅಭಿನಂದಿಸಲಾಯಿತು.

ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಸಿಗದ ಪಿಂಚಣಿ

ತುರ್ತು ಪರಿಸ್ಥಿತಿ ಹೋರಾಟಗಾರರಿಗೆ ಪಿಂಚಣಿ ನೀಡುವುದಾಗಿ ಬಿಜೆಪಿ 2028ರ ವಿಧಾನಸಭಾ ಚುನಾವಣೆಯ ವೇಳೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ  ಈಡೇರಿಲ್ಲ ನಿಜ. ಪ್ರವಾಹ ಕೋವಿಡ್‌ ಕಾರಣಗಳಿಂದಾಗಿ ಪ್ರಣಾಳಿಕೆಯ  ಕೆಲವು ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಮುಂದಿನ ಸಲ ಬಿಜೆಪಿ ರಾಜ್ಯದಲ್ಲೂ ಅಧಿಕಾರಕ್ಕೆ ಬರಲಿದ್ದು ಈ ಭರವಸೆಯನ್ನು ಖಂ‌ಡಿತಾ ಈಡೇರಿಸಲಿದೆ ಎಂದು ಪ್ರತಾಪಸಿಂಹ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT