ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೋಳಿಯಾರ್‌ಗೆ ಹೊರಗಿನವರು ಬಂದು ವಾತಾವರಣ ಕೆಡಿಸಬೇಡಿ: ಸ್ಪೀಕರ್ ಖಾದರ್

Published 14 ಜೂನ್ 2024, 6:18 IST
Last Updated 14 ಜೂನ್ 2024, 6:18 IST
ಅಕ್ಷರ ಗಾತ್ರ

ಮಂಗಳೂರು: ಬೋಳಿಯಾರ್ ಊರಿನ ಜನರು ಪ್ರೀತಿ, ಸೌಹಾರ್ದದಿಂದ ಇದ್ದಾರೆ. ಹೊರಗಿನವರು ಇಲ್ಲಿ ಬಂದು ವಾತಾವರಣ ಕೆಡಿಸಬೇಡಿ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಸ್ಪೀಕರ್ ಯು.ಟಿ. ಖಾದರ್ ಹೇಳಿದರು.

ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೋಳಿಯರ್‌ನಲ್ಲಿ ಇತ್ತೀಚೆಗೆ ನಡೆದ ಇಬ್ಬರು ಬಿಜೆಪಿ ಕಾರ್ಯಕರ್ತರ ಮೇಲಿನ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು‌.

'ನಿಜವಾದ ದೇಶಪ್ರೇಮ ಇದ್ದರೆ ಬಾಯಿ ಮುಚ್ಚಿಕೊಂಡು ಇರಬೇಕು. ದೇಶಪ್ರೇಮ ಇದ್ದರೆ ಅಲ್ಲಿನ ಜನರು ನೆಮ್ಮದಿಯಿಂದ ಇರಲು ಬಿಡಿ ಎಂದು ಕಳಕಳಿಯ ಮನವಿ ಮಾಡುತ್ತೇನೆ' ಎಂದರು.

ಅಲ್ಲಿನ ಜನರು ಸಹೋದರತೆಯಿಂದ ಇದ್ದಾರೆ. ಅನಗತ್ಯವಾಗಿ ಸಮಸ್ಯೆ ಬಿಗಡಾಯಿಸಬೇಡಿ. ಅಲ್ಲಿ ವಾಸ್ತವದಲ್ಲಿ ಏನಾಗಿದೆ ಎಂಬುದು ಸ್ಥಳದಲ್ಲಿ ಇದ್ದವರಿಗೆ, ಸ್ಥಳೀಯರಿಗೆ ಮಾತ್ರ ಗೊತ್ತಿದೆ. ಮೂರನೇ ವ್ಯಕ್ತಿಗಳಾಗಿ ನಾವು ನಿರ್ಣಯಕ್ಕೆ ಬರುವುದು ಸರಿಯಲ್ಲ. ಈ ರೀತಿ ಮಾಡಿದರೆ ಚುನಾವಣೆಯಲ್ಲಿ ಮತ ಸಿಗುತ್ತದೆ ಎಂಬ ಭ್ರಮೆ ಬೇಡ. ಈ ರೀತಿ ಮಾಡುವುದರಿಂದ ಒಂದು ವೋಟ್ ಕೂಡ ಸಿಗುವುದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಪ್ರಯತ್ನ ಪಟ್ಟ 'ಆ ಎರಡು ಪಕ್ಷಗಳು' ಈಗ ಸಮಸ್ಯೆ ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಬಿಜೆಪಿ ಮತ್ತು ಎಸ್ ಡಿಪಿಐ ಪಕ್ಷಗಳ ಹೆಸರು ಉಲ್ಲೇಖಿಸದೆ ಹೇಳಿದರು.

ಪೊಲೀಸರು ಎಲ್ಲ ರೀತಿಯಲ್ಲಿ ತನಿಖೆ ನಡೆಸುತ್ತಿದ್ದು, ಕ್ರಮ ಕೈಗೊಳ್ಳುತ್ತಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT